AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದ್ಮಭೂಷಣ ತಿರಸ್ಕರಿಸಿದ್ದ ಎಸ್. ಜಾನಕಿ; ಕಾರಣ ತಿಳಿಸಿದ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್

ಖ್ಯಾತ ಗಾಯಕಿ ಎಸ್. ಜಾನಕಿ ನಿಧನಕ್ಕೆ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ. ಜಾನಕಮ್ಮ ಅವರ ಗಾಯನದ ಅದ್ಭುತ ಶಕ್ತಿಯನ್ನು ನೆನೆದ ಅವರು, ದಕ್ಷಿಣ ಭಾರತದ ಕಲಾವಿದರ ಮೇಲಿನ ತಾರತಮ್ಯ ಮತ್ತು ವಿಳಂಬ ನೀತಿಯಿಂದಲೇ ಜಾನಕಿ ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ್ದರು ಎಂದು ತಿಳಿಸಿದ್ದಾರೆ.

ಪದ್ಮಭೂಷಣ ತಿರಸ್ಕರಿಸಿದ್ದ ಎಸ್. ಜಾನಕಿ; ಕಾರಣ ತಿಳಿಸಿದ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್
S Janaki
ಮದನ್​ ಕುಮಾರ್​
|

Updated on: Jul 12, 2026 | 1:07 PM

Share

ಮುಖ್ಯಾಂಶಗಳು

  • ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಆರ್​ಪಿ ಪಟ್ನಾಯಕ್ ಭಾವುಕ ಸಂತಾಪ.
  • ಎಸ್. ಜಾನಕಿ ಅವರ ಅದ್ಭುತ ಗಾಯನವನ್ನು ನೆನಪಿಸಿಕೊಂಡ ಆರ್​ಪಿ ಪಟ್ನಾಯಕ್.
  • ಜಾನಕಿ ಅವರು ‘ಪದ್ಮಭೂಷಣ’ ತಿರಸ್ಕರಿಸಿದ್ದ ಘಟನೆಯ ಬಗ್ಗೆ ಇಲ್ಲಿದೆ ಮಾಹಿತಿ..

ಭಾರತೀಯ ಸಿನಿಮಾ ಸಂಗೀತದ ಇತಿಹಾಸದಲ್ಲಿ ತಮ್ಮದೇ ಆದ ಸುವರ್ಣ ಅಧ್ಯಾಯ ಬರೆದ ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಮೈಸೂರಿನಲ್ಲಿ ಕೊನೆಯುಸಿರೆಳೆದ ಜಾನಕಮ್ಮ ಅವರ ಅಂತ್ಯಕ್ರಿಯೆ ಇಂದು (ಜುಲೈ 12) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸದ್ಯ ಮೈಸೂರಿನ ಮಹಾರಾಜ ಮೈದಾನದಲ್ಲಿ ಸಾರ್ವಜನಿಕ ಹಾಗೂ ಗಣ್ಯರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಭಾವುಕ ಕ್ಷಣದಲ್ಲಿ, ಟಿವಿ ವಾಹಿನಿಯೊಂದರ ಜೊತೆ ಮಾತನಾಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್ (RP Patnaik) ಅವರು, ಜಾನಕಮ್ಮ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರು ಕೇಂದ್ರ ಸರ್ಕಾರದ ಪದ್ಮಭೂಷಣ (Padma Bhushan) ಪ್ರಶಸ್ತಿಯನ್ನು ತಿರಸ್ಕರಿಸಿದ ಹಿಂದಿನ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.

ಅವರಿಗಾಗಿ ಸಂಗೀತ ಲೋಕಕ್ಕೆ ಬಂದೆ: ಆರ್​ಪಿ ಪಟ್ನಾಯಕ್ ಭಾವುಕ:

‘ಜಾನಕಿ ಅಮ್ಮ ಕೇವಲ ಗಾಯಕಿಯಲ್ಲ, ಅವರೊಂದು ಸಂಗೀತ ಶಾಲೆ. ಇಳಯರಾಜ ಅವರ ಸಂಗೀತ, ಎಸ್​ಪಿಬಿ ಅವರ ಧ್ವನಿ ಹಾಗೂ ಜಾನಕಮ್ಮ ಅವರ ಗಾಯನವೇ ನಾನು ಸಂಗೀತ ಕ್ಷೇತ್ರಕ್ಕೆ ಬರಲು ಪ್ರಮುಖ ಪ್ರೇರಣೆ. ಎಸ್​ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರ ಕಾಂಬಿನೇಷನ್ ಒಂದು ಅದ್ಭುತ ಮ್ಯಾಜಿಕ್. ಇಂದು ನಾವು ಬಾಲಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆಯೋ, ಅದೇ ಮಟ್ಟದಲ್ಲಿ ಜಾನಕಮ್ಮ ಅವರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಮಾರ್ಚ್ 21ರಂದು ನಾನು ವೈಜಾಗ್‌ನಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. 87ರ ಹರೆಯದಲ್ಲೂ ಅವರು ತಾಯಿಯಂತೆ ನಮ್ಮನ್ನು ಬರಮಾಡಿಕೊಂಡು ಅತ್ಯಂತ ಉತ್ಸಾಹದಿಂದ ಮಾತನಾಡಿಸಿದ್ದರು’ ಎಂದು ಪಟ್ನಾಯಕ್ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಎಸ್. ಜಾನಕಿ ಅವರ ಗಾಯನವೇ ಒಂದು ವಿಸ್ಮಯ:

ಜಾನಕಮ್ಮ ಅವರ ಗಾಯನದ ದೈವಿಕ ಶಕ್ತಿಯ ಬಗ್ಗೆ ಮಾತನಾಡಿದ ಪಟ್ನಾಯಕ್, ‘ಅವರ ಧ್ವನಿಯಲ್ಲಿ ನೂರಾರು ಭಾವನೆಗಳು ಮೂಡಿಬರುತ್ತಿದ್ದವು. ಒಮ್ಮೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ನನ್ನ ಬಳಿ ಹೇಳಿದ್ದರು. ಹಾಡುವಾಗ ಜಾನಕಮ್ಮ ಗಂಟಲಿನಲ್ಲಿ ಎಷ್ಟೇ ಎಕ್ಸ್‌ಪ್ರೆಶನ್ ತಂದರೂ, ಅವರ ಮುಖದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುತ್ತಿರಲಿಲ್ಲ, ಒಂದೇ ಮುಖಭಾವ ಇರುತ್ತಿತ್ತು. ಅದು ಹೇಗೆ ಸಾಧ್ಯವಾಗುತ್ತದೆಯೋ ಆ ಮಹಾತಾಯಿಗೆ ಅಂತ ಬಾಲಸುಬ್ರಹ್ಮಣ್ಯಂ ಅವರು ಜಾನಕಮ್ಮ ಅವರ ಪ್ರತಿಭೆಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಅವರು ಒಂದೇ ಟೇಕ್‌ನಲ್ಲಿ ಹಾಡಿದ ‘ನೀ ಲೀಲಾ ಪಾಡೆದ ದೇವಾ’ ಹಾಡು ಇಂದಿಗೂ ನನಗೆ ಒಂದು ದೊಡ್ಡ ವಿಸ್ಮಯ’ ಎಂದರು.

ಇದನ್ನೂ ಓದಿ: ಗಾಯಕಿ ಎಸ್. ಜಾನಕಿ ನಿಧನ: ಕಂಬನಿ ಮಿಡಿದ ಪ್ರಧಾನಿ ಮೋದಿ, ಸಿಎಂ ವಿಜಯ್, ರಜನಿ, ಕಮಲ್

ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ್ದು ಏಕೆ?

ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಜಾನಕಿ ಅವರು ತಿರಸ್ಕರಿಸಿದ ಘಟನೆಯ ಬಗ್ಗೆ ಮಾತನಾಡಿದ ಆರ್​ಪಿ ಪಟ್ನಾಯಕ್, ‘ಪ್ರಶಸ್ತಿಗಳಿಗೆ ಜಾನಕಮ್ಮ ಅವರ ಹೆಸರು ಸೇರಿದರೆ ಆ ಪ್ರಶಸ್ತಿಗೆ ಗೌರವ ಬರುತ್ತದೆ ವಿನಃ, ಪ್ರಶಸ್ತಿಗಳಿಂದ ಜಾನಕಮ್ಮ ಅವರಿಗೆ ಸಿಗುವ ಗೌರವ ಏನೂ ಇಲ್ಲ. ಅವರು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲಾದ ಎತ್ತರದಲ್ಲಿದ್ದಾರೆ. ಅವರಿಗೆ ಪದ್ಮಭೂಷಣ ಪ್ರಶಸ್ತಿ ಎಷ್ಟೋ ವರ್ಷಗಳ ಹಿಂದೆಯೇ ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅತ್ಯಂತ ತಡವಾಗಿ (ಅವರ ವೃತ್ತಿಜೀವನದ ಕೊನೆಯ ದಿನಗಳಲ್ಲಿ) ಪ್ರಶಸ್ತಿ ಪ್ರಕಟಿಸಿತು. ದಕ್ಷಿಣ ಭಾರತದ ಕಲಾವಿದರಿಗೆ ಮಾಡಿದ ಈ ತಾರತಮ್ಯ ಹಾಗೂ ವಿಳಂಬ ನೀತಿಯಿಂದ ನೊಂದುಕೊಂಡು ಅವರು ಆ ಪ್ರಶಸ್ತಿಯನ್ನು ಗೌರವಪೂರ್ವಕವಾಗಿಯೇ ತಿರಸ್ಕರಿಸಿದ್ದರು. ಅವರು ಪ್ರಶಸ್ತಿಗಳಿಗಿಂತ ಮಿಗಿಲಾದ ಜನಮನದ ಕಲಾ ಸರಸ್ವತಿ’ ಎಂದು ಪಟ್ನಾಯಕ್ ಸ್ಪಷ್ಟಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us