ಬಹುನಿರೀಕ್ಷಿತ ‘ಆದಿಪುರುಷ್’ (Adipurush) ಸಿನಿಮಾದಿಂದ ಪ್ರಭಾಸ್ ಅವರು ಯಶಸ್ಸು ಪಡೆಯಬೇಕು ಎಂದು ಕಾದಿದ್ದಾರೆ. ಆದರೆ ಈ ಚಿತ್ರ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇದೆ. ಮೊದಲು ಟೀಸರ್ ಬಿಡುಗಡೆ ಮಾಡಿದಾಗ ಕಳಪೆ ಗ್ರಾಫಿಕ್ಸ್ ಮತ್ತು ಪಾತ್ರಗಳ ವಿಚಿತ್ರ ವೇಷದಿಂದ ಟೀಕೆ ಕೇಳಿಬಂತು. ಈಗ ಈ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಭಾಸ್ (Prabhas) ಅಭಿನಯದ ಈ ಚಿತ್ರದ ಅವಧಿ ಬರೋಬ್ಬರಿ 174 ನಿಮಿಷ ಇದೆ. ಅಂದರೆ 3 ಗಂಟೆಗೆ ಕೇವಲ 6 ನಿಮಿಷ ಮಾತ್ರ ಬಾಕಿ. ಇಂಟರ್ವಲ್ ಸಮಯವನ್ನೂ ಸೇರಿದರೆ ಮೂರು ಗಂಟೆ ಮೀರಲಿದೆ. ಇದು ಪ್ರೇಕ್ಷಕರಿಗೆ ತಲೆನೋವಾಗಿ ಪರಿಗಣಿಸಿದರೂ ಅಚ್ಚರಿ ಇಲ್ಲ. ಅಷ್ಟಕ್ಕೂ ‘ಆದಿಪುರುಷ್’ ಸಿನಿಮಾದ ಅವಧಿ (Adipurush Movie Duration) ಬಗ್ಗೆ ಮಾಹಿತಿ ಬಹಿರಂಗ ಆಗಿದ್ದು ಹೇಗೆ? ಅದಕ್ಕೆ ಉತ್ತರ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್’!
ನ್ಯೂಯಾರ್ಕ್ನಲ್ಲಿ ಜೂನ್ 7ರಿಂದ ಜೂನ್ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್’ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್’ ಸಿನಿಮಾ ಆಯ್ಕೆ ಆಗಿದೆ. ಸಿನಿಮೋತ್ಸವದ ವೆಬ್ಸೈಟ್ನಲ್ಲಿ ಈ ಚಿತ್ರದ ಅವಧಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಮೂರು ಗಂಟೆ ಅವಧಿಯ ಸಿನಿಮಾವನ್ನು ನೋಡಬೇಕು ಎಂದರೆ ಪ್ರೇಕ್ಷಕರಿಗೆ ಸಖತ್ ತಾಳ್ಮೆ ಅಗತ್ಯ. ಹಾಗಾಗಿ ಇಷ್ಟು ದೀರ್ಘವಾದ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: Om Raut: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಆದ ‘ಆದಿಪುರುಷ್’ ನಿರ್ದೇಶಕ ಓಂ ರಾವತ್
‘ಬಾಹುಬಲಿ 2’ ಬಳಿಕ ಪ್ರಭಾಸ್ ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ‘ಆದಿಪುರುಷ್’ ಚಿತ್ರದಲ್ಲಿ ಅವರು ರಾಮನ ಪಾತ್ರ ಮಾಡಿದ್ದಾರೆ. ಪೌರಾಣಿಕ ಕಥಾಹಂದರದ ಈ ಚಿತ್ರಕ್ಕೆ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಪೌರಾಣಿಕ ಸಿನಿಮಾಗಳು ಗೆದ್ದಿದ್ದು ತೀರಾ ವಿರಳ. ಹಾಗಾಗಿ ‘ಆದಿಪುರುಷ್’ ಭವಿಷ್ಯ ಏನಾಗಬಹುದು ಎಂದು ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.
ಇದನ್ನೂ ಓದಿ: Adipurush: ‘ಆದಿಪುರುಷ್’ ಚಿತ್ರತಂಡದ ಮೇಲೆ ಬಿತ್ತು ಕೇಸ್; ರಾಮನ ಈ ಪೋಸ್ಟರ್ನಲ್ಲಿ ಅಂಥ ತಪ್ಪು ಏನಿದೆ?
‘ಆದಿಪುರುಷ್’ ಚಿತ್ರವನ್ನು ಟಿ-ಸೀರಿಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಹಾಗೂ ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನ, ಅಂದರೆ ಜೂನ್ 13ರಂದು ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರೀಮಿಯರ್ ಶೋ ನಡೆಯಲಿದೆ.
Beyond Excited and Honored! Adipurush, the epic saga of courage and devotion, is set to make its world premiere at the prestigious #TribecaFestival on the 13th of June in New York. pic.twitter.com/bUiKWR6H4b
— Om Raut (@omraut) April 18, 2023
ಪ್ರಭಾಸ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಕೃತಿ ಸನೋನ್ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಅಬ್ಬರಿಸಲಿದ್ದಾರೆ. ರಾಮ ನವಮಿ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆದರೆ ಆ ಪೋಸ್ಟರ್ಗೆ ಕೆಲವರು ತಕರಾರು ತೆಗೆದಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.