Rajamouli: ಚಿತ್ರರಂಗ ಕೊಳಕು, ನರಕ: ಹೀಗೆಂದಿದ್ದರೇಕೆ ರಾಜಮೌಳಿ?

|

Updated on: Mar 23, 2023 | 3:13 PM

ಚಿತ್ರರಂಗದಲ್ಲಿರುವ, ಹೊಸದಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ಹಲವು ಸಿನಿಮಾ ಕರ್ಮಿಗಳಿಗೆ ರಾಜಮೌಳಿ ಆದರ್ಶ. ಆದರೆ ರಾಜಮೌಳಿಯೇ ಒಮ್ಮೆ ಚಿತ್ರರಂಗ ಕೊಳಕು, ನರಕ ಎಂದಿದ್ದರು. ಏಕೆ...?

Rajamouli: ಚಿತ್ರರಂಗ ಕೊಳಕು, ನರಕ: ಹೀಗೆಂದಿದ್ದರೇಕೆ ರಾಜಮೌಳಿ?
ರಾಜಮೌಳಿ
Follow us on

ರಾಜಮೌಳಿ (Rajamouli) ಈಗ ಭಾರತೀಯ ಚಿತ್ರರಂಗದ ಸ್ಟಾರ್. ಭಾರತೀಯ ಚಿತ್ರರಂಗದ ಗರಿಮೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಶ್ರೇಯ ರಾಜಮೌಳಿಗೆ ಸಲ್ಲುತ್ತಿದೆ. ಲಕ್ಷಾಂತರ ಮಂದಿ ಇಂದು ರಾಜಮೌಳಿಯನ್ನು ತಮ್ಮ ಆದರ್ಶವನ್ನಾಗಿ ಪರಿಗಣಿಸಿ ಅವರಂತಾಗುವ ಪ್ರಯತ್ನದಲ್ಲಿದ್ದಾರೆ. ಅಸಂಖ್ಯ ಜನರನ್ನು ತಮ್ಮ ಪ್ರತಿಭೆಯಿಂದ ಪ್ರಭಾವಿಸಿರುವ, ಸಿನಿಮಾ ಕರ್ಮಿಗಳನ್ನಾಗುವಂತೆ ಪ್ರೇರೇಪಿಸಿರುವ ರಾಜಮೌಳಿ, ಹಿಂದೊಮ್ಮೆ, ಚಿತ್ರರಂಗ ಕೊಳಕು, ಪ್ರತಿದಿನವೂ ಅಲ್ಲಿ ನರಕ ದರ್ಶನವಾಗುತ್ತದೆ ಎಂದಿದ್ದರು!

ಕೆಲ ವರ್ಷಗಳ ಹಿಂದೆ ಸಿನಿಮಾ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದ್ದ ರಾಜಮೌಳಿ ಚಿತ್ರರಂಗದ ‘ಸತ್ಯಗಳನ್ನು’ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ತಮ್ಮ ಮೊದಲ ದಿನದ ಶೂಟಿಂಗ್​ನಲ್ಲಿ ವ್ಯಕ್ತಿಯೊಬ್ಬನಿಗೆ ಹೇಗೆ ‘ಮೋಸ’ ಮಾಡಿದ್ದೆ ಎಂದು ವಿವರಿಸಿದ ರಾಜಮೌಳಿ, ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕೆಂದರೆ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ, ಮೋಸ ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂಬರ್ಥದ ಮಾತುಗಳನ್ನು ಹೇಳಿದ್ದರು.

”ಸಿನಿಮಾ ರಂಗ ಒಂದು ಅದ್ಭುತ ಜಗತ್ತು, ಇಲ್ಲದ ಜಗತ್ತನ್ನು ನಾವು ಸೃಷ್ಟಿಸುತ್ತೇವೆ. ಇಲ್ಲದ ಪಾತ್ರಗಳನ್ನು ನಾವು ಸೃಷ್ಟಿಸುತ್ತೇವೆ. ಹೊಸ ಪ್ರಪಂಚವನ್ನೇ ಸೃಷ್ಟಿಸುತ್ತೇವೆ, ಅದೆಲ್ಲವೂ ಅದ್ಭುತ. ಆದರೆ ಈ ಹೊಸದನ್ನು ಸೃಷ್ಟಿಸುವ ಪ್ರೋಸೆಸ್ ಇದೆಯಲ್ಲ ಅದು ನರಕ. ನಿಮ್ಮನ್ನು (ವಿದ್ಯಾರ್ಥಿಗಳನ್ನು) ಮೋಸ ಮಾಡುವುದು ನನಗೆ ಇಷ್ಟವಿಲ್ಲ ಹಾಗಾಗಿ ಸತ್ಯ ಹೇಳುತ್ತೇನೆ. ಚಿತ್ರರಂಗ ಎಂಬುದು ಕೊಳಕು ಪ್ರಪಂಚ. ಕಲಾ ಪ್ರಪಂಚದಲ್ಲಿರುವ ನಾವುಗಳು ಅತಿಶಯದಲ್ಲಿ ಬದುಕುತ್ತಿದ್ದೇವೆ. ನಮ್ಮ ಸುತ್ತ ಸುಳ್ಳುಗಳೇ ಇವೆ. ನಿಮಗೆ ಇಷ್ಟವಾಗುವ ಕೆಲಸವನ್ನು ನೀವು ಮಾಡಬೇಕೆಂದರೆ ನೀವು ಬಹಳ ಜನಕ್ಕೆ ಸುಳ್ಳು ಹೇಳಬೇಕಾಗುತ್ತದೆ. ನೀವು ಅಂದುಕೊಂಡಂಥಹಾ ಕಾರ್ಯ ಮಾಡಲು, ನೀವು ಅಂದುಕೊಂಡಂತೆ ಆಗಲು ನೀವು ಬಹಳಷ್ಟು ಜನರಿಗೆ ಸುಳ್ಳು ಹೇಳಬೇಕಾಗುತ್ತದೆ. ಆದರೆ ನಿಮಗೆ ನೀವು ಸುಳ್ಳು ಹೇಳಿಕೊಳ್ಳಬೇಡಿ, ನಿಮ್ಮ ಆತ್ಮವನ್ನು ನೀವು ವಂಚಿಸಿಕೊಳ್ಳಬೇಡಿ” ಎಂದಿದ್ದರು ರಾಜಮೌಳಿ.

”ಯಾವುದು ಒಳ್ಳೆಯ ಶಾಟ್ ಯಾವುದು ಕೆಟ್ಟ ಶಾಟ್ ಎಂಬುದು ನನಗೆ ಈವರೆಗೆ ಗೊತ್ತಿಲ್ಲ. ಒಂದು ಸಿನಿಮಾ ಹೇಗೆ ಯಶಸ್ವಿಯಾಗುತ್ತದೆ ಎಂದು ಯಾರೂ ಹೇಳಲಾರರು. ಚಿತ್ರರಂಗದ ಸಕ್ಸಸ್ ರೇಟ್ ಕೇವಲ 10% ಅಷ್ಟೆ. ಹಾಗಾಗಿ ಸೂಪರ್ ಹಿಟ್ ಸಿನಿಮಾ ಮಾಡುವ ಪ್ರಯತ್ನ ನೀವು ಮಾಡಬೇಡಿ. ಒಂದು ಹಿಟ್ ಸಿನಿಮಾ ಮಾಡುವುದು ಹೇಗೆ ಎಂಬ ಫಾರ್ಮುಲಾ ಇಲ್ಲ. ಆ ಫಾರ್ಮುಲಾ ಕಂಡು ಹಿಡಿಯಲು ಸಾಧ್ಯವೂ ಇಲ್ಲ. ಆದರೆ ನಿಮಗೆ ಯಾವುದು ಇಷ್ಟವಾಗುತ್ತದೆಯೋ, ನಿಮ್ಮನ್ನು ಯಾವುದು ಉತ್ಸಾಹಿತಗೊಳಿಸುತ್ತದೆಯೋ ಅದನ್ನು ಮಾಡಿ. ಆದರೆ ಹೀಗೆ ನಿಮಗಿಷ್ಟವಾದುದನ್ನು ಮಾಡುವ ಭರದಲ್ಲಿ ನೀವು ಹಲವರಿಗೆ ಸುಳ್ಳು ಹೇಳಬೇಕಾಗುತ್ತದೆ, ಮೋಸ ಮಾಡಬೇಕಾಗುತ್ತದೆ ಎಂಬ ಬಗ್ಗೆ ಎಚ್ಚರವಿರಲಿ” ಎಂದು ಕಿವಿಮಾತು ಹೇಳಿದ್ದರು ರಾಜಮೌಳಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Thu, 23 March 23