
ರಜನೀಕಾಂತ್ (Rajinikanth), ಭಾರತದ ಅತಿ ದೊಡ್ಡ ಸೂಪರ್ ಸ್ಟಾರ್. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತೀಯ ನಟ ಎಂದರೆ ಅದು ರಜನೀಕಾಂತ್. ಅವರಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ಬಾಲಿವುಡ್ ಸ್ಟಾರ್ ನಟರುಗಳಿಗೂ ಇಲ್ಲ. ರಜನೀಕಾಂತ್ಗೆ ಈಗ ವಯಸ್ಸಾಗಿದೆ ಹಾಗೆಂದು ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ವಯಸ್ಸಾದಷ್ಟೂ ಅವರ ಸ್ಟಾರ್ಡಮ್ ಹೆಚ್ಚುತ್ತಲೇ ಇದೆ. ಅಭಿಮಾನಿಗಳು ಒಂದಲ್ಲ ಒಂದು ರೀತಿ ತಮ್ಮ ಅಭಿಮಾನ ತೋರಿಸುತ್ತಲೇ ಇದ್ದಾರೆ. ಯುವತಿಯೊಬ್ಬರು ರಜನೀ ಮೇಲಿನ ಅಭಿಮಾನವನ್ನು ತೋರಿಸಿರುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆ ಮಹಿಳೆ ಮಾಡಿದ್ದೇನು?
ರಮ್ಯಾ ರಾಮನ್ ಹೆಸರಿನ ಯುವತಿ ಟ್ವಿಟ್ಟರ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗಷ್ಟೆ ಬಿಎಂಡಬ್ಲು ಬ್ರಾಂಡಿನ ಐಶಾರಾಮಿ ಕಾರು ಖರೀದಿ ಮಾಡಿದರಂತೆ. ಆ ಕಾರಿಗೆ ಹಾಕಿಸಿರುವ ನಂಬರ್ನದ್ದು ಬಲು ವಿಶೇಷ. ರಜನೀಕಾಂತ್ ಅವರು ತಮ್ಮ ಮೊದಲ ಕಾರಿಗೆ ಹಾಕಿಸಿದ್ದ ಸಂಖ್ಯೆಯೆನ್ನೇ ಆ ಯುವತಿ ಈಗ ತಮ್ಮ ಹೊಸ ಕಾರಿಗೆ ಹಾಕಿಸಿದ್ದಾರೆ. ಅದಕ್ಕೆ ಕಾರಣವೂ ಇದೆ.
ರಜನೀಕಾಂತ್ ಅವರು ಚಿತ್ರರಂಗದಲ್ಲಿ ಅವಮಾನ ಎದುರಿಸಿ ತಮ್ಮ ಮೊದಲ ಕಾರು ಖರೀದಿ ಮಾಡಿದ್ದರು. ಅದೂ ಇಟಾಲಿಯನ್ ಫಿಯೇಟ್ ವಿದೇಶಿ ಕಾರು ಖರೀದಿ ಮಾಡಿದ್ದರು. ಆ ಕಾರಿಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಡ್ರೈವರ್ ಆಗಿ ಇರಿಸಿಕೊಂಡಿದ್ದರು. ಅವಮಾನ ಎದುರಿಸಿ ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದ ಕುಂಬಂಪಾಕಂ ರಸ್ತೆಯಲ್ಲಿ ತಮ್ಮ ಹೊಸ ಕಾರಿನಲ್ಲಿ ಜುಮ್ಮೆಂದು ಸುತ್ತಿದ್ದರು. ಆ ಘಟನೆಯನ್ನು ಅವರು ‘ದರ್ಬಾರ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅದೇ ಘಟನೆಯನ್ನು ಸ್ಪೂರ್ತಿಯಾಗಿ ಪಡೆದ ಯುವತಿ ರಮ್ಯಾ, ಬಿಎಂಡಬ್ಲು ಕಾರನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ರಜನೀಕಾಂತ್ ಅವರ ಮೊದಲ ಕಾರಿಗೆ ಇದ್ದ 5004 ಸಂಖ್ಯೆಯನ್ನೇ ಹಾಕಿಸಿದ್ದಾರೆ.
ಇದನ್ನೂ ಓದಿ:ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು ರಜನೀಕಾಂತ್ ನಟನೆಯ ಕೂಲಿ
ಕಾರು ಖರೀದಿಸಿದ ಕೂಡಲೇ ಪೋಯಸ್ ಗಾರ್ಡನ್ನಲ್ಲಿರುವ ರಜನೀಕಾಂತ್ ಅವರ ಮನೆಯ ಬಳಿ ಹೋಗಿ, ಕಾರಿನ ಕೀ ಅನ್ನು ಮನೆಯ ಗೇಟಿನ ಬಳಿ ಇರುವ ದೇವರ ವಿಗ್ರಹದ ಮುಂದಿಟ್ಟು, ಬಳಿಕ ಕಾರನ್ನು, ರಜನೀ ತಮ್ಮ ಮೊದಲ ಕಾರನ್ನು ಡ್ರೈವ್ ಮಾಡಿದ್ದ ಕುಂಬಂಪಾಕಂ ರಸ್ತೆಗೆ ತೆಗೆದುಕೊಂಡು ಹೋಗಿ ಅಲ್ಲಿ ಓಡಿಸಿದ್ದಾರೆ.
ಅಷ್ಟು ಮಾತ್ರವೇ ಅಲ್ಲ, ಇತ್ತೀಚೆಗಷ್ಟೆ ರಜನೀಕಾಂತ್ಗೆ ಬಿಎಂಡಬ್ಲು ಎಕ್ಸ್7 ಕಾರನ್ನು ನೀಡಿದ್ದ ಏಜೆನ್ಸಿಯನ್ನು ಹುಡುಕಿ, ಯಾರು ರಜನೀ ಅವರಿಗೆ ಎಕ್ಸ್7 ಕಾರು ಡೆಲಿವರಿ ಮಾಡಿದರೋ ಅದೇ ಏಜೆಂಟರನ್ನು ಕಾಡಿ ಬೇಡಿ ಅವರಿಂದಲೇ ರಮ್ಯಾ ತಮ್ಮ ಹೊಸ ಬಿಎಂಡಬ್ಲು 530ಎಲ್ಐ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರಂತೆ. ರಮ್ಯಾ ಅವರು ತಮ್ಮ ಕಾರಿನ ಫೋಟೊ, ರಜನೀಕಾಂತ್ ಅವರ ಮೊದಲ ಕಾರಿನ ಚಿತ್ರದ ಜೊತೆಗೆ ತಮ್ಮ ಅಭಿಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವತಿಯ ರಜನೀ ಅಭಿಮಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ