ಕೊರೊನಾ ನಂತರ ಮಾಲಿವುಡ್ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನೂ ಕೇರಳದಲ್ಲಿ ಸಂಪೂರ್ಣ ಭರ್ತಿಯೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿಲ್ಲ. ಅದಾಗ್ಯೂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ‘ಕುರುಪ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂದು (ನವೆಂಬರ್ 12) ಚಿತ್ರ ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕೇರಳ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೊಚ್ಚಿಯ ನಿವಾಸಿಯೊಬ್ಬರು ಸಲ್ಲಿಸಿದ್ದು, ಚಿತ್ರದಲ್ಲಿ ಖಾಸಗಿತನ ಭಂಗವಾಗಿದೆ ಎಂದಿದ್ದಾರೆ. ‘ಕುರುಪ್’ ಚಿತ್ರವು ನಟೋರಿಯಸ್ ಕ್ರಿಮಿನಲ್ ಆಗಿದ್ದ ಸುಕುಮಾರ್ ಕುರುಪ್ ಜೀವನವನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದಲ್ಲಿ ಸುಕುಮಾರ್ ಖಾಸಗಿ ಜೀವನಕ್ಕೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರಿಂದ ಬಿಡುಗಡೆಯ ಸಂಭ್ರಮದಲ್ಲಿದ್ದ ಚಿತ್ರತಂಡಕ್ಕೆ ಹಿನ್ನೆಡೆಯಾಗಿದೆ.
‘ಕುರುಪ್’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಸುಕುಮಾರ ಕುರುಪ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಸುಕುಮಾರ ಕುರುಪ್ ಕತೆಯನ್ನು ಚಿತ್ರ ಒಳಗೊಂಡಿದೆ. ಈ ಚಿತ್ರ ಮೇಯಲ್ಲಿ ಬಿಡುಗಡೆಯಾಗಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟು ಅಂತಿಮವಾಗಿ ಇಂದು ತೆರೆಗೆ ಬರಲಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದರೂ ಕೂಡ, ಹೈಕೋರ್ಟ್ ಚಿತ್ರದ ಬಿಡುಗಡೆಗೆ ತಡೆಯನ್ನು ನೀಡಲು ನಿರಾಕರಿಸಿದೆ. ಇದರಿಂದ ಚಿತ್ರತಂಡ ನಿರಾಳವಾಗಿದೆ.
ಹೈಕೋರ್ಟ್ ಅರ್ಜಿಗೆ ಸಂಬಂಧಪಟ್ಟಂತೆ ಸರ್ಕಾರ ಹಾಗೂ ಸಚಿವಾಲಯಗಳ ಗಮನ ಸೆಳೆದಿದ್ದು, ಅದರ ಬಗ್ಗೆ ವಿವರಣೆ ನಿಡುವಂತೆ ತಿಳಿಸಿದೆ. ಅದಾಗ್ಯೂ ಚಿತ್ರದ ಬಿಡುಗಡೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕೋರ್ಟ್ ಹೇಳಿದೆ. ಈ ಚಿತ್ರದ ಟ್ರೈಲರ್ ಕನ್ನಡದಲ್ಲೂ ಬಿಡುಗಡೆಯಾಗಿ ಗಮನ ಸೆಳೆದಿತ್ತು.
ಇದನ್ನೂ ಓದಿ:
ಮೈಸೂರು: ಮಹಾರಾಜ ಕಾಲೇಜಿನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ; ಕಳೆದ 1 ವಾರದಿಂದ ತರಗತಿ ನಡೆಸಲು ಕಿರಿಕಿರಿ
Published On - 10:00 am, Fri, 12 November 21