ಕಟ್ಟಪ್ಪ-ರಜನೀಕಾಂತ್ ನಡುವೆ ದ್ವೇಷಕ್ಕೆ ಕಾರಣ ಏನು? ಇಬ್ಬರ ನಡುವೆ ಏನಾಗಿತ್ತು?
Rajinikanth vs Sathyaraj: ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಮತ್ತು ರಜನೀಕಾಂತ್ ಒಂದು ಕಾಲದಲ್ಲಿ ಬಲು ಆತ್ಮೀಯ ಗೆಳೆಯರು ಆದರೆ ಆ ಬಳಿಕ ಪರಮ ವೈರಿಗಳಾಗಿಬಿಟ್ಟರು. 90ರ ದಶಕದಿಂದ ತೀರ ಇತ್ತೀಚೆಗಿನ ವರೆಗೆ ಪರಸ್ಪರ ವೈರಿಗಳಾಗಿಯೇ ಇದ್ದರು. ಈಗ ‘ಕೂಲಿ’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಷ್ಟಕ್ಕೂ ಇವರ ವೈರತ್ವಕ್ಕೆ ಕಾರಣ ಏನು?

ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಇದೇ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಬಹುತಾರಾಗಣದ ಸಿನಿಮಾ ಇದು. ರಜನೀಕಾಂತ್ ಜೊತೆಗೆ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಉಪೇಂದ್ರ, ಆಮಿರ್ ಖಾನ್, ಮಲಯಾಳಂ ಸೋಬಿನ್, ಶ್ರುತಿ ಹಾಸನ್, ರಚಿತಾ ರಾಮ್ ಅವರುಗಳು ನಟಿಸಿದ್ದಾರೆ. ವಿಶೇಷವೆಂದರೆ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸಿನಿಮಾನಲ್ಲಿ ನಟಿಸಿದ್ದಾರೆ. ಇದರಲ್ಲಿ ವಿಶೇಷತೆಯೆಂದರೆ ದಶಕಗಳ ಬಳಿಕ ರಜನೀಕಾಂತ್ ಮತ್ತು ಸತ್ಯರಾಜ್ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರು ಎಣ್ಣೆ-ಸೀಗೇಕಾಯಿಯಂತಿದ್ದವರು, ಆದರೆ ಈಗ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದೂ ಆತ್ಮೀಯ ಗೆಳೆಯರಾಗಿ.
ಅಸಲಿಗೆ 80ರ ದಶಕದಲ್ಲಿ ರಜನೀಕಾಂತ್ ಮತ್ತು ಸತ್ಯರಾಜ್ ಆತ್ಮೀಯ ಗೆಳೆಯರಾಗಿದ್ದರು. ಸತ್ಯರಾಜ್ ಸಹ ಆಗ ನಾಯಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಸತ್ಯರಾಜ್ ಮತ್ತು ರಜನೀಕಾಂತ್ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಾಯಕರಾಗಿ ನಟಿಸಿದ್ದುಂಟು, ರಜನೀಕಾಂತ್ ಅವರೇ ಕೆಲವು ಸಿನಿಮಾಗಳನ್ನು ಸತ್ಯರಾಜ್ಗೆ ಕೊಡಿಸಿದ್ದು ಸಹ ಉಂಟು. ಆದರೆ 90 ರ ದಶಕದ ವೇಳೆಗೆ ರಜನೀಕಾಂತ್ ಬಹುದೊಡ್ಡ ಸ್ಟಾರ್ ಆಗಿಬಿಟ್ಟರು, ಆದರೆ ಸತ್ಯರಾಜ್ ಬೇಡಿಕೆ ಅದೇ ಸಮಯದಲ್ಲಿ ಕ್ಷೀಣಿಸಲು ಶುರುವಾಯ್ತು.
ಇದು ಬಹುಷಃ ಸತ್ಯರಾಜ್ಗೆ ಸಹಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ನೀರಿಗೆ ಸಂಬಂಧಿಸಿದ ಹೋರಾಟಗಳು ನಡೆಯಲು ಆರಂಭವಾದವು, ಹೋಗೇನಕಲ್ ಹೋರಾಟದ ಸಂದರ್ಭದಲ್ಲಿ ಸತ್ಯರಾಜ್, ರಜನೀಕಾಂತ್ ಹೆಸರು ಹೇಳದೆ ತೀವ್ರ ಟೀಕೆ, ನಿಂದನೆ ಮಾಡಿದ್ದರು. ಅದೇ ಸಮಯದಲ್ಲಿ ರಜನೀಕಾಂತ್ ಅವರು ಕೆಲ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡಿದರೆ ಸತ್ಯರಾಜ್ ಬೇರೆ ಕೆಲ ಪಕ್ಷಗಳಿಗೆ ಬೆಂಬಲ ನೀಡಿದರು. ಆ ಸಮಯದಲ್ಲಿ ಸತ್ಯರಾಜ್ ಮತ್ತು ಶರತ್ ಕುಮಾರ್ ಅವರುಗಳು ಅವಕಾಶ ಸಿಕ್ಕಾಗೆಲ್ಲ ರಜನೀಕಾಂತ್ ಅವರನ್ನು ಬಹಿರಂಗ ವೇದಿಕೆಯಲ್ಲಿಯೇ ಟೀಕಿಸುತ್ತಿದ್ದರು. ಸತ್ಯರಾಜ್ ಅವರಿಗಂತೂ ರಜನೀಕಾಂತ್ ಮೇಲೆ ಇಲ್ಲದ ಅಸೂಯೆ ಶುರುವಾಗಿತ್ತು.
ಇದನ್ನೂ ಓದಿ:ರಜನೀಕಾಂತ್ ‘ಕೂಲಿ’ ಸಿನಿಮಾಕ್ಕೆ ಎ ಸರ್ಟಿಫಿಕೇಟ್, ಇದು ಮೊದಲೇನಲ್ಲ
ರಜನೀಕಾಂತ್, ಬಹುತೇಕ ಮೌನವಾಗಿಯೇ ಇದ್ದರು. 2007 ರಲ್ಲಿ ರಜನೀಕಾಂತ್ ನಟನೆಯ ‘ಶಿವಾಜಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸುವಂತೆ ಸತ್ಯರಾಜ್ ಅವರನ್ನು ಕೇಳಲಾಗಿತ್ತಂತೆ. ರಜನೀಕಾಂತ್ ಅವರಿಗೆ ಕೊಟ್ಟಿದ್ದ ಸಂಭಾವನೆಯನ್ನೇ ಕೊಡುವುದಾಗಿ ಹೇಳಲಾಗಿತ್ತಂತೆ. ಆದರೂ ಸಹ ಸತ್ಯರಾಜ್ ಆ ಪಾತ್ರದಲ್ಲಿ ನಟಿಸಿರಲಿಲ್ಲ. ಆ ಸಮಯದಲ್ಲೆಲ್ಲ ಸತ್ಯರಾಜ್, ತೀವ್ರವಾಗಿ ತಮಿಳು ಅಸ್ಮಿತೆಯ ಹೋರಾಟದಲ್ಲಿ ಭಾಗಿ ಆಗಿದ್ದರು. ಕಾವೇರಿ ವಿಷಯವಾಗಿ ಕನ್ನಡಪರ ಹೋರಾಟಗಾರರನ್ನು, ಕರ್ನಾಟಕದ ಸರ್ಕಾರಗಳನ್ನು ಸಹ ಸತ್ಯರಾಜ್ ಕೆಟ್ಟದಾಗಿ ನಿಂದಿಸಿದ್ದರು.
ಆದರೆ ‘ಬಾಹುಬಲಿ’ ಸಿನಿಮಾದ ಬಳಿಕ ಸತ್ಯರಾಜ್ ಅವರ ಆರ್ಭಟಗಳು ತುಸು ಕಡಿಮೆ ಆದವು. ತಮಿಳು ಪರ ಹೋರಾಟಗಳು ಸಹ ಕಡಿಮೆ ಆದವು. ಈಗ ದಶಕಗಳ ಬಳಿಕ ಹಳೆಯ ಮುನಿಸುಗಳನ್ನೆಲ್ಲ ಮರೆತು ಮತ್ತೊಮ್ಮೆ ಹಳೆಯ ಗೆಳೆಯನ ಸಿನಿಮಾನಲ್ಲಿ ಸತ್ಯರಾಜ್ ನಟಿಸಿದ್ದಾರೆ. ‘ಕೂಲಿ’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




