‘ಅದ್ಭುತ ರಾಮಾಯಣದಲ್ಲಿ ರಾವಣನ ಕೊಂದಿದ್ದು ಸೀತೆ’; ಅಮಿಶ್ ತ್ರಿಪಾಠಿ

ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಸೀತೆ ಖಡ್ಗ ಹಿಡಿದು ಹೋರಾಡುವ ದೃಶ್ಯದ ವಿವಾದಕ್ಕೆ ಲೇಖಕ ಅಮಿಶ್ ತ್ರಿಪಾಠಿ ತೆರೆ ಎಳೆದಿದ್ದಾರೆ. ವಾಲ್ಮೀಕಿ ರಚಿತ ಅದ್ಭುತ ರಾಮಾಯಣದಲ್ಲಿ ಸೀತೆ ಯೋಧೆಯಾಗಿದ್ದು, ಶಕ್ತಿಶಾಲಿ ರಾವಣನನ್ನು ಸಂಹರಿಸಿದ್ದಳು ಎಂಬ ಐತಿಹಾಸಿಕ ಸತ್ಯವನ್ನು ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

‘ಅದ್ಭುತ ರಾಮಾಯಣದಲ್ಲಿ ರಾವಣನ ಕೊಂದಿದ್ದು ಸೀತೆ’; ಅಮಿಶ್ ತ್ರಿಪಾಠಿ
ರಾಮಾಯಣ

Updated on: Nov 26, 2026 | 9:09 AM

ಮುಖ್ಯಾಂಶಗಳು

  • 'ಅದ್ಭುತ ರಾಮಾಯಣ'ದ ಸತ್ಯ ಬಿಚ್ಚಿಟ್ಟ ಅಮಿಶ್ ತ್ರಿಪಾಠಿ
  • ದೆಹಲಿಗೆ ಸೀಮಿತವಾಯ್ತು ಭಾರತದ ಇತಿಹಾಸ
  • ಬಿಜಾಪುರ ಮತ್ತು ವಿಜಯನಗರದ ವೈಭವ ನೆನೆದ ಲೇಖಕ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ‘ ಸಿನಿಮಾ ಬಿಡುಗಡೆಯಾದಾಗಿನಿಂದ ಸೀತೆಯ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸೀತೆ ಖಡ್ಗ ಹಿಡಿದು ಹೋರಾಡುವ ದೃಶ್ಯಕ್ಕೆ ನಟ ಮುಖೇಶ್ ಖನ್ನಾ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಖ್ಯಾತ ಲೇಖಕ ಅಮಿಶ್ ತ್ರಿಪಾಠಿ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸೀತೆ ನಿಜವಾಗಿಯೂ ಒಬ್ಬ ವೀರ ಯೋಧೆಯಾಗಿದ್ದಳು ಎಂದು ಅವರು ಪ್ರತಿಪಾದಿಸಿದ್ದಾರೆ.

ಅದ್ಭುತ ರಾಮಾಯಣದಲ್ಲಿ ಸೀತೆಯ ವೀರಾವೇಶ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸರಿಯಾಗಿ ಕಲಿಸದಿರುವುದೇ ಈ ಗೊಂದಲಗಳಿಗೆ ಕಾರಣ ಎಂದು ಅಮಿಶ್ ತ್ರಿಪಾಠಿ ಹೇಳಿದ್ದಾರೆ. ಮಹರ್ಷಿ ವಾಲ್ಮೀಕಿಗಳು ವಾಲ್ಮೀಕಿ ರಾಮಾಯಣ, ಅದ್ಭುತ ರಾಮಾಯಣ ಮತ್ತು ಆನಂದ ರಾಮಾಯಣ ಎಂಬ ಮೂರು ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ‘ಅದ್ಭುತ ರಾಮಾಯಣ’ದಲ್ಲಿ ಅತ್ಯಂತ ಶಕ್ತಿಶಾಲಿ ರಾವಣನನ್ನು ಸೀತೆಯೇ ಸಂಹರಿಸುತ್ತಾಳೆ. ಇದೊಂದು ಪುರಾತನ ಗ್ರಂಥವಾಗಿದ್ದು ಸೀತೆ ಯೋಧೆಯಾಗಿದ್ದಳು ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

Loading...

ವಸಾಹತುಶಾಹಿ ದೃಷ್ಟಿಕೋನ ಮತ್ತು ಇತಿಹಾಸ

ನಮ್ಮ ಇತಿಹಾಸದ ಪುಸ್ತಕಗಳನ್ನು ಇಂದಿಗೂ ಪಾಶ್ಚಾತ್ಯ ದೃಷ್ಟಿಕೋನದಿಂದಲೇ ಬರೆಯಲಾಗಿದೆ ಎಂದು ತ್ರಿಪಾಠಿ ವಿಷಾದಿಸಿದ್ದಾರೆ. ‘ಪ್ರಾಚೀನ ಭಾರತೀಯರು ಶಸ್ತ್ರಚಿಕಿತ್ಸೆ ಮತ್ತು ಹಡಗು ನಿರ್ಮಾಣದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಭಾರತವು ತನ್ನ ವ್ಯಾಪಾರ ಮತ್ತು ಕಠಿಣ ಪರಿಶ್ರಮದಿಂದ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ನಮ್ಮ ಪೂರ್ವಜರ ಸಾಧನೆಗಳನ್ನು ಮರೆಮಾಚಿರುವುದರಿಂದಲೇ ಇಂದಿನ ಪೀಳಿಗೆಯು ಪಾಶ್ಚಾತ್ಯ ವಿಚಾರಗಳತ್ತ ಮುಖ ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ದೆಹಲಿಗೆ ಮಾತ್ರ ಸೀಮಿತವಾದ ಇತಿಹಾಸ

ಭಾರತದ ಇತಿಹಾಸದ ಪುಸ್ತಕಗಳಲ್ಲಿ ಕೇವಲ ದೆಹಲಿ ಮತ್ತು ಆಗ್ರಾಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅಮಿಶ್ ಅಭಿಪ್ರಾಯಪಟ್ಟಿದ್ದಾರೆ. ‘ದಕ್ಷಿಣ ಭಾರತ ಮತ್ತು ಪೂರ್ವ ಭಾಗದ ಸಾಮ್ರಾಜ್ಯಗಳನ್ನು ಕೇವಲ ಕೆಲವೇ ಸಾಲುಗಳಿಗೆ ಸೀಮಿತಗೊಳಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರವು ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ನಗರವಾಗಿತ್ತು. ಇತಿಹಾಸವು ಕೇವಲ ದೆಹಲಿಗೆ ಸೀಮಿತವಾಗದೆ ಎಲ್ಲ ಪ್ರದೇಶಗಳಿಗೂ ನ್ಯಾಯ ಒದಗಿಸಬೇಕು’ ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾದ ‘ರಾಮಾಯಣ’; ಅತ್ಯುತ್ತಮ ವಿಎಫ್ಎಕ್ಸ್ ಟಾಪ್ 20 ಪಟ್ಟಿಯಲ್ಲಿ ಯಶ್ ಸಿನಿಮಾ

ಮಕ್ಕಳಿಗಾಗಿ ಹೊಸ ಇತಿಹಾಸದ ಪುಸ್ತಕ

ಇತಿಹಾಸದ ಪಾಠಗಳು ನೀರಸವಾಗಿರುವುದರಿಂದ ಮಕ್ಕಳಿಗೆ ಆಸಕ್ತಿ ಮೂಡಿಸಲು ಅಮಿಶ್ ಹೊಸ ಪ್ರಯತ್ನ ಮಾಡಿದ್ದಾರೆ. ಅವರು ‘ಧ್ರುವ ಮತ್ತು ತಾರಾ’ ಎಂಬ ಮಕ್ಕಳ ಇತಿಹಾಸದ ಪುಸ್ತಕವನ್ನು ಬರೆದಿದ್ದು, ಈಗ ಅದು ಆಡಿಯೋಬುಕ್ ರೂಪದಲ್ಲೂ ಬಂದಿದೆ. ‘ಕೇವಲ ಉಪದೇಶ ನೀಡುವ ಬದಲು ಸಾಹಸಮಯ ಕಥೆಗಳ ಮೂಲಕ ಇತಿಹಾಸವನ್ನು ತಿಳಿಸಿದರೆ ಮಕ್ಕಳು ಖುಷಿಯಿಂದ ಕಲಿಯುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us