Siddharth: ಸೈನಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿದ್ಧಾರ್ಥ್ಗೆ ಸಂಕಷ್ಟ; ಪ್ರಕರಣ ದಾಖಲಿಸಿದ ಹೈದರಾಬಾದ್ ಪೊಲೀಸರು
Saina Nehwal: ನಟ ಸಿದ್ಧಾರ್ಥ್ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕುರಿತು ಕೀಳು ಮಟ್ಟದ ಟ್ವೀಟ್ ಮಾಡಿದ ಪ್ರಕರಣ ಅವರು ಕ್ಷಮೆ ಕೇಳಿದ ನಂತರ ತಣ್ಣಗಾಗಿತ್ತು. ಇದೀಗ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (Saina Nehwal) ಟ್ವೀಟ್ಗೆ ಪ್ರತಿಕ್ರಿಯಿಸುವ ಭರದಲ್ಲಿ ಅವಹೇಳನಕಾರಿ ಟ್ವೀಟ್ ಮಾಡಿದ್ದ ಕಾಲಿವುಡ್ ನಟ ಸಿದ್ಧಾರ್ಥ್ಗೆ (Siddharth) ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಇಂದು ಹೈದರಾಬಾದ್ ಪೊಲೀಸರು ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಸೈನಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಹೈದರಾಬಾದ್ನಲ್ಲಿ ಮಹಿಳೆಯೋರ್ವರು ಸಿದ್ಧಾರ್ಥ್ ಹೇಳಿಕೆಯ ವಿರುದ್ಧ ದೂರು ನೀಡಿದ್ದರು. ಮಹಿಳೆಯರ ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ಹೀಗೆ ಹೇಳಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇದೀಗ ಸಿದ್ಧಾರ್ಥ್ ವಿರುದ್ಧ ಐಪಿಸಿ ಸೆಕ್ಷನ್ 509ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಐಟಿ ಆಕ್ಟ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಹೇಳಿಕೆಗೆ ಕ್ಷಮೆ ಕೋರಿದ್ದ ಸಿದ್ಧಾರ್ಥ್: ಸೈನಾ ಪಂಜಾಬ್ನಲ್ಲಿ ನಬಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ಪ್ರಕರಣದ ಕುರಿತಂತೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅದನ್ನು ಟೀಕಿಸುವ ಭರದಲ್ಲಿ ಸಿದ್ಧಾರ್ಥ್ ಆಕ್ಷೇಪಾರ್ಹ ಪದ ಬಳಸಿದ್ದರು. ತಮ್ಮ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದರ ಕುರಿತು ನಂತರ ಸಿದ್ಧಾರ್ಥ್ ಕ್ಷಮೆ ಕೋರಿದ್ದರು. ‘ಡಿಯರ್ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಮತ್ತು ಸಿಟ್ಟು ಕೂಡ ನಾನು ಬಳಸಿದ ಪದಗಳು ಹಾಗೂ ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್ ಅಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್ ತಮ್ಮ ಪತ್ರದಲ್ಲಿ ತಿಳಿಸಿದ್ದರು. ಅಲ್ಲದೇ ತಾವೂ ಸ್ತ್ರೀವಾದಿ ಎಂದಿದ್ದ ಸಿದ್ಧಾರ್ಥ್, ಮಹಿಳೆಯರಿಗೆ ಅವಾಚ್ಯವಾಗಿ ಏನನ್ನೂ ಹೇಳುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯಿಸಿದ್ದ ಸೈನಾ: ‘ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಓರ್ವ ಮಹಿಳೆಯನ್ನು ಅವರು ಈ ರೀತಿ ಟಾರ್ಗೆಟ್ ಮಾಡಬಾರದು. ಆದರೆ ಇಂಥ ವಿಚಾರಗಳಿಂದ ನಾನು ವಿಚಲಿತ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸೈನಾ ನೆಹ್ವಾಲ್ ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ:
‘ಸಿದ್ದಾರ್ಥ್ಗೆ ದೇವರು ಒಳ್ಳೆಯದು ಮಾಡಲಿ’; ಕ್ಷಮೆ ಬಳಿಕ ಪ್ರತಿಕ್ರಿಯಿಸಿದ ಸೈನಾ ನೆಹ್ವಾಲ್