‘ಇಂದಿರಾನಗರ್ ಕಾ ಗೂಂಡಾ ಹೂ ಮೈ’ ಎಂಬ ಡೈಲಾಗ್ ಈಗ ಎಲ್ಲೆಲ್ಲೂ ಫೇಮಸ್ ಆಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವ ಖಾಸಗಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ರಾಹುಲ್ ದ್ರಾವಿಡ್ ಅವರು ಈ ಡೈಲಾಗ್ ಹೇಳಿರುವುದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೇ ರೀತಿಯ ಅನೇಕ ಸಂಗತಿಗಳಿಗೆ ಈ ಡೈಲಾಗ್ ಬಳಕೆ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಬಾಲ್ಯದ ಫೋಟೋಗೆ ಇಂಥ ಕ್ಯಾಪ್ಷನ್ ನೀಡಿದ್ದರು. ಈಗ ಮಾಜಿ ಕ್ರಿಕೆಟರ್ ವೆಂಕಟೇಶ್ ಪ್ರಸಾದ್ ‘ನಾನು ಸಹ ಇಂದಿರಾ ನಗರದ ಗೂಂಡಾ’ ಎಂದು ಹೇಳುತ್ತಿದ್ದಾರೆ!
ವೆಂಕಟೇಶ್ ಪ್ರಸಾದ್ ಅವರು ಟ್ವಿಟರ್ನಲ್ಲಿ ಒಂದು ಹಳೇ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಪಾಕಿಸ್ತಾನಿ ಬ್ಯಾಟ್ಸ್ಮನ್ ಆಮೇರ್ ಸೊಹೇಲ್ ಅವರಿಗೆ 1996ರ ವಿಶ್ವಕಪ್ ಪಂದ್ಯದ ವೇಳೆ ವೆಂಕಟೇಶ್ ಪ್ರಸಾದ್ ನೀಡಿದ ಖಡಕ್ ತಿರುಗೇಟಿನ ದೃಶ್ಯ ಈ ಪೋಸ್ಟ್ನಲ್ಲಿದೆ. ಅದನ್ನು ಕಂಡು ಕ್ರಿಕೆಟ್ಪ್ರಿಯರು ಆ ಕಾಲದ ನೆನಪುಗಳಿಗೆ ಜಾರಿದ್ದಾರೆ.
ಇಂಡಿಯಾ ವರ್ಸಸ್ ಪಾಕಿಸ್ತಾನದ ಆ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. 15ನೇ ಓವರ್ನಲ್ಲಿ ವೆಂಕಟೇಶ್ ಪ್ರಸಾದ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್ನ 5ನೇ ಬಾಲ್ಗೆ ಆಮೇರ್ ಸೊಹೇಲ್ ಬೌಂಡರಿ ಬಾರಿಸಿದರು. ಅಲ್ಲದೆ, ‘ನಿಮ್ಮನ್ನೂ ಅಲ್ಲಿಗೆ ಕಳಿಸಿಬಿಡುತ್ತೇನೆ’ ಎಂಬ ಅರ್ಥದಲ್ಲಿ ವೆಂಕಟೇಶ್ ಪ್ರಸಾದ್ಗೆ ದಾರಿ ತೋರಿಸಿದರು! ಇಬ್ಬರ ನಡುವಿನ ಕ್ಲ್ಯಾಶ್ಗೆ ಇದು ಕಾರಣ ಆಯಿತು. ಆದರೇ ಅದೇ ಓವರ್ನ ನೆಕ್ಸ್ಟ್ ಬಾಲ್ಗೆ ಆಮೇರ್ ಸೊಹೇಲ್ರನ್ನು ವೆಂಕಟೇಶ್ ಪ್ರಸಾದ್ ಕ್ಲೀನ್ ಬೌಲ್ಡ್ ಮಾಡಿದರು! ಆ ಮೂಲಕ ಆಮೇರ್ ಸೊಹೇಲ್ನ ಪೊಗರಿಗೆ ವೆಂಕಟೇಶ್ ಪ್ರಸಾದ್ ಖಾರವಾದ ತಿರುಗೇಟು ನೀಡಿದ್ದರು!
Me to Aamir Sohail in Bangalore at 14.5- #IndiraNagarkaGunda hoon main ? pic.twitter.com/uF7xaPeTPl
— Venkatesh Prasad (@venkateshprasad) April 11, 2021
ಆ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುವ ಮೂಲಕ ‘ನಾನು ಕೂಡ ಇಂದಿರಾನಗರದ ಗೂಂಡಾ’ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Great ? Sir @venkateshprasad pic.twitter.com/zGqXRr26Q6
— Amardeep (@sing_amardeep) April 11, 2021
‘ಆ ಘಟನೆ ನಡೆದ ಬಳಿಕ ಆಮೇರ್ ಸೊಹೇಲ್ ಅವರು ಯಾರಿಗೂ ಈ ರೀತಿ ದಾರಿ ತೋರಿಸುವ ಧೈರ್ಯ ಮಾಡಲಿಲ್ಲ. ಒಂದು ವೇಳೆ ಯಾರಿಗಾದರೂ ಅಡ್ರೆಸ್ ಹೇಳುವುದಿದ್ದರೂ ಕೂಡ ಅವರು ಹಿಂದೇಟು ಹಾಕಲು ಶುರು ಮಾಡಿದರು. ಯಾಕೆಂದರೆ ಕಳೆದ ಬಾರಿ ತಾವು ವೆಂಕಟೇಶ್ ಪ್ರಸಾದ್ಗೆ ದಾರಿ ತೋರಿಸಿದ್ದಕ್ಕೆ ತಮಗೆ ಎಂಥ ಗತಿ ಬಂತು ಎಂಬುದು ಅವರಿಗೆ ಪದೇಪದೇ ನೆನಪಾಗುತ್ತಿತ್ತು’ ಎಂದು ಜನರು ಕಾಮೆಂಟ್ ಮಾಡಿದ್ದಾರೆ.
Nahi Najeeb Bhai. Had reserved some achievements for later. In the very next World cup in Eng in 1999 , took 5/27 at Manchester against Pakistan and they were unable to chase 228. God bless you.
— Venkatesh Prasad (@venkateshprasad) April 11, 2021
ಇನ್ನು, ವೆಂಕಟೇಶ್ ಪ್ರಸಾದ್ ಅವರ ಈ ಟ್ವೀಟ್ಗೆ ಕೆಲವರು ಕುಹಕ ಮಾಡಿದ್ದಾರೆ. ‘ವೆಂಕಟೇಶ್ ಪ್ರಸಾದ್ ಅವರು ತಮ್ಮ ಕರಿಯರ್ನಲ್ಲಿ ಮಾಡಿದ ಸಾಧನೆ ಇದೊಂದೇ’ ಎಂದು ನಜೀಬ್ ಎನ್ನುವವರು ಕಾಮೆಂಟ್ ಮಾಡಿದ್ದರು. ಅದಕ್ಕೂ ಕೂಡ ವೆಂಕಟೇಶ್ ಪ್ರಸಾದ್ ಸೂಕ್ತ ತಿರುಗೇಟು ನೀಡಿದ್ದಾರೆ. ‘ಅಷ್ಟೇ ಅಲ್ಲ ನಜೀವ್ ಭಾಯ್… ಆ ಬಳಿಕ ಇನ್ನಷ್ಟು ಸಾಧನೆ ಮಾಡಿದ್ದೇನೆ. ಇಂಗ್ಲೆಂಡ್ನಲ್ಲಿ ನಡೆದ 1999ರ ವರ್ಲ್ಡ್ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ಮ್ಯಾಚ್ನಲ್ಲಿ 27 ರನ್ಗೆ 5 ವಿಕೆಟ್ ಪಡೆದಿದ್ದೆ. ಅವರಿಗೆ 228 ರನ್ ಚೇಸ್ ಮಾಡಲು ಸಾಧ್ಯವಾಗಿರಲಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ವೆಂಕಟೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Rahul Dravid: ದ್ರಾವಿಡ್ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್ ಕೇಳಿ ನಗುತ್ತಿರುವ ನೆಟ್ಟಿಗರು
Indira Nagar Ka Gunda: ದ್ರಾವಿಡ್ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!
(After Rahul Dravid now Venkatesh Prasad says Indira Nagar Ka Gunda Hu Mai and one more video goes Viral)