ನಾಳೆಯಿಂದ ಎಲ್ಲ ತೆಲುಗು ಸಿನಿಮಾಗಳ ಚಿತ್ರೀಕರಣ ಅಚಾನಕ್ ಬಂದ್

Telugu Movie Industry: ತೆಲುಗು ಚಿತ್ರರಂಗದ ಭಾರತದ ಲಾಭದಾಯಕ ಮತ್ತು ಸಿನಿಮಾಗಳ ಮೇಲೆ ಅತಿ ಹೆಚ್ಚು ಬಂಡವಾಳ ಹೂಡುವ ಚಿತ್ರರಂಗ. ತೆಲುಗಿನ ಹಲವು ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಪ್ರಸ್ತುತ ನಡೆಯುತ್ತಿವೆ. ಆದರೆ ಹಠಾತ್ತನೆ ನಾಳೆಯಿಂದ (ಆಗಸ್ಟ್ 04) ಎಲ್ಲ ತೆಲುಗು ಸಿನಿಮಾಗಳ ಚಿತ್ರೀಕರಣ ಬಂದ್ ಆಗುತ್ತಿದೆ.

ನಾಳೆಯಿಂದ ಎಲ್ಲ ತೆಲುಗು ಸಿನಿಮಾಗಳ ಚಿತ್ರೀಕರಣ ಅಚಾನಕ್ ಬಂದ್
Shooting

Updated on: Aug 03, 2025 | 8:48 PM

ತೆಲುಗು ಸಿನಿಮಾರಂಗ (Tollywood), ಭಾರತದ ಅತ್ಯಂತ ಲಾಭದಾಯಕ ಚಿತ್ರರಂಗ. ತೆಲುಗು ಚಿತ್ರರಂಗದಷ್ಟು ಹಣ ಹೂಡುವ ಮತ್ತು ಲಾಭಗಳಿಸುವ ಮತ್ತೊಂದು ಚಿತ್ರರಂಗ ಇಲ್ಲ. ಬಾಲಿವುಡ್​ಗಿಂತಲೂ ಹೆಚ್ಚಿನ ಹಣವನ್ನು ತೆಲುಗು ಚಿತ್ರರಂಗ ಹೂಡಿಕೆ ಮಾಡುತ್ತದೆ ಮತ್ತು ಲಾಭವಾಗಿ ಪುನಃ ಪಡೆದುಕೊಳ್ಳುತ್ತದೆ. ನರೇಂದ್ರ ಮೋದಿ ಸಹ ತೆಲುಗು ಚಿತ್ರರಂಗವನ್ನು ಹಲವು ಸಂದರ್ಭಗಳಲ್ಲಿ ಕೊಂಡಾಡಿದ್ದಾರೆ. ಭಾರತ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ತೆಲುಗು ಸಿನಿಮಾ ರಂಗದ ಯೋಗದಾನ ದೊಡ್ಡದಿದೆ. ವರ್ಷಕ್ಕೆ ನೂರಾರು ಸಿನಿಮಾಗಳು ತೆಲುಗು ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತವೆ. ಆದರೆ ನಾಳೆಯಿಂದ ಹಠಾತ್ತನೆ ಎಲ್ಲ ಸಿನಿಮಾ ಚಿತ್ರೀಕರಣ ಬಂದ್ ಆಗುತ್ತಿದೆ.

ರಾಜಮೌಳಿಯ ಸಿನಿಮಾ ಸೇರಿದಂತೆ ತೆಲುಗಿನ ಎಲ್ಲ ಸಿನಿಮಾಗಳ ಚಿತ್ರೀಕರಣ ನಾಳೆ (ಆಗಸ್ಟ್ 4) ಬಂದ್ ಮಾಡಲಾಗುತ್ತಿದೆ. ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ (ತೆಲುಗು ಸಿನಿಮಾ ಕಾರ್ಮಿಕರ ಒಕ್ಕೂಟ) ಬಂದ್​ಗೆ ಕರೆ ನೀಡಿದೆ. 24 ವಿವಿಧ ವಿಭಾಗಗಳ ಸಿನಿಮಾ ಕಾರ್ಮಿಕರುಗಳ ಒಕ್ಕೂಟ ಇದಾಗಿದ್ದು, ತನ್ನ ಸುಪರ್ಧಿಗೆ ಬರುವ 24 ವಿಭಾಗದ ಕಾರ್ಮಿಕರುಗಳಿಗೆ ಏಕಾ ಏಕಿ ಸಿನಿಮಾ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ನಾಳೆಯಿಂದ ತೆಲುಗಿನ ಎಲ್ಲ ಸಿನಿಮಾ ಚಿತ್ರೀಕರಣಗಳು ಬಂದ್ ಆಗಲಿವೆ.

ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್, ತೆಲುಗು ಸಿನಿಮಾ ಕಾರ್ಮಿಕರ ದಿನಗೂಲಿ ಮೊತ್ತ ಹೆಚ್ಚಿಸುವಂತೆ ನಿರ್ಮಾಪಕರ ಸಂಘದೊಂದಿಗೆ ಕೆಲ ತಿಂಗಳುಗಳಿಂದಲೂ ಸಭೆ ನಡೆಸುತ್ತಲೇ ಇತ್ತು. ಸಿನಿಮಾ ನಾಯಕರ ಸಂಭಾವನೆ ಹೆಚ್ಚಾಗಿದೆ, ನಟ-ನಟಿಯರ ಸಂಭಾವನೆ ಹೆಚ್ಚಾಗಿದೆ. ಒಟಿಟಿ ಇನ್ನಿತರೆ ಕಾರಣಕ್ಕೆ ಸಿನಿಮಾ ನಿರ್ಮಾಪಕರಿಗೆ ಬರುವ ಲಾಭ ಹತ್ತುಪಟ್ಟಾಗಿದೆ ಆದರೆ ಸಿನಿಮಾ ಕಾರ್ಮಿಕರ ದಿನಗೂಲಿ ವರ್ಷಗಳಿಂದಲೂ ಏರಿಕೆ ಆಗಿಲ್ಲ. ಹಾಗಾಗಿ ಕಾರ್ಮಿಕರ ದಿನಗೂಲಿಯನ್ನು 30% ಹೆಚ್ಚಳ ಮಾಡುವಂತೆ ಮನವಿ ಒತ್ತಾಯ ಮಾಡಲಾಗಿತ್ತು. ಇದಕ್ಕೆ ನಿರ್ಮಾಪಕ ಸಂಘ ಒಪ್ಪಿಲ್ಲ.

ಇದನ್ನೂ ಓದಿ:ಐದು ವರ್ಷದ ಬಳಿಕ ತೆಲುಗು ಸಿನಿಮಾ ಸಹಿ ಮಾಡಿದ ಪೂಜಾ ಹೆಗ್ಡೆ

ಇದೇ ಕಾರಣಕ್ಕೆ ಇಂದು ಹೈದರಾಬಾದ್​​ನಲ್ಲಿ ಸಭೆ ನಡೆಸಿದ ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ ಮುಖಂಡರು, ನಾಳೆಯಿಂದಲೇ ಸಿನಿಮಾಗಳ ಚಿತ್ರೀಕರಣ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಆದರೆ ಯಾವ ನಿರ್ಮಾಣ ಸಂಸ್ಥೆ ಹೊಸ ದಿನಗೂಲಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚುವರಿ ಕೂಲಿ ನೀಡುತ್ತಿದೆಯೋ ಆ ಸಿನಿಮಾಗಳ ಕೆಲಸಗಳು ಮಾತ್ರವೇ ಮುಂದುವರೆಯಲಿವೆ. ಹಳೆ ದಿನಗೂಲಿ ವ್ಯವಸ್ಥೆ ಹೊಂದಿರುವ ಸಿನಿಮಾಗಳ ಚಿತ್ರೀಕರಣ ಬಂದ್ ಆಗಲಿವೆ.

ಹಬ್ಬಗಳ ಸಮಯ ಹತ್ತಿರವಿದ್ದು ಹಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿ ಲಘು-ಬಗೆಯಲ್ಲಿ ಚಿತ್ರೀಕರಣ ಮಾಡುತ್ತಿವೆ. ಇಂಥಹಾ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರ ಈ ಪ್ರತಿಭಟನೆ ಸಿನಿಮಾ ತಂಡಗಳಿಗೆ ಭಾರಿ ಹೊಡೆತ ನೀಡಲಿದೆ. ಹಲವಾರು ದೊಡ್ಡ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿವೆ. ರಾಜಮೌಳಿ-ಮಹೇಶ್ ಬಾಬು ಸಿನಿಮಾ, ಪ್ರಭಾಸ್ ನಟನೆಯ ಎರಡು ಸಿನಿಮಾ, ಚಿರಂಜೀವಿ ನಟನೆಯ ಎರಡು ಸಿನಿಮಾ, ಜೂ ಎನ್​ಟಿಆರ್ ನಟನೆಯ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಹೀಗೆ ಹಲವು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈಗ ಈ ಎಲ್ಲ ಸಿನಿಮಾಗಳ ಚಿತ್ರೀಕರಣ ಬಂದ್ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ