ಕೊರೊನಾ ವೈರಸ್ನಿಂದಾಗಿ ಸಾಯುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಪ್ರತಿ ದಿನ ಒಬ್ಬರಲ್ಲ ಒಬ್ಬರು ಕಲಾವಿದರನ್ನು ಈ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಿದೆ. ಈಗ ನಟ ರಾಹುಲ್ ವೋಹ್ರಾ ನಿಧನರಾಗಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ (ಮೇ9) ಕೊನೆಯುಸಿರೆಳೆದರು. ಅದಕ್ಕೂ ಒಂದು ದಿನ ಮುಂಚೆ ಅವರು ಉತ್ತಮ ಚಿಕಿತ್ಸೆ ಬೇಕು ಎಂದು ಸೋಶಿಯಲ್ ಮೀಡಿಯಾ ಮೂಲಕ ನರೇಂದ್ರ ಮೋದಿ ಅವರನ್ನು ಕೈ ಮುಗಿದು ಬೇಡಿಕೊಂಡಿದ್ದರು.
‘ನನಗೂ ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನು ಕೂಡ ಬದುಕುತ್ತಿದ್ದೆ. ಮತ್ತೆ ಜನ್ಮತಾಳಿ ಬಂದು ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಶನಿವಾರ ಫೇಸ್ಬುಕ್ನಲ್ಲಿ ರಾಹುಲ್ ಬರೆದುಕೊಂಡಿದ್ದರು. ತಾವಿರುವ ಆಸ್ಪತ್ರೆಯ ಹೆಸರು, ತಮ್ಮ ವಯಸ್ಸು, ಬೆಡ್ ಸಂಖ್ಯೆ ಮುಂತಾದ ವಿವರಗಳನ್ನು ಈ ಪೋಸ್ಟ್ನಲ್ಲಿ ಬರೆದು, ದಯವಿಟ್ಟು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ವೋಹ್ರಾ ಟ್ಯಾಗ್ ಮಾಡಿದ್ದರು. ಅವರು ನಿಧನರಾಗಿರುವ ಸುದ್ದಿಯನ್ನು ನಟ, ನಿರ್ದೇಶಕ, ನಾಟಕಕಾರ ಅರವಿಂದ್ ಗೌರ್ ಖಚಿತ ಪಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ರಾಹುಲ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಆ ಬಗ್ಗೆ ಅವರು ಅಸಹಾಯಕತೆಯಿಂದ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ‘ನನಗೆ ಕೊವಿಡ್ ಪಾಸಿಟಿವ್ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಲ್ಕು ದಿನದಿಂದ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ನನಗೆ ಎಲ್ಲಿ ಆಕ್ಸಿಜನ್ ಬೆಡ್ ಸಿಗಬಹುದು? ನನ್ನ ಆಕ್ಸಿಜನ್ ಮಟ್ಟ ಕಡಿಮೆ ಆಗುತ್ತಲೇ ಇದೆ. ಇಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ರಾಹುಲ್ ಅಂಗಲಾಚಿದ್ದರು.
ರಾಹುಲ್ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಸೋನು ಸೂದ್ ಅವರಿಗೆ ಈಗ ವಿಚಾರ ತಿಳಿದಿದ್ದರೆ ಖಂಡಿತವಾಗಿಯೂ ರಾಹುಲ್ ಸಾಯುತ್ತಿರಲಿಲ್ಲ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಕಾಲಿವುಡ್ ನಿರ್ದೇಶಕ ಕೆವಿ ಆನಂದ್, ರವಿರತ್ನ ಕಾಳಿದಾಸ ಚಿತ್ರದ ನಿರ್ದೇಶಕ ರೇಣುಕಾ ಶರ್ಮಾ, ನಟ ಶಂಕನಾದ ಅರವಿಂದ್, ಯುವ ನಿರ್ಮಾಪಕ ಡಿ.ಎಸ್. ಮಂಜುನಾಥ್ ಸೇರಿದಂತೆ ಅನೇಕರು ಈ ಮಹಾಮಾರಿಗೆ ಬಲಿ ಆಗಿದ್ದಾರೆ.
ಇದನ್ನೂ ಓದಿ:
ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ
Ramu Death: ನಿಧನಕ್ಕೂ ಮುನ್ನ ಫೋನ್ನಲ್ಲಿ ಕೊವಿಡ್ ಕಷ್ಟ ವಿವರಿಸಿದ್ದ ಕೋಟಿ ರಾಮು