ಎಂಟು ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಪ್ರಭಾಸ್-ಅನುಷ್ಕಾ
Prabhas-Anushka Shetty: ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆಲುಗು ಚಿತ್ರರಂಗದ ಹಿಟ್ ಜೋಡಿ. ಇಬ್ಬರು ಪ್ರೀತಿಯಲ್ಲಿದ್ದಾರೆ, ಮದುವೆ ಸಹ ಆಗಿಬಿಟ್ಟಿದ್ದಾರೆ ಎಂದು ಹಲವಾರು ಬಾರಿ ಸುದ್ದಿಗಳು ಹರಿದಾಡಿವೆ. ಇಬ್ಬರು ಒಳ್ಳೆಯ ನಟರಾಗಿರುವ ಜೊತೆಗೆ ಒಳ್ಳೆಯ ಸ್ನೇಹಿತರೂ ಸಹ. ಇದೀಗ ಸುಮಾರು ಎಂಟು ವರ್ಷಗಳ ಬಳಿಕ ಇಬ್ಬರೂ ಒಟ್ಟಾಗಿ ಪ್ರೇಕ್ಷಕರ ಎದುರು ಬರಲಿದ್ದಾರೆ.

ಪ್ರಭಾಸ್ (Prabhas) ಮತ್ತು ಅನುಷ್ಕಾ ಶೆಟ್ಟಿ (Anushka Shetty) ತೆಲುಗು ಚಿತ್ರರಂಗದ ಬಲು ಮೆಚ್ಚಿನ ತಾರಾ ಜೋಡಿ. ಈ ಇಬ್ಬರೂ ಒಟ್ಟಿಗೆ ನಟಿಸಿರುವ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಬಿಲ್ಲ’, ‘ಮಿರ್ಚಿ’, ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ ‘ಬಾಹುಬಲಿ 2’ ಸಿನಿಮಾದ ಬಳಿಕ ಈ ಜೋಡಿ ಒಟ್ಟಿಗೆ ನಟಿಸಿಲ್ಲ. ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಮದುವೆ ಸಹ ಆಗಿಬಿಟ್ಟಿದ್ದಾರೆ ಎಂದೆಲ್ಲ ಹಲವು ಬಾರಿ ಸುದ್ದಿಗಳು ಹರಿದಾಡಿದ್ದವು. ಆದರೆ ಇಬ್ಬರೂ ಸಹ ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಇದೀಗ 8 ವರ್ಷಗಳ ಬಳಿಕ ಈ ಜೋಡಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಆದರೆ ದೊಡ್ಡ ಪರದೆಯ ಮೇಲಲ್ಲ.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಂದು ಇವರು ಒಟ್ಟಿಗೆ ಸಿನಿಮಾನಲ್ಲಿ ನಟಿಸುತ್ತಿಲ್ಲ ಬದಲಿಗೆ ಒಟ್ಟಿಗೆ ಸಂದರ್ಶನವೊಂದಕ್ಕೆ ಹಾಜರಾಗಲಿದ್ದಾರೆ. ಇದು ಸಾಮಾನ್ಯ ಸಂದರ್ಶನದಂತೆ ಇರದೆ ಫನ್ನಿ ಪಾಡ್ಕಾಸ್ಟ್ ರೀತಿ ಇರಲಿದೆ. ‘ಬಾಹುಬಲಿ’ ಸಿನಿಮಾ ಎಂಟು ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ಈ ಜೋಡಿ ಒಟ್ಟಿಗೆ ಸಂದರ್ಶನದಲ್ಲಿ ಭಾಗಿಯಾಗಿ ಸಿನಿಮಾದ ಪ್ರಚಾರ ಮಾಡಲಿದ್ದಾರೆ.
ಪ್ರಭಾಸ್, ಅನುಷ್ಕಾ ಮಾತ್ರವೇ ಅಲ್ಲದೆ ಇದೇ ಫನ್ನಿ ಸಂದರ್ಶನದಲ್ಲಿ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ ಮತ್ತು ರಾಜಮೌಳಿ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ‘ಬಾಹುಬಲಿ’ ಸಿನಿಮಾದ ಇನ್ನಷ್ಟು ಕಲಾವಿದರು, ತಂತ್ರಜ್ಞರು ಸಹ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಯಕ್ರಮ ಯೂಟ್ಯೂಬ್ ಹಾಗೂ ಟಿವಿ ಚಾನೆಲ್ನಲ್ಲಿ ಬಿಡುಗಡೆ ಆಗಲಿದೆಯಂತೆ.
ಇದನ್ನೂ ಓದಿ:ಪ್ರಭಾಸ್ ಮದುವೆ ಯಾವಾಗ? ನಟನ ದೊಡ್ಡಮ್ಮ ಹೇಳಿದ್ದೇನು?
ಕೆಲವು ದಿನಗಳ ಹಿಂದಷ್ಟೆ ‘ಬಾಹುಬಲಿ’ ಸಿನಿಮಾದ ಬಿಡುಗಡೆ ವಾರ್ಷಿಕೋತ್ಸಕ್ಕೆ ಚಿತ್ರತಂಡ ಒಟ್ಟಾಗಿ ಸೇರಿ ಪಾರ್ಟಿ ಮಾಡಿತ್ತು. ಆ ಕಾರ್ಯಕ್ರಮದ ಚಿತ್ರಗಳನ್ನು ರಾಜಮೌಳಿ ಹಾಗೂ ಇತರರು ಹಂಚಿಕೊಂಡಿದ್ದರು. ಆದರೆ ಆ ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ, ತಮ್ನನಾ ಭಾಟಿಯಾ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಈ ಇಬ್ಬರೂ ಸಹ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ಅಸಲಿಗೆ ‘ಬಾಹುಬಲಿ’ ಸಿನಿಮಾದ ಶೂಟಿಂಗ್ ವೇಳೆಯೂ ಸಹ ಇಂಥಹುದೇ ಒಂದು ಫನ್ನಿ ಸ್ಕಿಟ್ ಒಂದನ್ನು ಚಿತ್ರತಂಡ ಮಾಡಿತ್ತು. ತೆಲುಗು ಚಿತ್ರರಂಗವೆಲ್ಲ ಸೇರಿ ಪ್ರವಾಹ ಸಂತ್ರಸ್ತರಿಗೆ ಹಣ ಒಟ್ಟುಗೂಡಿಸಲು ಕಾರ್ಯಕ್ರಮ ಮಾಡಿತ್ತು, ಆ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಆಗದ ‘ಬಾಹುಬಲಿ’ ತಂಡ ತಾವು ಇದ್ದಲ್ಲಿಯೇ ಎಲ್ಲರೂ ಒಟ್ಟಾಗಿ ಅಡುಗೆ ಸವಾಲು ಮಾಡಿ ತಮಾಷೆಯ ವಿಡಿಯೋ ಅನ್ನು ಅಪ್ಲೋಡ್ ಮಾಡಿದ್ದರು. ಈಗ ಮತ್ತೆ ಅಂಥಹುದೇ ಕಾರ್ಯಕ್ರಮವನ್ನು ಮಾಡುತ್ತಿದೆ ಚಿತ್ರತಂಡ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Wed, 20 August 25




