‘ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’; ಅರ್ಜುನ್​ ಕಪೂರ್​ಗೆ ಕೋರ್ಟ್ ಕಿವಿಮಾತು

ದೆಹಲಿ ಹೈಕೋರ್ಟ್‌ನಲ್ಲಿ ನಟ ಅರ್ಜುನ್ ಕಪೂರ್ ತಮ್ಮ AI ಡೀಪ್‌ಫೇಕ್‌ಗಳು ಮತ್ತು ಅಶ್ಲೀಲ ವಿಡಿಯೋಗಳ ವಿರುದ್ಧ ರಕ್ಷಣೆ ಕೋರಿದ್ದಾರೆ. ಸಾರ್ವಜನಿಕ ವ್ಯಕ್ತಿಗಳ ಎಲ್ಲವನ್ನೂ ನಿಯಂತ್ರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದು ಎಂದು ಕೋರ್ಟ್ ಹೇಳಿದೆ. ಈ ಹಿಂದೆ ಹಲವು ಸೆಲೆಬ್ರಿಟಿಗಳಿಗೆ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ನೀಡಲಾಗಿದ್ದರೂ, ಅರ್ಜುನ್ ಕಪೂರ್ ಪ್ರಕರಣದಲ್ಲಿ ಕೋರ್ಟ್ ವಿಭಿನ್ನ ನಿಲುವು ತಳೆದಿದೆ. ಗೌರವಕ್ಕೆ ಧಕ್ಕೆ ತರುವಂತಹ ಅಂಶಗಳನ್ನು ಮಾತ್ರ ತೆಗೆದುಹಾಕಲು ಆದೇಶಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’; ಅರ್ಜುನ್​ ಕಪೂರ್​ಗೆ ಕೋರ್ಟ್ ಕಿವಿಮಾತು
ಅರ್ಜುನ್ ಕಪೂರ್

Updated on: Apr 30, 2026 | 2:49 PM

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನು (Personality Rights) ಅನುಮತಿಯಿಲ್ಲದೆ ಬಳಸುವುದನ್ನು ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಎಲ್ಲರಿಗೂ ಕೋರ್ಟ್ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅರ್ಜುನ್ ಕಪೂರ್ ಇತ್ತೀಚೆಗೆ ಇದೇ ರೀತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್​​ಗೆ ಸಲ್ಲಿ ಮಾಡಿದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ಡೀಪ್‌ಫೇಕ್ ದೃಶ್ಯಗಳ ವಿರುದ್ಧ ಅವರು ರಕ್ಷಣೆ ಕೋರಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಕೆಲವು ಪ್ರಮುಖ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ‘ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅವರ ಬಗ್ಗೆ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಯಾವುದಾದರೂ ಅಂಶವು ಅವರ ಗೌರವಕ್ಕೆ ಧಕ್ಕೆ ತರುವಂತಿದ್ದರೆ ಅಥವಾ ಮಾನಹಾನಿಕರವಾಗಿದ್ದರೆ ಮಾತ್ರ ಅಂತಹವುಗಳನ್ನು ತೆಗೆದುಹಾಕಲು ಆದೇಶಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.
ಅರ್ಜುನ್ ಕಪೂರ್ ಪರ ವಾದ ಮಂಡಿಸಿದ ಪ್ರವೀಣ್ ಆನಂದ್ ಅವರು, ‘ನಟನ ಫೋಟೋಗಳನ್ನು ಬಳಸಿ ಅನೇಕರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ಜೊತೆ ನಟನ ಫೋಟೋ ಮಾರ್ಫಿಂಗ್ ಮಾಡುವುದು ಅಥವಾ ಅಶ್ಲೀಲವಾಗಿ ಬಿಂಬಿಸುವುದು ಒಬ್ಬ ಸಾಮಾನ್ಯ ಮನುಷ್ಯನಿಗೂ ಇಷ್ಟವಾಗದ ಸಂಗತಿ’ ಎಂದು ವಾದಿಸಿದರು.

ಇದಕ್ಕೆ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಖಾರವಾಗಿ ಪ್ರತಿಕ್ರಿಯೆ ನೀಡಿದರು.
‘ಸಾಮಾನ್ಯ ಜನರು ವ್ಯಕ್ತಿತ್ವ ಹಕ್ಕುಗಳಿಗಾಗಿ ನ್ಯಾಯಾಲಯಕ್ಕೆ ಬರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವವರ ಬಗ್ಗೆ ಹತ್ತು ಹಲವು ಚರ್ಚೆಗಳು ನಡೆಯುತ್ತವೆ. ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶೀಘ್ರದಲ್ಲೇ ತನ್ನ ವಿವರವಾದ ಮಧ್ಯಂತರ ಆದೇಶವನ್ನು ಹೊರಡಿಸಲಿದೆ.

ಇದನ್ನೂ ಓದಿ: ‘ಅಂತ್ಯವನ್ನು ಒಪ್ಪಿಕೊಳ್ಳಿ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅರ್ಜುನ್ ಕಪೂರ್ ಮನಸ್ಥಿತಿ

ಹಿಂದೆ ಸುನಿಲ್ ಗವಾಸ್ಕರ್, ಕರಣ್ ಜೋಹರ್ ಮತ್ತು ಅಲ್ಲು ಅರ್ಜುನ್ ಅವರಂತಹ ಪ್ರಮುಖ ವ್ಯಕ್ತಿಗಳಿಗೆ ಇಂತಹ ರಕ್ಷಣೆ ನೀಡಲಾಗಿತ್ತು. ಆದರೆ, ಈಗ ಅರ್ಜುನ್ ಕಪೂರ್ ವಿಷಯದಲ್ಲಿ ಬೇರೆಯದೇ ರೀತಿಯ ಅಭಿಪ್ರಾಯ ಹೊರಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Follow Us