ಕಾಲಿವುಡ್ನ ಖ್ಯಾತ ನಟ ವಿಶಾಲ್ (Actor Vishal) ಇಂದು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳು ನಟ, ಅಪ್ಪು ನಡೆಸುತ್ತಿದ್ದ ಆಶ್ರಮದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿವಹಿಸಿಕೊಳ್ಳುವುದಾಗಿ ತಿಳಿಸಿದ್ದರು. ಇದೀಗ ಇದೇ ಮೊದಲ ಬಾರಿ ಶಕ್ತಿಧಾಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ. ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಆರಂಭಿಸಿದ್ದ ‘ಶಕ್ತಿಧಾಮ’ ಸಾವಿರಾರು ಬಡ ಹೆಣ್ಣುಮಕ್ಕಳಿಗೆ ಆಶ್ರಯ ನೀಡುತ್ತಿದೆ. ಪಾರ್ವತಮ್ಮನವರ ನಿಧನದ ನಂತರ ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿಯನ್ನು ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ವಹಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ ಅಲ್ಲಿನ ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸವನ್ನು ನೀಡುವ ಕನಸು ಕಂಡಿದ್ದರು. ಇದಕ್ಕಾಗಿ ಹೆಣ್ಣು ಮಕ್ಕಳಿಗಾಗಿಯೇ ಒಂದು ವಿಶೇಷ ಶಾಲೆಯನ್ನು ಆರಂಭಿಸಲು ಅಪ್ಪು ಯೋಜನೆ ರೂಪಿಸಿದ್ದರು. ಆದರೆ ಈ ಕನಸು ನನಸಾಗುವ ಮುನ್ನವೇ ಅಪ್ಪು ನಮ್ಮನ್ನು ಅಗಲಿದ್ದರು.
ಪುನೀತ್ ರಾಜ್‌ಕುಮಾರ್ ಅವರ ನಿಧನದ ಬೆನ್ನಲ್ಲೇ ತೆರೆಮರೆಯಲ್ಲೇ ನಡೆಯುತ್ತಿದ್ದ ಅವರ ಸಾಮಾಜಿಕ ಕಾರ್ಯಗಳ ಮಾಹಿತಿ ಹೊರಬಿದ್ದಿತ್ತು. ಇದು ತಮಿಳು ನಟ ವಿಶಾಲ್ ಅವರ ಗಮನಕ್ಕೂ ಬಂದಿತ್ತು. ಅಲ್ಲದೆ ಬೆಂಗಳೂರಿನಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿಶಾಲ್, ಪುನೀತ್ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು. ಅಲ್ಲದೆ ಶಕ್ತಿಧಾಮದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಜವಾಬ್ದಾರಿಯನ್ನು ನಾನು ಹೊತ್ತು ಕೊಳ್ಳುತ್ತೇನೆ ಎಂದು ವಿಶಾಲ್ ತಿಳಿಸಿದ್ದರು.
ಇದಕ್ಕಾಗಿ ನಾನು ಮನೆ ಖರೀದಿಸಲು ಮೀಸಲಿಟ್ಟಿರುವ ಹಣವನ್ನು ನೀಡುತ್ತೇನೆ ಎಂದಿದ್ದ ವಿಶಾಲ್, ಅಪ್ಪು ಅವರ ಕನಸನ್ನು ನಾನು ಈಡೇರಿಸುವುದಾಗಿ ಭಾವುಕರಾಗಿ ಮಾತನಾಡಿದ್ದರು. ಇದಾದ ಬಳಿಕ ವಿಶಾಲ್ ಶಿವಣ್ಣ ಅವರನ್ನು ಭೇಟಿಯಾಗಿ ಶಕ್ತಿಧಾಮದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು.
ಇದೀಗ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರೋ ಶಕ್ತಿಧಾಮಕ್ಕೆ ಭೇಟಿ ನೀಡಿರುವ ವಿಶಾಲ್, ಅಲ್ಲಿನ ಆಡಳಿತ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಮಕ್ಕಳ ಜೊತೆ ಕುಶಲೋಪರಿ ನಡೆಸಿದ್ದಾರೆ. ಆ ಬಳಿಕ ಮಾತನಾಡಿದ ತಮಿಳು ನಟ, ನಾನು ಯಾವಾಗಲೂ ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ. ಇದಕ್ಕೆ ನನಗೆ ರಾಜ್ ಕುಟುಂಬದವರು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿಗೆ ಬಂದಾಗ ನನಗೆ ದೇವಸ್ಥಾನಕ್ಕೆ ಹೋದ ಅನುಭವ ನೀಡಿತು. ಆದರೆ
ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನು ನೋಡಿದೆ ಎಂದು ತಿಳಿಸಿದ್ದಾರೆ.
ಇನ್ನು ಶಕ್ತಿಧಾಮದಲ್ಲಿನ ಮಕ್ಕಳು ತುಂಬಾ ಲವ ಲವಿಕೆಯಿಂದ ಇದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸ. ಈ ಬಗ್ಗೆ ನಾನು ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ಅಲ್ಲದೆ ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಕ್ಕಳ ಜೊತೆ ಸಹ ನಾನು ಮಾತನಾಡಿದೆ. ಮಕ್ಕಳು ಡ್ಯಾನ್ಸ್ ಮಾಡಿದ್ರು, ಆಟವಾಡಿದ್ರು, ಹಾಡು ಹೇಳಿದರು. ಎಲ್ಲರೂ ತುಂಬಾ ಉತ್ಸಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ವಿಶಾಲ್ ತಿಳಿಸಿದರು.
ಸದ್ಯ ಲಾಠಿ ಚಿತ್ರದಲ್ಲಿ ನಟಿಸಿರುವ ವಿಶಾಲ್ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಡುವು ಮಾಡಿಕೊಂಡು ಶಕ್ತಿಧಾಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳನ್ನು ಭೇಟಿಯಾಗುವ ಮೂಲಕ ಕುಶಲೋಪರಿ ವಿಚಾರಿಸಿದ್ದಾರೆ.
Published On - 1:00 pm, Sat, 10 September 22