
ಅಕ್ಷಯ್ ಖನ್ನಾ (Akshay Khanna), ದಶಕಗಳಿಂದ ಚಿತ್ರರಂಗದಲ್ಲಿದ್ದರೂ ಸಹ ಆರಕ್ಕೇರಿರಲಿಲ್ಲ, ಮೂರಕ್ಕಿಳಿದಿರಲಿಲ್ಲ. ಆದರೆ ಈಗ ‘ಧುರಂಧರ್’ ಸಿನಿಮಾ ಮೂಲಕ ಏಕಾಏಕಿ ಸ್ಟಾರ್ ಆಗಿದ್ದಾರೆ. ಅದ್ಭುತ ನಟ ಅಕ್ಷಯ್ ಖನ್ನಾ ಅವರ ನಟನಾ ಪ್ರತಿಭೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಠಾತ್ತನೇ ಅಕ್ಷಯ್ ಖನ್ನಾ ಬೇಡಿಕೆ ಏರಿಕೆ ಆಗಿದೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆಯೂ ಸಹ ದುಪ್ಪಟ್ಟಾಗಿದೆ. ಹಠಾತ್ತನೇ ಬಂದ ಬೇಡಿಕೆ, ಜನಪ್ರಿಯತೆಯ ಪರಿಣಾಮ ಬಾಲಿವುಡ್ನ ಸ್ಟಾರ್ ನಟರ ಸಿನಿಮಾಗಳನ್ನೇ ಕೈಬಿಡುತ್ತಿದ್ದಾರೆ ಅಕ್ಷಯ್ ಖನ್ನಾ, ಆದರೆ ಇದೀಗ ಅವರು ಕನ್ನಡತಿ, ನಟಿ ಭೂಮಿ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಕುಂದಾಪುರದ ಭೂಮಿ ಶೆಟ್ಟಿ, ಕನ್ನಡದ ‘ಇಕ್ಕಟ್’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಭೂಮಿ ಶೆಟ್ಟಿ ನಟಿಸುತ್ತಿರುವ ತೆಲುಗು ಸಿನಿಮಾ ‘ಮಹಾಕಾಳಿ’ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈ ಸಿನಿಮಾನಲ್ಲಿ ಅಕ್ಷಯ್ ಖನ್ನಾ ಸಹ ನಟಿಸಿದ್ದಾರೆ. ಅಕ್ಷಯ್ ಖನ್ನಾ ಈಗಾಗಲೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಸಿನಿಮಾ ನಿರ್ದೇಶನ ಮಾಡುತ್ತಿರುವ ಪೂಜಾ ಕೊಲ್ಲೂರು ಅವರು ಅಕ್ಷಯ್ ಖನ್ನಾ ಜೊತೆಗಿನ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ
ಹೆಸರೇ ಸೂಚಿಸುತ್ತಿರುವಂತೆ ‘ಮಹಾಕಾಳಿ’ ಸಿನಿಮಾ ಫಿಕ್ಷನಲ್ ಸಿನಿಮಾ ಆಗಿದ್ದು, ಅಕ್ಷಯ್ ಖನ್ನಾ ಅವರು ವಿಶ್ವಾಮಿತ್ರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವಾಮಿತ್ರನ ಪಾತ್ರ ಸಿನಿಮಾದ ಬಹು ಮುಖ್ಯ ಪಾತ್ರಗಳಲ್ಲಿ ಒಂದಾಗಿದ್ದು, ಈ ಬಗ್ಗೆ ಮಾತನಾಡಿರುವ ನಿರ್ದೇಶಕಿ ಪೂಜಾ ಕೊಲ್ಲೂರು, ‘ಶುಕ್ರಾಚಾರ್ಯ ಪಾತ್ರ ವಿಲನ್ ಅಥವಾ ಹೀರೋ ಎಂದಲ್ಲ. ಎರಡಕ್ಕಿಂತಲೂ ಭಿನ್ನವಾದ ವ್ಯಕ್ತಿತ್ವ ಆ ಪಾತ್ರದ್ದು. ಹಾಗಾಗಿ ನಾವು ಅಕ್ಷಯ್ ಖನ್ನಾ ಅಂಥಹಾ ಅದ್ಭುತ ನಟರನ್ನು ಆ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ. ಅಕ್ಷಯ್ ಖನ್ನಾ ಅವರ ದೃಶ್ಯಗಳನ್ನು ಮುಂಬೈನಲ್ಲಿಯೇ ಚಿತ್ರೀಕರಣ ಮಾಡಿದೆ ಚಿತ್ರತಂಡ.
ಈ ಹಿಂದೆ ‘ಹನುಮ್ಯಾನ್’ ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ನೀಡಿರುವ ಇದೀಗ ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ವರ್ಮಾ, ‘ಮಹಾಕಾಳಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಪೂಜಾ ಕೊಲ್ಲೂರು ಸಹ ಕನ್ನಡದವರೇ ಆಗಿದ್ದು, ಈ ಹಿಂದೆ ತೆಲುಗಿನ ‘ಮಾರ್ಟಿನ್ ಲೂಥರ್ ಕಿಂಗ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾನಲ್ಲಿ ಸಂಪೂರ್ಣೇಶ್ ಬಾಬು ನಾಯಕನಾಗಿ ನಟಿಸಿದ್ದರು. ತೆಲುಗಿನ ‘ಮಂಡೇಲ’ ಸಿನಿಮಾದ ರೀಮೇಕ್ ಅದಾಗಿತ್ತು. ಇದೀಗ ‘ಮಹಾಕಾಳಿ’ ಪೂಜಾ ಅವರ ಸ್ವಂತ ಸಿನಿಮಾ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ