Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿ ಚಿನ್ನ ಕದ್ದು ಗೋವಾಕ್ಕೆ ಪರಾರಿ: ಸಿನಿಮಾ ನಟಿಯ ಬಂಧನ

Gold Theft: ಒಂದು ಕೆಜಿಗೂ ಹೆಚ್ಚು ಚಿನ್ನ ಕದ್ದ ಆರೋಪದಲ್ಲಿ ತೆಲುಗು ಸಿನಿಮಾ ನಟಿ ಸ್ನೇಹಾ ಶೆಟ್ಟಿ ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ತನ್ನ ಸ್ನೇಹಿತೆಯ ಮನೆಯಲ್ಲಿ ನಟಿ ಚಿನ್ನ ಕದ್ದಿದ್ದರು ಎನ್ನಲಾಗಿದೆ.

ಕೆಜಿ ಚಿನ್ನ ಕದ್ದು ಗೋವಾಕ್ಕೆ ಪರಾರಿ: ಸಿನಿಮಾ ನಟಿಯ ಬಂಧನ
Follow us
ಮಂಜುನಾಥ ಸಿ.
|

Updated on: Mar 05, 2024 | 9:59 AM

ಚಿನ್ನ ಕದ್ದ ಆರೋಪದಲ್ಲಿ ಸಿನಿಮಾ ನಟಿಯೊಬ್ಬಾಕೆಯನ್ನು ಆಂಧ್ರ ಪ್ರದೇಶದ ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ನಟಿ ಸ್ನೇಹಾ ಶೆಟ್ಟಿ (Sneha Shetty) ಬಂಧಿತ ಆರೋಪಿ. ಭಾರತೀಯ ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವರ ಮನೆಯಲ್ಲಿ ನಟಿ ಸ್ನೇಹಾ ಶೆಟ್ಟಿ ಚಿನ್ನ ಕದ್ದಿದ್ದಾರೆಂದು ಪೊಲೀಸರು ಆರೋಪಿಸಿದ್ದು, ನಟಿಯಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ನಟಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಸ್ನೇಹಾ ಶೆಟ್ಟಿ, ಪ್ರಸಾದ್ ಬಾಬು ಅವರ ಮಗಳು ಮೌನಿಕಾರ ಗೆಳತಿಯಾಗಿದ್ದು, ಮೌನಿಕಾಳ ಭೇಟಿಗೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದರು. ಪ್ರಸಾದ್ ಬಾಬು ಕುಟುಂಬದ ಜೀವನ ಶೈಲಿ, ಆದಾಯ ಇನ್ನಿತರೆ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದ ಸ್ನೇಹಾ ಶೆಟ್ಟಿ, ಪ್ರಸಾದ್ ಬಾಬು ಅವರು ಹಣ, ಒಡವೆಗಳನ್ನೆಲ್ಲ ಎಲ್ಲಿಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಹ ತಿಳಿದುಕೊಂಡಿದ್ದರು.

ಪ್ರಸಾದ್ ಬಾಬು ಕುಟುಂಬದೊಟ್ಟಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ಸ್ನೇಹಾ ಮೇಲೆ ಕುಟುಂಬವವೂ ವಿಶ್ವಾಸವಿಟ್ಟಿದ್ದರು. ಇದೇ ವಿಶ್ವಾಸ ಬಳಸಿ ಸ್ನೇಹಾ ಶೆಟ್ಟಿ ಆಗಾಗ್ಗೆ ಅವರ ಮನೆಯಿಂದ ಚಿನ್ನ ಕದಿಯುತ್ತಿದ್ದರು. ಇತ್ತೀಚೆಗಷ್ಟೆ ಪ್ರಸಾದ್ ಬಾಬು ಹಾಗೂ ಅವರ ಕುಟುಂಬ ಮದುವೆಗೆಂದು ಹೊರಗೆ ಹೋಗಿದ್ದಾಗ ಸ್ನೇಹಾ ಶೆಟ್ಟಿ, ಪ್ರಸಾದ್ ಅವರ ಮನೆಯಿಂದ ಸುಮಾರು ಒಂದು ಕೆಜಿಗೂ ಹೆಚ್ಚು ಚಿನ್ನ ಕದ್ದಿದ್ದರು.

ಇದನ್ನೂ ಓದಿ:ಹನಿ ಟ್ರ್ಯಾಪ್: ವೃದ್ಧನ ವಿವಸ್ತ್ರಗೊಳಿಸಿ ಕಿರುಕುಳ, ಟಿವಿ ನಟಿ ಬಂಧನ

ಮದುವೆಯಿಂದ ಮರಳಿ ಬಂದ ಪ್ರಸಾದ್ ಬಾಬು ಕುಟುಂಬಕ್ಕೆ ಚಿನ್ನ ಕಳ್ಳತನವಾಗಿರುವ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಬೆರಳಚ್ಚುತಜ್ಞರ ಸಹಾಯಗಳನ್ನು ಪಡೆದು ಸುಮಾರು 11 ಜನರನ್ನು ಆರೋಪಿಗಳನ್ನಾಗಿ ಗುರುತಿಸಿ ವಿಚಾರಣೆ ನಡೆಸಿದ್ದರು. ಆರೋಪಿಗಳ ಪಟ್ಟಿಯಲ್ಲಿ ಸ್ನೇಹಾ ಶೆಟ್ಟಿ ಸಹ ಇದ್ದರು. ಸ್ನೇಹಾ ಶೆಟ್ಟಿಯ ವಿಚಾರಣೆ ನಡೆಸಿದಾಗ ತಾವು ಚಿನ್ನ ಕದ್ದಿರುವ ಸತ್ಯವನ್ನು ಸ್ನೇಹಾ ಒಪ್ಪಿಕೊಂಡಿದ್ದಾರೆ.

ಚಿನ್ನ ಕದ್ದ ಬಳಿಕ ಸ್ನೇಹಾ ಶೆಟ್ಟಿ ಗೋವಾಕ್ಕೆ ಪರಾರಿಯಾಗಿದ್ದರು. ನಟಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 74 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನವನ್ನು ತಮಗೆ ನೀಡಲಾಗದೆಂದು, ಬಾಕಿ ಚಿನ್ನವನ್ನು ಕೊಡುವಂತೆ ಒತ್ತಾಯ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರ ಮುಂದೆಯೇ ನಟಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತನಿಖೆ ಇನ್ನೂ ಚಾಲ್ತಿಯಲ್ಲಿದೆ. ಸ್ನೇಹಾ ಶೆಟ್ಟಿ ತೆಲುಗಿನ ‘ಯುವರ್ಸ್ ಲವಿಂಗ್ಲಿ’, ‘ದಿ ಟ್ರಿಪ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಕೆಲವು ಕಿರು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿಯೂ ಸಕ್ರಿಯರಾಗಿದ್ದ ಸ್ನೇಹಾ ಶೆಟ್ಟಿ ಸಾಕಷ್ಟು ಫಾಲೋವರ್​ಗಳನ್ನು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ