
‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿ ನಿಂತಿದೆ. 2021 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಅಲ್ಲುಅರ್ಜುನ್ ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಹಾಗೂ ನಟನಾಗಿ ಅಲ್ಲು ಅರ್ಜುನ್ಗೆ ಅತಿ ಹೆಚ್ಚು ಜನಪ್ರಿಯತೆ, ಅವಕಾಶಗಳನ್ನು ತಂದುಕೊಟ್ಟ ಸಿನಿಮಾ ಆಗಿದೆ. ಅದೆಲ್ಲಕ್ಕಿಂತಲೂ ಮಿಗಿಲಾಗಿ, ‘ಪುಷ್ಪ’ ಸಿನಿಮಾದಿಂದಾಗಿ ಅಲ್ಲು ಅರ್ಜುನ್ಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ. ತೆಲುಗು ಚಿತ್ರರಂಗದಲ್ಲಿ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ಮೊಟ್ಟ ಮೊದಲ ನಟ ಎನಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಆದರೆ ಈಗ ಅದೇ ಕಾರಣಕ್ಕೆ ನಟ ಅಲ್ಲು ಅರ್ಜುನ್ ಟ್ರೋಲ್ ಆಗುತ್ತಿದ್ದಾರೆ.
‘ಪುಷ್ಪ’ ಸಿನಿಮಾಕ್ಕೆ ಅಲ್ಲು ಅರ್ಜುನ್ಗೆ ಪ್ರಶಸ್ತಿ ಬಂದಾಗ ಎಲ್ಲರೂ ಅಭಿನಂದನೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅಲ್ಲು ಅರ್ಜುನ್, ‘ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ನಾನಾಗಿದ್ದೇನೆ. ರಾಷ್ಟ್ರಪ್ರಶಸ್ತಿ ಬಂದಾಗ ಖುಷಿಯಾಗಿತ್ತು, ಆದರೆ ಮೊದಲ ತೆಲುಗು ಚಿತ್ರರಂಗದ ನಟ ನಾನು ಎಂಬುದು ತಿಳಿದ ಬಳಿಕ ಇನ್ನಷ್ಟು ಖುಷಿ, ಹೆಮ್ಮೆ ಆಯ್ತು’ ಎಂದು ಆಗ ಅಲ್ಲು ಅರ್ಜುನ್ ಹೇಳಿದ್ದರು. ಆದರೆ ಈಗ ಅವರು ಮಾತು ಬದಲಿಸಿ ಟ್ರೋಲ್ಗೆ ಗುರಿ ಆಗಿದ್ದಾರೆ.
ಅಲ್ಲು ಅರ್ಜುನ್, ತೆಲುಗಿನ ಜನಪ್ರಿಯ ಟಾಕ್ ಶೋ ಅನ್ಸ್ಟಾಪೆಬಲ್ ವಿತ್ ಎನ್ಬಿಕೆ’ಗೆ ಅತಿಥಿಯಾಗಿ ಆಗಮಿಸಿದ್ದಾರೆ. ಶೋನ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಅಲ್ಲು ಅರ್ಜುನ್, ಬಾಲಕೃಷ್ಣ ಜೊತೆಗೆ ರಾಷ್ಟ್ರಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ‘ತೆಲುಗು ಚಿತ್ರರಂಗದ ಯಾವೊಬ್ಬ ನಟರಿಗೂ ರಾಷ್ಟ್ರಪ್ರಶಸ್ತಿ ಸಿಕ್ಕಿಲ್ಲ ಎಂಬುದು ತಿಳಿದುಕೊಂಡೆ, ಅದು ನನಗೆ ಬಹಳ ಬೇಸರ ಮೂಡಿಸಿತು, ಆ ನಂತರ ನಾನು ತೆಲುಗು ಚಿತ್ರರಂಗಕ್ಕೆ ಒಂದು ರಾಷ್ಟ್ರಪ್ರಶಸ್ತಿ ತೆಗೆದುಕೊಂಡು ಬರಬೇಕೆಂದು ಕಷ್ಟಪಟ್ಟೆ’ ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ.
ಇದನ್ನೂ ಓದಿ:‘ಪುಷ್ಪ 2’ ಟ್ರೇಲರ್ ಬಗ್ಗೆ ಸಿಹಿ ಸುದ್ದಿ ನೀಡಿದ ಅಲ್ಲು ಅರ್ಜುನ್; ನ.17ಕ್ಕೆ ಕಾತರ
ಆದರೆ ಅಲ್ಲು ಅರ್ಜುನ್, ರಾಷ್ಟ್ರಪ್ರಶಸ್ತಿ ಬಂದಾಗ, ತಾವು ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎಂಬುದು ತಮಗೆ ಗೊತ್ತಿರಲಿಲ್ಲ ಎಂದಿದ್ದರು. ಆದರೆ ಈಗ , ನಾನು ರಾಷ್ಟ್ರಪ್ರಶಸ್ತಿ ಗೆಲ್ಲಬೇಕೆಂದೇ ಶ್ರಮಪಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲು ಅರ್ಜುನ್ ಮಾತು ಬದಲಾಯಿಸಿದ್ದಕ್ಕೆ ಇದೀಗ ಟ್ರೋಲ್ ಆಗುತ್ತಿದ್ದಾರೆ. ಅಲ್ಲು ಅರ್ಜುನ್ರ ಹಳೆಯ ಹೇಳಿಕೆ ವಿಡಿಯೋ ಹಾಗೂ ಈಗಿನ ವಿಡಿಯೋ ಅನ್ನು ಕೊಲ್ಯಾಜ್ ಮಾಡಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ