ಡಿಸ್ಕವರಿ ಚಾನಲ್ನಲ್ಲಿ ಪ್ರಸಾರವಾಗುವ ‘ಇನ್ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಕಾರ್ಯಕ್ರಮ ಈಗಾಗಲೇ ಸಾಕಷ್ಟು ಹೆಸರು ಮಾಡಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ತಾರೆಯರಾದ ಅಜಯ್ ದೇವಗನ್ ಹಾಗೂ ವಿಕ್ಕಿ ಕೌಶಲ್ ಭಾಗವಹಿಸುತ್ತಿದ್ದಾರೆ ಎನ್ನುವುದೂ ಕೂಡ ಬಹಳ ದೊಡ್ಡ ಸುದ್ದಿಯಾಗಿತ್ತು. ಈ ತಾರೆಯರು ಕಾಣಿಸಿಕೊಂಡಿದ್ದ ಕಾರ್ಯಕ್ರಮದ ಪ್ರಸಾರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಕಾಯುವಿಕೆಗೆ ವಾಹಿನಿ ಅಂತ್ಯ ಹಾಡಿದ್ದು, ಅಜಯ್ ದೇವಗನ್ ಸಂಚಿಕೆಯ ಪ್ರೀಮಿಯರ್ ದಿನಾಂಕವನ್ನು ಘೋಷಿಸಿದೆ. ಇದರೊಂದಿಗೆ ಅಜಯ್ ದೇವಗನ್ ಹಾಗೂ ಬೇರ್ ಗ್ರಿಲ್ಸ್ ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರೋಮೋವನ್ನು ಕೂಡ ಬಿಡುಗಡೆ ಮಾಡಿದ್ದು ಮೈನವಿರೇಳಿಸುವಂತಿದೆ.
ಹಿಂದೂ ಮಹಾಸಾಗರದಲ್ಲಿ ಶಾರ್ಕ್ಗಳಿಂದ ಬಚಾವಾಗುತ್ತಾ ಜನ ವಾಸವಿಲ್ಲದ ದ್ವೀಪವೊಂದಕ್ಕೆ ತೆರಳುತ್ತಿರುವ ಸುಳಿವನ್ನು ಪ್ರೋಮೋದಲ್ಲಿ ಬಿಟ್ಟುಕೊಡಲಾಗಿದೆ. ಈ ಸಂಚಿಕೆಗಳಲ್ಲಿ ಅಜಯ್ ದೇವಗನ್ ವೃತ್ತಿ ಬದುಕಿನ ಕುರಿತಾದ ಚರ್ಚೆಗಳು, ಅವರು ಚಿತ್ರರಂಗದಲ್ಲಿ ಬೆಳೆದ ಬಗೆ ಮೊದಲಾದ ಕುತೂಹಲಕರ ಸಂಗತಿಗಳೂ ಇರಲಿವೆ. ಇದರಿಂದಾಗಿ ವೀಕ್ಷಕರಿಗೆ ಈ ಕಾರ್ಯಕ್ರಮದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಚಾನಲ್ ಹಂಚಿಕೊಂಡಿರುವ ಪ್ರೋಮೋ ಇಲ್ಲಿದೆ:
ಅಜಯ್ ದೇವಗನ್ ಭಾಗವಹಿಸಿರುವ ಸಂಚಿಕೆಯು ಅಕ್ಟೋಬರ್ 22ರ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಒಟಿಟಿ ಹಾಗೂ ವಾಹಿನಿಯಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ. ‘ಇನ್ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಖ್ಯಾತ ಕಾರ್ಯಕ್ರಮವಾಗಿದ್ದು, ಕಾಡಿನಲ್ಲಿ ಅತ್ಯಂತ ಕಷ್ಟದ ಸಂದರ್ಭದಲ್ಲಿ ಬಚಾವಾಗುವುದು ಹೇಗೆ ಎಂಬ ಪರಿಕಲ್ಪನೆಯಲ್ಲಿ ಮೂಡಿಬರುತ್ತದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಟೆನ್ನಿಸ್ ತಾರೆ ರೋಜರ್ ಫೆಡರರ್ ಸೇರಿದಂತೆ ಅನೇಕರು ಬ್ರಿಟನ್ ಮೂಲದ ಬೇರ್ ಗ್ರಿಲ್ಸ್ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರಲ್ಲದೇ ದಕ್ಷಿಣ ಭಾರತದ ಖ್ಯಾತ ನಟ ರಜಿನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:
‘ಪರಭಾಷೆ ಆಫರ್ ಇದೆ, ಆದ್ರೆ ನನ್ನ ಆಲೋಚನೆ ಕನ್ನಡದ್ದು ಮಾತ್ರ’: ನಿರ್ದೇಶಕ ಸತ್ಯ ಪ್ರಕಾಶ್