ದಕ್ಷಿಣ ಭಾರತ ಮತ್ತು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಖ್ಯಾತ ನಟ ಕಿಶೋರ್ ಕುಮಾರ್ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 2024-2025ನೇ ಸಾಲಿನ 16ನೇ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮಾರ್ಚ್ 1ರಿಂದ 8ರ ತನಕ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರದ ಸಲುವಾಗಿ ಕಿಶೋರ್ ಅವರನ್ನು ರಾಯಭಾರಿಯನ್ನಾಗಿ ಮಾಡಲಾಗಿದೆ.
ಕಿಶೋರ್ ಅವರಿಗೆ ದೇಶಾದ್ಯಂತ ಖ್ಯಾತಿ ಇದೆ. ಅಭಿನಯದ ಮೂಲಕ ಅವರು ಅಪಾರ ಜನಪ್ರಿಯತೆ ಹೊಂದಿದ್ದಾರೆ. ಕನ್ನಡ ಮಾತ್ರವಲ್ಲದೇ ದಕ್ಷಿಣದ ಇತರೆ ಭಾಷೆಯ ಸಿನಿಮಾಗಳಲ್ಲಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಅವರು ಅಭಿನಯಿಸಿ ಮನೆಮಾತಾಗಿದ್ದಾರೆ. ಅವರನ್ನು ಬೆಂಗಳೂರು ಫಿಲ್ಮ್ ಫೆಸ್ಟಿವಲ್ 16ನೇ ಆವೃತ್ತಿಗೆ ರಾಯಭಾರಿಯಾಗಿ ನೇಮಿಸಿರುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿರುವ ಖ್ಯಾತ ನಟ ಕಿಶೋರ್ ಕುಮಾರ್. ಜಿ ಅವರಿಗೆ ಅಭಿನಂದನೆಗಳು.
“ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಘೋಷವಾಕ್ಯದಡಿ ಈ ಬಾರಿಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಸಾಲುಗಳಿಗೆ ಬದ್ಧವಾಗಿರುವ ಕಿಶೋರ್ ಅವರ ಮುಂದಾಳತ್ವದಲ್ಲಿ ಬೆಂಗಳೂರು ಚಲನಚಿತ್ರೋತ್ಸವ… pic.twitter.com/Jjuhpx4q9X
— CM of Karnataka (@CMofKarnataka) January 9, 2025
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಜಿಯಂನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದೆ. 8 ದಿನಗಳ ಕಾಲ ನಡೆಯುವ ಈ ಸಿನಿಮೋತ್ಸವದಲ್ಲಿ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುತ್ತಮ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಅಲ್ಲದೇ, ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಕೂಡ ಇರಲಿವೆ. ಸಿನಿಮಾಸಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಹಾಲಿವುಡ್ಗೆ ಬಿತ್ತು ಬೆಂಕಿ, ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟ ಸೆಲೆಬ್ರಿಟಿಗಳು
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸಭೆ ನಡೆಸಿ, ಸಿನಿಮೋತ್ಸವದ ದಿನಾಂಕ ಘೋಷಿಸಿದರು. ಬಳಿಕ ಮಾತನಾಡಿ, ‘ಈ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಶೀರ್ಷಿಕೆಯಡಿ ಸಿನಿಮೋತ್ಸವ ನಡೆಯಲಿದೆ. ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಸಿನಿಮಾಗಳನ್ನು ತರುವ ಕುರಿತು ಮತ್ತು ದೇಶ-ವಿದೇಶಗಳ ಸಿನಿಮಾ ರಂಗದ ಗಣ್ಯಾತಿಗಣ್ಯರು ಚಿತ್ರೋತ್ಸವದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.