ಯಕ್ಷಿಣಿ ಅವತಾರವೆತ್ತಿದ ಅನುಷ್ಕಾ ಶೆಟ್ಟಿ, ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ

|

Updated on: Mar 12, 2024 | 3:56 PM

Anushka Shetty: ಕರ್ನಾಟಕ ಮೂಲದ ಚೆಲುವೆ ಅನುಷ್ಕಾ ಶೆಟ್ಟಿ 15 ವರ್ಷಕ್ಕೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದವರು. ಈಗ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.

ಯಕ್ಷಿಣಿ ಅವತಾರವೆತ್ತಿದ ಅನುಷ್ಕಾ ಶೆಟ್ಟಿ, ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ
Follow us on

ಬರೋಬ್ಬರಿ ಎರಡು ದಶಕಗಳ ಕಾಲ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದವರು ಅನುಷ್ಕಾ ಶೆಟ್ಟಿ (Anushka Shetty). ಕರ್ನಾಟಕ ಮೂಲದ ಈ ನಟಿ, ‘ಬಾಹುಬಲಿ 2’ (Bahubali) ಸಿನಿಮಾದ ಬಳಿಕ ಯಾಕೋ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಕಮ್ ಬ್ಯಾಕ್ ಮಾಡಿದರಾದರೂ ದೊಡ್ಡ ಸಿನಿಮಾಗಳ ಮೂಲಕ ಅಲ್ಲ. ಈಗ ಮಹಿಳಾ ಪ್ರಧಾನ ಸಿನಿಮಾ, ಸಣ್ಣ ಬಜೆಟ್​ನ ಸಿನಿಮಾಗಳಿಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದ ಅನುಷ್ಕಾ ಶೆಟ್ಟಿ ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಸಿರಿದ್ದಾರೆ. ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ರೋಜಿನ್ ಥಾಮಸ್ ನಿರ್ದೇಶನ ಮಾಡುತ್ತಿರುವ ಹಾರರ್ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ’ಕಲಿಯಂಕಟ್ಟು ನೀಲಿ’ ಎಂಬ ಕೇರಳದ ಜನಪದ ಕತೆಗಳಲ್ಲಿ ಬರುವ ಯಕ್ಷಿಣಿ ಅಥವಾ ಆತ್ಮದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ನಿರ್ದೇಶಕ ರೋಜಿನ್ ಈ ಹಿಂದೆ ‘ಹೋಮ್’ ಹೆಸರಿನ ಸುಂದರ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿದ್ದರು.

ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಸಿನಿಮಾವು ಒಬ್ಬ ಮಾಂತ್ರಿಕ ಹಾಗೂ ದೆವ್ವದ ನಡುವೆ ನಡೆವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಹಾರರ್ ಸಿನಿಮಾ ಆಗಿದ್ದರೂ ಸಹ ಭರ್ಜರಿಯಾದ ಆಕ್ಷನ್ ಹಾಗೂ ಸಸ್ಪೆನ್ಸ್ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಸಿನಿಮಾದ ಕತೆ ಹಾಗೂ ತಮ್ಮ ಪಾತ್ರಕ್ಕೆ ಇರುವ ಪ್ರಾಧಾನ್ಯತೆಯನ್ನು ಮೆಚ್ಚಿ, ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ.

ಇದನ್ನೂ ಓದಿ:ಅನುಷ್ಕಾ ಶೆಟ್ಟಿ ಗ್ರ್ಯಾಂಡ್ ಕಮ್​ಬ್ಯಾಕ್ ಮತ್ತೆ ಭಾಗಮತಿ, ಅರುಂಧತಿ

ಅನುಷ್ಕಾ ಶೆಟ್ಟಿ ಮೂಲತಃ ಮಂಗಳೂರಿನವರು. ಅನುಷ್ಕಾ ಶೆಟ್ಟಿ ಮೊದಲು ನಟಿಸಬೇಕಿದ್ದಿದ್ದು ಕನ್ನಡದ ‘ಮಿಸ್ ಕ್ಯಾಲಿಫೋರ್ನಿಯಾ’ ಸಿನಿಮಾನಲ್ಲಿ ಆದರೆ ಆ ಸಿನಿಮಾದಲ್ಲಿ ಅನುಷ್ಕಾಗೆ ನಟಿಸಲಾಗಿರಲಿಲ್ಲ. ಬಳಿಕ ತೆಲುಗಿನ ‘ಸೂಪರ್’ ಸಿನಿಮಾನಲ್ಲಿ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸುವ ಅವಕಾಶ ಲಭಿಸಿತು. 2005ರಲ್ಲಿ ಈ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಆ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಹಿಂತಿರುಗಿ ನೋಡಿದ್ದೇ ಇಲ್ಲ. 2018ರ ವರೆಗೂ ಅನುಷ್ಕಾ ಶೆಟ್ಟಿ ಬೇಡಿಕೆಯ ನಟಿಯಾಗಿದ್ದರು. ಆದರೆ ಆ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. 2020ರಲ್ಲಿ ‘ನಿಶ್ಯಬ್ಧಂ’ ಸಿನಿಮಾದಲ್ಲಿ ನಟಿಸಿದ್ದ ಅನುಷ್ಕಾ ಆ ಬಳಿಕ 2023ರಲ್ಲಿ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಹಿಟ್ ಎನಿಸಿಕೊಂಡಿತು. ಈಗ ಮಲಯಾಳಂ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ