
ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚಿರುವ ನಟಿ ಮೃಣಾಲಿನಿ ರವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಧ್ಯಾತ್ಮ ಪ್ರವಚಕ ಮಹಾವಿಷ್ಣು ಜೊತೆ ನವೆಂಬರ್ 15ರಂದು ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಮಲೇಷ್ಯಾದ ಕಡಲತೀರದ ಸುಂದರ ಪ್ರದೇಶದಲ್ಲಿ ಈ ಶುಭ ಕಾರ್ಯ ನಡೆದಿದೆ. ಮದುವೆಯ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ.
‘ನಾವು ಜೀವನದಲ್ಲಿ ಬೇಡಿಕೊಂಡ ಎಲ್ಲ ಪ್ರಾರ್ಥನೆಗಳಲ್ಲಿ ನೀನೇ ಅತ್ಯಂತ ಸುಂದರವಾದ ವರ’ ಎಂದು ಮೃಣಾಲಿನಿ ಬರೆದುಕೊಂಡಿದ್ದಾರೆ. ನವಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಮೃಣಾಲಿನಿ ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಧರಿಸಿರುವ ಜ್ಯುವೆಲರಿ ಎಲ್ಲರ ಕಣ್ಣು ಕುಕ್ಕಿದೆ. ಮುಡಿಯ ತುಂಬಾ ಮುಡಿದ ಮಲ್ಲಿಗೆ ಹೂವು ಅವರ ಅಂದ ಹೆಚ್ಚಿಸಿದೆ. ಮಹಾವಿಷ್ಣು ಕ್ರೀಮ್ ಬಣ್ಣದ ಕುರ್ತಾ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾರ ಬದಲಾಯಿಸಿಕೊಂಡು ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ.
ಕುಟುಂಬದ ಆಪ್ತರ ಸಮ್ಮುಖದಲ್ಲಿ ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹ ನೆರವೇರಿದೆ. ಮಾಂಗಲ್ಯ ಧಾರಣೆ ಹಾಗೂ ತಮಿಳು ಶಾಸ್ತ್ರಗಳನ್ನು ಜೋಡಿ ನೆರವೇರಿಸಿದೆ. ಹಣೆಯ ಮೇಲೆ ಸಿಂಧೂರ ಇಡುವ ಸುಂದರ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಮುದ್ರದ ಅಲೆಗಳು ಹಾಗೂ ಹಸಿರು ಬೆಟ್ಟಗಳ ಹಿನ್ನೆಲೆಯಲ್ಲಿ ಫೋಟೋಗಳು ಅದ್ಭುತವಾಗಿ ಮೂಡಿಬಂದಿವೆ. ಗುಲಾಬಿ ದಳಗಳ ಮಳೆ ನವಜೋಡಿಯ ಮದುವೆಗೆ ಸಾಕ್ಷಿಯಾಗಿದೆ. ಪರಸ್ಪರ ಹಣೆಗೆ ಮುತ್ತಿಕ್ಕುತ್ತಾ ನಗುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.
ಇದನ್ನೂ ಓದಿ: ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ
ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಮೃಣಾಲಿನಿ, ‘ಸೂಪರ್ ಡಿಲಕ್ಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ‘ಎನಿಮಿ’, ‘ಕೋಬ್ರಾ’, ‘ರೋಮಿಯೋ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ದಿಢೀರ್ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸದ್ಯ ನವದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.