ಪ್ರಭಾಸ್ ನಟನೆಯ ‘ಆದಿಪುರುಷ್’ (Adipurush Movie) ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಕೆಟ್ಟದಾಗಿ ವಿಮರ್ಶೆಗಳನ್ನು ಪಡೆದಿದೆ. ಟೀಸರ್-ಟ್ರೇಲರ್ ರಿಲೀಸ್ ಆದಾಗಲೇ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಸಿನಿಮಾ ರಿಲೀಸ್ ಆದ ಬಳಿಕ ಈ ಟೀಕೆ ಹೆಚ್ಚಾಯಿತು. ಈಗ ‘ಆದಿಪುರುಷ್’ ಸಿನಿಮಾದ ಕಲೆಕ್ಷನ್ ತಗ್ಗುತ್ತಿದೆ. ಜೂನ್ 21ರಂದು ಈ ಚಿತ್ರ ಕೇವಲ 7.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಭಾರತದಲ್ಲಿ 255 ಕೋಟಿ ರೂಪಾಯಿ ದಾಟಿದೆ. ಕೆಟ್ಟ ವಿಮರ್ಶೆ ಪಡೆದ ಹೊರತಾಗಿಯೂ ಸಿನಿಮಾ ಇಷ್ಟೊಂದು ಗಳಿಕೆ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಅನೇಕರು ತೆಗೆದಿದ್ದಾರೆ.
ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ನಟಿಸಿದ್ದಾರೆ. ಓಂ ರಾವತ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಸಿನಿಮಾ ರಿಲೀಸ್ ಆದ ಬಳಿಕ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳು ತುಂಬಿ ಹೋದವು. ‘ಆದಿಪುರುಷ್’ ಚಿತ್ರವನ್ನು ಸಾಕಷ್ಟು ಮಂದಿ ತೆಗಳಿದ್ದಾರೆ. ಇದಕ್ಕೆ ಕಾರಣ ಸಿನಿಮಾದಲ್ಲಿ ಇರುವ ವಿಚಾರಗಳು. ರಾವಣ ಬ್ರಾಹ್ಮಣನಾಗಿ ಮಾಂಸ ಮುಟ್ಟುವುದು, ಪುಷ್ಪಕ ವಿಮಾನದ ಬದಲು ಬಾವಲಿ ಬಳಸಿದ್ದು, ಮಾನ ಹಾನಿ ಆಗುವಂಥ ಡೈಲಾಗ್ಗಳು, ಕಥೆಯನ್ನು ತಿರುಚಿದ್ದು, ಪಾತ್ರಗಳನ್ನು ಬೇಕಾಬಿಟ್ಟಿ ತೋರಿಸಿದ್ದು ಸಿನಿಮಾಗೆ ಹಿನ್ನಡೆ ಆಗಿದೆ. ಆದರೆ, ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗಿದೆ. ಇದರ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ.
‘ಐದು ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಆದಿಪುರುಷ್ ಸಿನಿಮಾ 390 ಕೋಟಿ ರೂಪಾಯಿ ಗಳಿಕೆ ಮಾಡಿದೆ’ ಎಂದು ಕೃತಿ ಸನೋನ್ ಅವರು ಪೋಸ್ಟ್ ಒಂದನ್ನು ಹಾಕಿದ್ದರು. ಇದಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ಹಲವರು ಇದು ಫೇಕ್ ಕಲೆಕ್ಷನ್ ರಿಪೋರ್ಟ್ ಎಂದಿದ್ದಾರೆ. ಕೆಲವರು ಕೃತಿ ಪರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಟೀಕೆಗಳ ಮಧ್ಯೆಯೇ ‘ಆದಿಪುರುಷ್’ ಚಿತ್ರಕ್ಕೆ ಹೈಕೋರ್ಟ್ನಿಂದ ದೊಡ್ಡ ರಿಲೀಫ್
‘ಆದಿಪುರುಷ್’ ಸಿನಿಮಾಗೆ ಸಖತ್ ಹೈಪ್ ಸೃಷ್ಟಿ ಆಗಿತ್ತು. ಈ ಕಾರಣಕ್ಕೆ ಅನೇಕರು ಸಿನಿಮಾ ವೀಕ್ಷಣೆ ಮಾಡಿದ್ದರು. ಹೀಗಾಗಿ, ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಇಳಿಕೆ ಆಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ