AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಮ್ಮೆ ವಿಡಿಯೋ ತೋರಿಸಿ ನಿರ್ದೇಶಕ ಪ್ರೇಮ್​ಗೆ 4.50 ಲಕ್ಷ ವಂಚನೆ

Director Prem: ಪ್ರೇಮ್ ಖಿಲಾಡಿ ನಿರ್ದೇಶಕ. ಪ್ರೇಕಕರ ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಾರೆ. ಸಿನಿಮಾ ಕತೆಗಳನ್ನು ಕಟ್ಟುವುದರಲ್ಲಿ ಮಹಾ ಜಾಣ. ಆದರೆ ಈಗ ವ್ಯಕ್ತಿಯೊಬ್ಬ ಎಮ್ಮೆಯ ಫೋಟೊ, ವಿಡಿಯೋ ತೋರಿಸಿ ಪ್ರೇಮ್​ಗೆ ಮಹಾ ಮೋಸ ಮಾಡಿದ್ದಾನೆ. ಬರೋಬ್ಬರಿ 4.50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಪ್ರೇಮ್. ಏನಿದು ಕತೆ?

ಎಮ್ಮೆ ವಿಡಿಯೋ ತೋರಿಸಿ ನಿರ್ದೇಶಕ ಪ್ರೇಮ್​ಗೆ 4.50 ಲಕ್ಷ ವಂಚನೆ
Director Prem
ಮಂಜುನಾಥ ಸಿ.
|

Updated on: Aug 20, 2025 | 3:11 PM

Share

ಪ್ರೇಕ್ಷಕರ ನಾಡಿ ಮಿಡಿತ ಅರಿತು ಅದಕ್ಕೆ ತಕ್ಕಂತೆ ಸಿನಿಮಾ ಮಾಡಿ ಗೆಲ್ಲುತ್ತಾ ಬಂದಿರುವ ಖಿಲಾಡಿ ನಿರ್ದೇಶಕ ಪ್ರೇಮ್​ಗೆ ಎಮ್ಮೆ ಮಾರುವವನೊಬ್ಬ ಮೋಸ ಮಾಡಿದ್ದಾನೆ. ಅದೂ ನೂರು-ಸಾವಿರ ಅಲ್ಲ ಬದಲಿಗೆ ಲಕ್ಷಾಂತರ ರೂಪಾಯಿ. ಸಿನಿಮಾ ನಿರ್ದೇಶಕ ಪ್ರೇಮ್​ಗೆ ಪ್ರಾಣಿಗಳ ಮೇಲೆ ಅದರಲ್ಲೂ ಹಸು, ಎತ್ತು, ಎಮ್ಮೆಗಳ ಮೇಲೆ ವಿಪರೀತ ಕಾಳಜಿ. ಈಗಲೂ ವ್ಯವಸಾಯದಲ್ಲಿ ಪ್ರೇಮ್ ತೊಡಗಿಕೊಂಡಿದ್ದಾರೆ. ತಮ್ಮ ಫಾರಂ ಹೌಸ್​ಗಾಗಿ ಎರಡು ಎಮ್ಮೆ ಖರೀದಿಸಲು ಪ್ರೇಮ್ ಮುಂದಾಗಿದ್ದರು. ಆದರೆ ಎಮ್ಮೆ ಮಾರಾಟಗಾರನೊಬ್ಬ ಹಣ ಪಡೆದು ಪ್ರೇಮ್​ಗೆ ಮೋಸ ಮಾಡಿದ್ದಾನೆ.

ಗುಜರಾತ್ ಮೂಲದ ವನರಾಜ್ ಭಾಯ್ ಎಂಬುವರ ಬಳಿ ಎರಡು ಎಮ್ಮೆಗಳನ್ನು ಖರೀದಿ ಮಾಡಲು ಪ್ರೇಮ್ ಮುಂದಾಗಿದ್ದರು. ಎಮ್ಮೆಗಳ ಫೋಟೊ, ವಿಡಿಯೋಗಳನ್ನು ವನರಾಜ್ ಭಾಯ್ ಕಳಿಸಿದ್ದ. ಫೋನಿನಲ್ಲು ಆತನೊಟ್ಟಿಗೆ ಎಮ್ಮೆ ಖರೀದಿ ಮತ್ತು ಅದರ ಸಾಗಾಟ ಇತರೆ ವಿಷಯಗಳ ಬಗ್ಗೆ ಮಾತುಕತೆ ಮಾಡಲಾಗಿತ್ತು. ಮುಂಗಡವಾಗಿ 25 ಸಾವಿರ ರೂಪಾಯಿ ಹಣವನ್ನೂ ಸಹ ಪ್ರೇಮ್ ಅವರು ನೀಡಿದ್ದರು. ಅದಾದ ಬಳಿಕ ಹಂತ ಹಂತವಾಗಿ 4.50 ಲಕ್ಷ ರೂಪಾಯಿ ಹಣವನ್ನೂ ಕೊಟ್ಟಿದ್ದಾರೆ. ಆದರೆ ಈಗ ಎಮ್ಮೆ ಕೊಡದೆ ಆ ವ್ಯಕ್ತಿ ಪರಾರಿ ಆಗಿದ್ದಾನೆ.

ವನರಾಜ್ ಭಾಯ್ ನೀಡಿದ್ದ ವಿಳಾಸಕ್ಕೆ ಜನರನ್ನು ಕಳಿಸಿ ಪರಿಶೀಲಿಸಿದರೆ ಅದು ನಕಲಿ ವಿಳಾಸ ಎಂಬುದು ತಿಳಿದು ಬಂದಿದೆ. ಮಾತ್ರವಲ್ಲದೆ ಆತ ಫೋನ್ ಸ್ವಿಚ್ ಮಾಡಿದ್ದು ಸಂಪರ್ಕಕ್ಕೆ ಸಿಗದಂತಾಗಿದ್ದಾನೆ. ಇದೀಗ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಒಬ್ಬರಿಂದ ಪೊಲೀಸ್ ಠಾಣೆಗೆ ವನರಾಜ್ ಭಾಯ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಚೆನ್ನೈನಲ್ಲಿ ಕನ್ನಡ ಪರ ಮಾತು: ನಿರ್ದೇಶಕ ಪ್ರೇಮ್ ಹೇಳಿದ್ದೇನು?

ಪ್ರೇಮ್ ಅವರ ಮ್ಯಾನೇಜರ್ ಮತ್ತು ನಟರೂ ಆಗಿರುವ ದಶಾವರ ಚಂದ್ರು ಅವರ ಮೂಲಕ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರೇಮ್, ವನರಾಜ್ ಭಾಯ್​ಗೆ ಆನ್​ಲೈನ್ ಮೂಲಕ ಹಣ ಕಳಿಸಿರುವ ಮಾಹಿತಿ, ವನರಾಜ್ ಭಾಯ್​ನ ಮೊಬೈಲ್ ಸಂಖ್ಯೆ, ಆತ ನೀಡಿದ್ದ ವಿಳಾಸ, ಎಮ್ಮೆಯ ಫೋಟೊ, ವಿಡಿಯೋ ಸೇರಿದಂತೆ ಇನ್ನೂ ಕೆಲ ಮಾಹಿತಿಗಳನ್ನು ಪೊಲೀಸರಿಗೆ ನೀಡಿ, ವಂಚಕನ ಹಿಡಿದು ಹೆಡೆಮುರಿ ಕಟ್ಟುವಂತೆ ವಿನಂತಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ