KPSC: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮುಂದೂಡಿಕೆ
ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಗ್ರೂಪ್ A ಮತ್ತು B ನ 384 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ. ಮಾರ್ಚ್ 28-ಏಪ್ರಿಲ್ 2 ರಂದು ನಡೆಯಬೇಕಿದ್ದ ಪರೀಕ್ಷೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. ಹೊಸ ದಿನಾಂಕವನ್ನು ಕೆಪಿಎಸ್ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

ಬೆಂಗಳೂರು, ಮಾರ್ಚ್ 21: ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission) 2023-24ನೇ ಸಾಲಿನ ಗೆಜೆಟ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ (Group A & B ) ವೃಂದದ 384 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ. ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ನಡೆಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ತನ್ನ ಅಧಿಸೂಚನೆಯಲ್ಲಿ ತಿಳಿಸಿತ್ತು. ಆದರೆ ಇದೀಗ ಕಾರಣಾಂತರಗಳಿಂದ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿರುವುದಾಗಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.
ಪ್ರಕಟಣೆಯಲ್ಲೇನಿದೆ?
ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಹುದ್ದೆಗಳಿಗೆ ಮುಖ್ಯ ಪರೀಕ್ಷೆಯ ಫೆಬ್ರವರಿ 13ರ ಅಧಿಸೂಚನೆ ಪ್ರಕಾರ ಮಾರ್ಚ್ 28, 29 ಮತ್ತು ಏಪ್ರಿಲ್ 1, 2ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಚ್ ಸೈಟ್ನಲ್ಲಿ ಹೊಸ ದಿನಾಂಕವನ್ನು ಪ್ರಕಟಿಸುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ
ಇನ್ನು ಕೆಎಎಸ್ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮಾಡಿದ ಎಡವಟ್ಟು ಸಂಬಂಧ ಅಭ್ಯರ್ಥಿಗಳ ಅಸಮಾಧಾನ ಆಕ್ರೋಶ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಶ್ನೆ ಪತ್ರಿಕೆ ಅನುವಾದದಲ್ಲಿ ವಿವಾದಕ್ಕೀಡಾಗಿರುವ ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ಇತ್ತೀಚೆಗೆ ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದರು. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದಿದ್ದರು.
ಆಗಸ್ಟ್ 27 ಮತ್ತು ಡಿಸೆಂಬರ್ 29 ರಂದು KPSC ನಡೆಸಿದ KAS ಪರೀಕ್ಷೆ ಯಲ್ಲಿನ ಯಡವಟ್ಟು ಸಂಬಂಧ ವಿದ್ಯಾರ್ಥಿಗಳು ಮತ್ತು ಕೆಪಿಎಸ್ಸಿ ಆಡಳಿತ ಮಂಡಳಿ ನಡುವಿನ ಗುದ್ದಾಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳೇ ಕಾಣುತ್ತಿಲ್ಲ. ಈ ಮಧ್ಯೆ ಪರೀಕ್ಷಾರ್ಥಿಗಳ ಪರವಾಗಿ ಕರವೇ ಕೂಡ ಸರ್ಕಾರ ಮತ್ತು ಕೆಪಿಎಸ್ಸಿಯನ್ನ ಎಚ್ಚರಿಸುವ ಕೆಲಸ ಕೂಡ ಮಾಡಿತ್ತು. ಆದರೆ ಸರ್ಕಾರ ಮಾತ್ರ ಕ್ಯಾರೆ ಅಂದಿರಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ್ದ ವಿದ್ಯಾರ್ಥಿಗಳು ಮತ್ತು ಕರವೇ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: 384 ಕೆಎಎಸ್ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ನಿಗದಿ: ಒಂದೇ ದಿನ ಎರಡು ಪೇಪರ್
ಕೆಎಎಸ್ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮಾಡಿದ ಯಡವಟ್ಟಿ ಬಗ್ಗೆ ಸರ್ಕಾರದ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗದ ಕಾರಣ ವಿಭಿನ್ನವಾಗಿ ಸರ್ಕಾರದ ವಿರುದ್ಧ ಸಿಡಿದೆದ್ದಿರು. ಗಾಂಧಿನಗರದ ಕರವೇ ಕೇಂದ್ರ ಕಛೇರಿಯಲ್ಲಿ ರಕ್ತಪತ್ರ ಚಳುವಳಿಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ಚಾಲನೆ ನೀಡಿದ್ದರು. ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಕರವೇ ಕಾರ್ಯಕರ್ತರು ಚಳುವಳಿಯಲ್ಲಿ ಭಾಗಿಯಾಗಿ ಮುಖ್ಯಮಂತ್ರಿಗಳಿಗೆ ತಮ್ಮ ರಕ್ತದಲ್ಲಿ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಜೊತೆಗೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.