AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್​ಗೆ ಬಿತ್ತು ಬೆಂಕಿ, ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟ ಸೆಲೆಬ್ರಿಟಿಗಳು

Hollywood Hills wild fire: ಲಾಸ್ ಏಂಜಲ್ಸ್​ನಲ್ಲಿ ಶುರುವಾಗಿರುವ ಭೀಕರ ಕಾಡ್ಗಿಚ್ಚು ಇದೀಗ ಹಾಲಿವುಡ್​ಗೆ ತಲುಪಿದೆ. ವಿಶ್ವದ ಖ್ಯಾತನಾಮರು ನೆಲೆಸಿರುವ ಹಾಲಿವುಡ್ ನಗರದವರೆಗೆ ಕಾಡ್ಗಿಚ್ಚು ವ್ಯಾಪಿಸಿದ್ದು, ಹಲವಾರು ಮಂದಿ ವಿಶ್ವಮಾನ್ಯ ಸೆಲೆಬ್ರಿಟಿಗಳು ಮನೆಗಳನ್ನು ತ್ಯಜಿಸಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿದೆ ನೋಡಿ ಪೂರ್ಣ ವಿವರ...

ಹಾಲಿವುಡ್​ಗೆ ಬಿತ್ತು ಬೆಂಕಿ, ಪ್ರಾಣ ಉಳಿಸಿಕೊಳ್ಳಲು ಊರು ಬಿಟ್ಟ ಸೆಲೆಬ್ರಿಟಿಗಳು
Hollywood
Follow us
ಮಂಜುನಾಥ ಸಿ.
|

Updated on:Jan 09, 2025 | 5:50 PM

ಅಮೆರಿಕದ ಲಾಸ್ ಎಂಜಲ್ಸ್​ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಈಗಾಗಲೇ ಐದು ಮಂದಿಯ ಜೀವ ತೆಗೆದಿದ್ದು, ಲಕ್ಷಾಂತರ ಎಕರೆ ಕಾಡನ್ನು ನಾಶ ಮಾಡಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ. ಹಾಲಿವುಡ್ ಹಿಲ್, ವಿಶ್ವ ಪ್ರಸಿದ್ಧ ಹಾಲಿವುಡ್ ನಟ, ನಟಿಯರು ಮಾತ್ರವೇ ಅಲ್ಲದೆ ವಿಶ್ವದ ಟಾಪ್ ಉದ್ಯಮಿಗಳು, ಕ್ರೀಡಾಪಟುಗಳು ವಾಸಿಸುವ ಸ್ಥಳವಾಗಿದ್ದು, ಹಾಲಿವುಡ್​ ಹಿಲ್​ಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಹಾಲಿವುಡ್ ನಗರದ ಬಹುತೇಕರನ್ನು ಸ್ಥಳಾಂತರ ಮಾಡಲಾಗಿದೆ.

ಹಾಲಿವುಡ್​ ನಗರವಾಸಿಗಳಿಗೆ ‘ಇಮ್ಮಿಡಿಯಟ್ ಥ್ರೆಟ್​ ಟು ಲೈಫ್’ (ಜೀವ ಹೋಗುವ ತೀವ್ರತರವಾದ ಸಾಧ್ಯತೆ) ಎಚ್ಚರಿಕೆಯನ್ನು ನೀಡಲಾಗಿದ್ದು, ಹಾಲಿವುಡ್​ನ ಬಹುತೇಕ ಮನೆಗಳನ್ನು ಖಾಲಿ ಮಾಡಿಸಲಾಗಿದೆ. ಹಾಲಿವುಡ್​ ಹಿಲ್​ನ ಹತ್ತಿರದ ಕೆಲ ಬೃಹತ್ ಮನೆಗಳು ಈಗಾಗಲೇ ಬೆಂಕಿಗೆ ಆಹುತಿಯಾಗಿವೆ. ಹಾಲಿವುಡ್​ನ ರಸ್ತೆಗಳಲ್ಲೆಲ್ಲ ಧೂಳು ತುಂಬಿದ್ದು, ಸೂರ್ಯನ ಬೆಳಕು ಸಹ ತಲುಪದಂಥಾ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲ ವರದಿಗಳು ಹೇಳುತ್ತಿವೆ.

ಇದನ್ನೂ ಓದಿ:ಹಾಲಿವುಡ್​ ಸಂಸ್ಥೆಯೊಂದಿಗೆ ಯಶ್ ಮಾತುಕತೆ, ಹಾಕಿದ್ದಾರೆ ದೊಡ್ಡ ಪ್ಲ್ಯಾನ್

ಹಾಲಿವುಡ್ ಹಿಲ್ ಮೇಲಿರುವ ಬೃಹತ್ ಮತ್ತು ವಿಶ್ವ ಪ್ರಸಿದ್ಧವಾಗಿರುವ ‘HOLLYWOOD’ ಸೈನ್ ಬೋರ್ಡ್​ಗೆ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಅದರ ಕೆಲ ಚಿತ್ರಗಳು ಹರಿದಾಡುತ್ತಿವೆ. ಆದರೆ ಹಾಲಿವುಡ್ ಸೈನ್ ಬೋರ್ಡ್​ಗೆ ಬೆಂಕಿ ಬಿದ್ದಿಲ್ಲ, ಈಗ ಹರಿದಾಡುತ್ತಿರುವುದು ಎಐ ಚಿತ್ರ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಆದರೆ ಹಾಲಿವುಡ್​ನ ರಸ್ತೆಯ ಕೆಲ ಚಿತ್ರ, ವಿಡಿಯೋಗಳು ಹರಿದಾಡುತ್ತಿದ್ದು, ಜನರು ಬೀದಿಗಳಲ್ಲಿ ಆತಂಕದಲ್ಲಿ ಓಡುತ್ತಿರುವ ವಿಡಿಯೋಗಳು ಆತಂಕ ಮೂಡಿಸಿವೆ.

ದಕ್ಷಿಣದ ಲಾಸ್ ಏಂಜಲ್ಸ್​ನಲ್ಲಿ ಈ ಕಾಡ್ಗಿಚ್ಚು ಪ್ರಾರಂಭವಾಗಿದ್ದು, ಈ ವರೆಗೆ ಐದು ಜನ ಕಾಡ್ಗಿಚ್ಚಿನಿಂದಾಗಿ ನಿಧನ ಹೊಂದಿದ್ದಾರೆ. 1200ಕ್ಕೂ ಹೆಚ್ಚು ಮನೆಗಳು ಸುಟ್ಟು ಹೋಗಿವೆ. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ ಲಕ್ಷಾಂತರ ಕೋಟಿ ಮೌಲ್ಯದ ನಷ್ಟವನ್ನು ಈ ಕಾಡ್ಗಿಚ್ಚು ಈಗಾಗಲೇ ಉಂಟು ಮಾಡಿದ್ದು, 2000 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯ ವೇಗ ಹೆಚ್ಚಾಗಿರುವ ಕಾರಣ ಕಾಡ್ಗಿಚ್ಚು ಬಲು ಬೇಗನೆ ಹಬ್ಬುತ್ತಿದ್ದು, ಬೆಂಕಿ ಇನ್ನೂ ತಹಬದಿಗೆ ಬಂದಿಲ್ಲ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Thu, 9 January 25