ಬಾಲಿವುಡ್ನ ಬೇರೆಲ್ಲ ನಟರನ್ನೂ ಹಿಂದಿಕ್ಕಿ ತಮ್ಮದೇ ಆದ ಚಾರ್ಮ್ ಕಾಪಾಡಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರು ಸದ್ಯ ‘ರಾಮ್ ಸೇತು’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಮುಹೂರ್ತ ನೆರವೇರಿಸಿ ಶೂಟಿಂಗ್ ಆರಂಭಿಸಲಾಗಿತ್ತು. ಎಲ್ಲವೂ ಸರಾಗವಾಗಿ ನಡೆಯುತ್ತಿದೆ ಎನ್ನುವಾಗ ಅಕ್ಷಯ್ ಕುಮಾರ್ ಅವರು ಈ ಸಿನಿಮಾ ಕುರಿತಂತೆ ಅಭಿಮಾನಿಗಳ ಸಲಹೆ ಕೇಳುತ್ತಿದ್ದಾರೆ!
ಅಭಿಮಾನಿಗಳ ಬಳಿ ಅಕ್ಷಯ್ ಕುಮಾರ್ ಸಲಹೆ ಕೇಳುತ್ತಿದ್ದಾರೆ ಎಂದಮಾತ್ರಕ್ಕೆ ಅವರಿಗೆ ಏನೋ ಗೊಂದಲ ಕಾಡುತ್ತಿದೆ ಎಂದೇನಲ್ಲ. ಸದ್ಯ ಅವರು ಈ ಸಿನಿಮಾದಲ್ಲಿ ತಮ್ಮ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ಲುಕ್ ಬಗ್ಗೆ ಫ್ಯಾನ್ಸ್ ಕಡೆಯಿಂದ ಪ್ರತಿಕ್ರಿಯೆ ಪಡೆಯಲು ಕಾಯುತ್ತಿದ್ದಾರೆ. ಈ ಕುರಿತಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಪಾಲಿನ ಒಂದು ವಿಶೇಷ ಸಿನಿಮಾದ ಪಯಣ ಇಂದು ಶುರುವಾಗಿದೆ. ರಾಮ್ ಸೇತು ಶೂಟಿಂಗ್ ಆರಂಭ ಮಾಡಿದ್ದೇವೆ. ಒಬ್ಬ ಪುರಾತತ್ವಶಾಸ್ತ್ರಜ್ಞನಾಗಿ ಈ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ನನ್ನ ಲುಕ್ ಹೇಗಿದೆ ಎಂಬುದನ್ನು ನಿಮ್ಮಿಂದ ಕೇಳಿ ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಅಭಿಪ್ರಾಯ ನನಗೆ ಯಾವಾಗಲೂ ಮುಖ್ಯವಾಗುತ್ತದೆ’ ಎಂದು ಅಕ್ಷಯ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಲುಕ್ನೊಂದಿಗೆ ‘ರಾಮ್ ಸೇತು’ಗಾಗಿ ಅಕ್ಷಯ್ ಕುಮಾರ್ ಶೂಟಿಂಗ್ ಆರಂಭಿಸಿದ್ದಾರೆ. ಸ್ವಲ್ಪ ಉದ್ದ ಕೂದಲು, ಗಂಭೀರ ಮುಖಭಾವ, ಅದಕ್ಕೆ ಒಪ್ಪುವಂತಹ ಕನ್ನಡಕ ಧರಿಸಿ ಅಕ್ಕಿ ಪೋಸ್ ನೀಡಿದ್ದಾರೆ. ಅಭಿಮಾನಿಗಳಿಗೆ ಈ ಲುಕ್ ತುಂಬ ಇಷ್ಟವಾಗಿದೆ. ರಾಮ ಸೇತು ನಿಜವೋ ಅಥವಾ ಕಾಲ್ಪನಿಕವೋ ಎಂಬ ಚರ್ಚೆ ಬಹಳ ಕಾಲದಿಂದಲೂ ನಡೆಯುತ್ತಲೇ ಇದೆ. ಅದೇ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ.
2020ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಈ ಚಿತ್ರವನ್ನು ಘೋಷಿಸಿದರು. ಆಗಿನಿಂದಲೇ ‘ರಾಮ್ ಸೇತು’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತು. ಈ ಚಿತ್ರಕ್ಕೆ ಕೇಪ್ ಆಫ್ ಗುಡ್ ಫಿಲ್ಮ್ಸ್, ಅಬಂಡಾನ್ಷಾ ಎಂಟರ್ಟೇನ್ಮೆಂಟ್, ಅಮೇಜಾನ್ ಪ್ರೈಂ ವಿಡಿಯೋ ಮತ್ತು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಗಳು ಬಂಡವಾಳ ಹೂಡುತ್ತಿವೆ.
ಇದನ್ನೂ ಓದಿ: ರಾಮ ಸೇತು ವಿಚಾರಕ್ಕೆ ಕೈ ಹಾಕಿದ ಅಮೇಜಾನ್ ಪ್ರೈಂ! ಅಕ್ಷಯ್ ಕುಮಾರ್ ಮೇಲೆ ದೊಡ್ಡ ಜವಾಬ್ದಾರಿ