
ಚಂಡೀಗಢ: ವೈದ್ಯಕೀಯ ವೃತ್ತಿ ಎಂದರೆ ಅದೊಂದು ಪವಿತ್ರ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಕೇವಲ ‘ಹಣ ಮಾಡುವ ಯಂತ್ರ’ಗಳಂತೆ ನೋಡುತ್ತಿವೆ ಎಂಬ ಕಹಿಸತ್ಯವೊಂದನ್ನು ಯುವ ವೈದ್ಯೆಯೊಬ್ಬರು ಧೈರ್ಯವಾಗಿ ಬಯಲಿಗೆಳೆದಿದ್ದಾರೆ. ಚಂಡೀಗಢದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಘಟನೆ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಯುವ ವೈದ್ಯೆ ಡಾ. ಪ್ರಭ್ಲೀನ್ ಕೌರ್ ಅವರು ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯೆಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯ ಆಡಳಿತ ಮಂಡಳಿಯ ಅಮಾನವೀಯ ಧೋರಣೆಯನ್ನು ಕಂಡು ಬೆಚ್ಚಿಬಿದ್ದ ಅವರು, ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಆಸ್ಪತ್ರೆಯ ವಿರುದ್ಧ ಡಾ. ಪ್ರಭ್ಲೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಸ್ಪತ್ರೆಯ ‘ಕಲೆಕ್ಷನ್’ ದಂಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೂ ಪ್ರಾಥಮಿಕ ಚಿಕಿತ್ಸೆ ನೀಡುವ ಬದಲು, ಹಣ ಸುಲಿಗೆ ಉದ್ದೇಶದಿಂದ ನೇರವಾಗಿ ಐಸಿಯು (ICU) ಗೆ ದಾಖಲಿಸಲಾಗುತ್ತಿದೆ. ಆಸ್ಪತ್ರೆಯ ಆದಾಯವನ್ನು ಹೆಚ್ಚಿಸಲು ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ದುಬಾರಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಈ ಸಂಪೂರ್ಣ ದಂಧೆಯು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ನೇರ ನಿಯಂತ್ರಣದಲ್ಲಿ ನಡೆಯುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
🚨 YOUNG DOCTOR : I am quitting my job.
“I was asked by my female boss to admit nearly every patient, even when it was not required” 😳
“ICU stays were stretched to increase hospital bills”
“No salary is bigger than ethics & patient safety” pic.twitter.com/WyF1inwCUl
— News Algebra (@NewsAlgebraIND) April 6, 2026
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಡಿಯೋದಲ್ಲಿ ಭಾವುಕರಾಗಿಯೇ ಮಾತನಾಡಿದ ಡಾ. ಪ್ರಭ್ಲೀನ್, “ನನಗೆ ಸಂಬಳ ಅಥವಾ ದೊಡ್ಡ ಹುದ್ದೆಗಿಂತ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ವೃತ್ತಿಯ ನೈತಿಕತೆಯೇ ಮುಖ್ಯ. ರೋಗಿಗಳನ್ನು ಲೂಟಿ ಮಾಡುವ ಇಂತಹ ವ್ಯವಸ್ಥೆಯಲ್ಲಿ ನಾನು ಭಾಗಿಯಾಗಲಾರೆ,” ಎಂದು ಹೇಳಿದ್ದಾರೆ.
ಡಾ. ಪ್ರಭ್ಲೀನ್ ಕೌರ್ ಅವರ ಈ ಧೈರ್ಯದ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ನೆಟ್ಟಿಗರು ಆಸ್ಪತ್ರೆಯ ಹೆಸರನ್ನು ಬಹಿರಂಗಪಡಿಸಿ ಅದರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ವೈದ್ಯಕೀಯ ಕ್ಷೇತ್ರಕ್ಕೆ ಇಂತಹ ಪ್ರಾಮಾಣಿಕ ವೈದ್ಯರ ಅಗತ್ಯವಿದೆ” ಎಂದು ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ