ಪತಿ ಕೃಷ್ಣ ವಂಶಿ ಜೊತೆಗಿನ ವಿಚ್ಛೇದನ ವದಂತಿಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ
ಬಹುಭಾಷೆಯಲ್ಲಿ ಖ್ಯಾತಿ ಪಡೆದಿರುವ ನಟಿ ರಮ್ಯಾ ಕೃಷ್ಣನ್ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತಿ ಕೃಷ್ಣ ವಂಶಿ ಜೊತೆ ತಮಗೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಇಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಕೇಳಿಬರುತ್ತಿದ್ದ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.

ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದೂರವಾಗಿದ್ದಾರೆ, ಅವರಿಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇವೆ. ಇಬ್ಬರೂ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದೀಗ ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿರುವ ರಮ್ಯಾ ಕೃಷ್ಣನ್ ಅವರು ತಮ್ಮ ದಾಂಪತ್ಯ ಜೀವನದ ಕುರಿತು ಹಬ್ಬಿರುವ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
‘ರಾ ಟಾಕ್ಸ್ ವಿತ್ ವಿಕೆ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ರಮ್ಯಾ ಕೃಷ್ಣನ್ ಅವರು ತಮ್ಮ ಮದುವೆಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ. ‘ನಾವಿಬ್ಬರೂ ಶೇ.100ರಷ್ಟು ಈಗಲೂ ಪತಿ-ಪತ್ನಿಯಾಗಿಯೇ ಇದ್ದೇವೆ. ಆದರೆ, ನಮ್ಮ ಅನುಕೂಲಕ್ಕೆ ತಕ್ಕಂತೆ ಸಂತೋಷದಿಂದ ಎರಡು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ನಾನು ಟಿವಿ ಶೋ ಶೂಟಿಂಗ್ ಆರಂಭಿಸಿದಾಗ ನನ್ನ ಮಗ ಬೆಳೆಯುತ್ತಿದ್ದ. ಆಗ ನಾವು ಹೈದರಾಬಾದ್‌ನಲ್ಲಿದ್ದೆವು. ತೆಲಂಗಾಣ ಚಳವಳಿಯ ಸಮಯದಲ್ಲಿ ಪ್ರತಿ 15 ದಿನಗಳಿಗೊಮ್ಮೆ ನಾನು ಚೆನ್ನೈಗೆ ಬಂದು ಹೋಗಬೇಕಿತ್ತು. ಆ ವೇಳೆ ಮುಷ್ಕರಗಳಿಂದ ಶಾಲೆಗಳಿಗೆ ರಜೆ ನೀಡುತ್ತಿದ್ದ ಕಾರಣ, ನನಗೆ ಮತ್ತು ಮಗನಿಗೆ ತುಂಬಾ ತೊಂದರೆಯಾಗುತ್ತಿತ್ತು. ನಾನು ನಗರ ಬಿಟ್ಟು ಹೋದಾಗಲೆಲ್ಲಾ ಅವನು ಅನಾರೋಗ್ಯಕ್ಕೆ ಒಳಗಾಗುತ್ತಿದ್ದ. ಹೀಗಾಗಿ ಅವನನ್ನು ಚೆನ್ನೈನ ಶಾಲೆಗೆ ಸೇರಿಸಲು ನಿರ್ಧರಿಸಿದೆ’ ಎಂದು ಬೇರೆ ಬೇರೆ ನಗರಗಳಲ್ಲಿ ವಾಸಿಸಲು ಇರುವ ಕಾರಣವನ್ನು ವಿವರಿಸಿದ್ದಾರೆ.
ಇದೇ ವೇಳೆ ಮದುವೆ ಎಂಬ ವ್ಯವಸ್ಥೆಯನ್ನು ‘ಓವರ್‌ರೇಟೆಡ್’ ಎಂದು ಕರೆದಿರುವ ರಮ್ಯಾ ಕೃಷ್ಣನ್, ಮದುವೆಯಾಗುವ ಬದಲು ಕೃಷ್ಣ ವಂಶಿ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರಬೇಕಿತ್ತು ಎಂದಿದ್ದಾರೆ. ‘ಸಂಬಂಧವೊಂದರಲ್ಲಿ ಮದುವೆ ಅನ್ನೋದು ಒಂದು ಓವರ್‌ರೇಟೆಡ್ ಪ್ರಕ್ರಿಯೆ ಎಂದು ನನಗನಿಸುತ್ತದೆ. ಅಗತ್ಯವಿದ್ದಾಗ ಮಾತ್ರ ಮದುವೆಯಾಗಬೇಕು’ ಎಂದು ಅವರು ಹೇಳಿದ್ದಾರೆ.
‘ನಿಜ ಹೇಳಬೇಕೆಂದರೆ, ಕೃಷ್ಣ ವಂಶಿ ಅವರು ‘ಮದುವೆ ಯಾಕೆ? ನಾವಿಬ್ಬರೂ ಲಿವ್-ಇನ್‌ನಲ್ಲಿ ಇರೋಣ’ ಎಂದು ಆಗಲೇ ಹೇಳುತ್ತಿದ್ದರು. ಬಹುಶಃ ನಾನು ಅವತ್ತೇ ಅದಕ್ಕೆ ಒಪ್ಪಿಕೊಳ್ಳಬೇಕಿತ್ತು ಎನಿಸುತ್ತದೆ. ಮದುವೆಯಾದಾಗ ಎರಡು ಕುಟುಂಬಗಳು, ಸುತ್ತಮುತ್ತಲಿನ ಜನರು ಸೇರಿಕೊಳ್ಳುತ್ತಾರೆ. ಆಗ ನಮ್ಮ ಸಂಗಾತಿಗಿಂತ ಹೆಚ್ಚಾಗಿ ಆ ಸಂಬಂಧಗಳಿಗೆ ನಾವು ಉತ್ತರದಾಯಿಗಳಾಗಬೇಕಾಗುತ್ತದೆ. ನಾನು ಹೇಳಲು ಹೊರಟಿರುವುದೇನೆಂದರೆ, ವಂಶಿ ಮತ್ತು ನನ್ನ ನಡುವಿನ ಸಂಬಂಧ ಪರ್ಫೆಕ್ಟ್ ಆಗಿದೆ ಮತ್ತು ಅದು ಯಾವಾಗಲೂ ಹಾಗೆಯೇ ಇರುತ್ತದೆ’ ಎಂದು ಮನದಾಳದ ಮಾತುಗಳನ್ನು ರಮ್ಯಾ ಕೃಷ್ಣನ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸೌಂದರ್ಯ ಮುಖಕ್ಕೆ ಕಾಲಿಟ್ಟ ದೃಶ್ಯ ನೋಡಿ ಕಣ್ಣೀರಾದ ರಮ್ಯಾ ಕೃಷ್ಣ
ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ ಅವರು ‘ಚಂದ್ರಲೇಖ’ (1998), ‘ಶ್ರೀ ಆಂಜನೇಯಂ’ (2004), ಮತ್ತು ‘ರಂಗ ಮಾರ್ತಾಂಡ’ (2023) ಸೇರಿದಂತೆ ಒಟ್ಟು ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ಇಬ್ಬರೂ ‘ಗುಲಾಬಿ’, ‘ನಿನ್ನೆ ಪೆಲ್ಲಾಡತ’ ಮತ್ತು ‘ಸಿಂಧೂರಂ’ ಚಿತ್ರಗಳ ಸೆಟ್‌ನಲ್ಲಿ ಭೇಟಿಯಾಗಿದ್ದರು. ಈ ದಂಪತಿಗೆ 2005ರಲ್ಲಿ ಜನಿಸಿದ ರಿತ್ವಿಕ್ ವಂಶಿ ಎಂಬ ಮಗನಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




