
ಆಧ್ಯಾತ್ಮಿಕ ಮತ್ತು ಮಾನವೀಯ ಆಂದೋಲನದ ಪ್ರಮುಖ ಸಂಸ್ಥೆಯಾದ ‘ಆರ್ಟ್ ಆಫ್ ಲಿವಿಂಗ್’ (Art of Living) ತನ್ನ 45 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar Guruji) ಅವರ ನಿಸ್ವಾರ್ಥ ಸೇವೆ ಹಾಗೂ ಮಾನವೀಯ ಮೌಲ್ಯಗಳ ಜಾಗೃತಿಯನ್ನು ಗೌರವಿಸಲು ದೇಶದ ಪ್ರಮುಖ ಚಿತ್ರನಿರ್ಮಾಪಕರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು ಒಂದೇ ಸೂರಿನಡಿ ಸೇರಿದರು.
ಈ ಕಾರ್ಯಕ್ರಮದಲ್ಲಿ ಕೇರಳದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಹೆಸರಾಂತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ, ನಟ ವಿಕ್ರಾಂತ್ ಮಾಸ್ಸಿ, ನಟ-ಹಾಸ್ಯ ಕಲಾವಿದ ಸುನಿಲ್ ಗ್ರೋವರ್, ಕವಿ ಹಾಗೂ ನಟ ವಿನೀತ್ ಕುಮಾರ್ ಸಿಂಗ್, ಸೆಲೆಬ್ರಿಟಿ ಫೋಟೋಗ್ರಾಫರ್ ಅವಿನಾಶ್ ಗೋವಾರಿಕರ್ ಮತ್ತು ಚಲನಚಿತ್ರ ನಿರ್ಮಾಪಕ ಮಹಾವೀರ್ ಜೈನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಗುರೂಜಿ ಅವರ ಸನ್ನಿಧಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅತ್ಯಂತ ಭಾವುಕ ಕ್ಷಣ ಎದುರಾಗಿದ್ದು ನಟ ವಿಕ್ರಾಂತ್ ಮಾಸ್ಸಿ ಅವರು ಮಾತನಾಡಿದಾಗ. ಮುಂಬರುವ ಬಯೋಪಿಕ್ ‘ವೈಟ್’ ಸಿನಿಮಾದಲ್ಲಿ ಗುರೂಜಿ ಶ್ರೀ ಶ್ರೀ ರವಿಶಂಕರ್ ಅವರ ಪಾತ್ರವನ್ನು ತಾವೇ ನಿರ್ವಹಿಸುತ್ತಿರುವುದಾಗಿ ವಿಕ್ರಾಂತ್ ಮಾಸ್ಸಿ ಬಹಿರಂಗಪಡಿಸಿದರು. ನೆರೆದಿದ್ದ ಸಹಸ್ರಾರು ಭಕ್ತರ ಚಪ್ಪಾಳೆಯ ನಡುವೆ ಮಾತನಾಡಿದ ಅವರು, ‘ಈ ಆಶ್ರಮವೇ ನನ್ನ ಮನೆ. ನನ್ನ ಗುರು, ನನ್ನ ಸರ್ವಸ್ವವೂ ಆಗಿರುವವರ ಪಾತ್ರವನ್ನು ತೆರೆಯ ಮೇಲೆ ನಿರ್ವಹಿಸುವ ಸುವರ್ಣಾವಕಾಶ ನನಗೆ ಸಿಕ್ಕಿದೆ. ಆ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ’ ಎಂದು ಭಾವುಕರಾದರು.
Vikrant Massey
ಹೆಸರಾಂತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ಗುರೂಜಿ ಅವರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡರು. ‘ನಾನು ಇಲ್ಲಿಗೆ ಬಂದಾಗಲೆಲ್ಲಾ ಒಂದು ವಿಶಿಷ್ಟವಾದ ಸಕಾರಾತ್ಮಕ ಶಕ್ತಿಯನ್ನು ಅನುಭವಿಸುತ್ತೇನೆ. ನಾನು ಯಾವುದೇ ಹೊಸ ಸಿನಿಮಾದ ಶೂಟಿಂಗ್ ಆರಂಭಿಸುವ ಮುನ್ನ, ನನ್ನ ಇಡೀ ಚಿತ್ರತಂಡದ ಸದಸ್ಯರಿಗೆ ಸುದರ್ಶನ ಕ್ರಿಯೆಯನ್ನು ಕಡ್ಡಾಯವಾಗಿ ಕಲಿಸುತ್ತೇನೆ’ ಎಂದು ತಮ್ಮ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡರು.
Rajkumar Hirani
ಹಾಸ್ಯ ನಟ ಸುನಿಲ್ ಗ್ರೋವರ್ ಅವರು ಈ ಹಿಂದೆ ತಾವು ಭಾಗವಹಿಸಿದ್ದ ಧ್ಯಾನ ಶಿಬಿರದ ನೆನಪುಗಳನ್ನು ಹಾಸ್ಯದ ಶೈಲಿಯಲ್ಲಿ ಹಂಚಿಕೊಂಡು ನೆರೆದಿದ್ದವರನ್ನು ನಗಿಸಿದರು. ನಿರ್ಮಾಪಕ ಮಹಾವೀರ್ ಜೈನ್ ಮಾತನಾಡಿ, ‘70 ವರ್ಷಗಳ ಕಾಲ ಜಗತ್ತಿನಲ್ಲಿ ಒಳಿತನ್ನು ಗಟ್ಟಿಗೊಳಿಸಿದ್ದಕ್ಕಾಗಿ ಮತ್ತು ಕೋಟ್ಯಂತರ ಜನರಿಗೆ ಹೇಗೆ ಬದುಕಬೇಕೆಂದು ಕಲಿಸಿಕೊಟ್ಟಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಅರ್ಪಿಸಲು ಬಂದಿದ್ದೇವೆ’ ಎಂದರು. ಫೋಟೋಗ್ರಾಫರ್ ಅವಿನಾಶ್ ಗೋವಾರಿಕರ್ ಹಾಗೂ ನಟ ವಿನೀತ್ ಕುಮಾರ್ ಸಿಂಗ್ ಕೂಡ ತಮಗೆ ಆಶ್ರಮದಲ್ಲಿ ಉಂಟಾದ ದೈವಿಕ ಅನುಭವವನ್ನು ಹಂಚಿಕೊಂಡರು.
ಇದನ್ನೂ ಓದಿ: ನನ್ನನ್ನು ಯಾರೂ ಕಣ್ಣೆತ್ತಿ ನೋಡಲಿಲ್ಲ: ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಅನುಭವ ಬಿಚ್ಚಿಟ್ಟ ರಜನಿಕಾಂತ್
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇರಳ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಭಾರತದ ಆಧ್ಯಾತ್ಮಿಕ ಜ್ಞಾನವನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವ ಗುರೂಜಿ ಅವರ ಕಾರ್ಯವನ್ನು ಶ್ಲಾಘಿಸಿದರು. ‘ಇಂತಹ ಮಹಾತ್ಮರು ತಮಗಾಗಿ ಬದುಕುವುದಿಲ್ಲ, ಇತರರ ಉದ್ಧಾರಕ್ಕಾಗಿ ಬದುಕುತ್ತಾರೆ. ಇಂದಿನ ಆಧುನಿಕ ಜಗತ್ತಿಗೆ ಮಾರ್ಗದರ್ಶನ ನೀಡಲು ಇಡೀ ವಿಶ್ವಕ್ಕೆ ನಮ್ಮ ಗುರೂಜಿ ಅವರಂತಹ ಅಪರೂಪದ ಆಧ್ಯಾತ್ಮಿಕ ನಾಯಕರ ಅಗತ್ಯವಿದೆ’ ಎಂದರು. ಬಿಹಾರದ ಮುಖ್ಯಮಂತ್ರಿ ಶ್ರೀ ಸಾಮ್ರಾಟ್ ಚೌಧರಿ ಅವರು ವಿಡಿಯೋ ಸಂದೇಶದ ಮೂಲಕ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಯುವ ಸಬಲೀಕರಣದ ಕಾರ್ಯಗಳನ್ನು ಪ್ರಶಂಸಿಸಿದರು.
Rajendra Vishwanath Arlekar
ಆಚರಣೆಯ ಪ್ರಮುಖ ಆಕರ್ಷಣೆಯಾಗಿ ‘ಇಂಟ್ಯೂಷನ್ ಫೆಸ್ಟ್’ ಆಯೋಜಿಸಲಾಗಿತ್ತು. ಇದರಲ್ಲಿ 11,000ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು. ಆರ್ಟ್ ಆಫ್ ಲಿವಿಂಗ್‌ನ ವಿಶೇಷ ತರಬೇತಿ ಪಡೆದ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿ ಪುಸ್ತಕ ಓದುವುದು, ಆಟ ಆಡುವುದು ಮತ್ತು ಚಿತ್ರ ಬಿಡಿಸುವ ಮೂಲಕ ತಮ್ಮ ತೀಕ್ಷ್ಣ ಬುದ್ಧಿಮತ್ತೆಯನ್ನು ಪ್ರದರ್ಶಿಸಿದರು. ಅತ್ಯಂತ ಆಶ್ಚರ್ಯಕರ ಘಟನೆಯೆಂದರೆ, 50ಕ್ಕೂ ಹೆಚ್ಚು ಮಕ್ಕಳು ಕಣ್ಣಿಗೆ ಸಂಪೂರ್ಣವಾಗಿ ಬಟ್ಟೆ ಕಟ್ಟಿಕೊಂಡು ಆಶ್ರಮದ ತಿರುವು ಮುರುವು ರಸ್ತೆಗಳಲ್ಲಿ ಅತ್ಯಂತ ಸುಲಭವಾಗಿ ಸೈಕಲ್ ಚಲಾಯಿಸಿ ನೆರೆದಿದ್ದವರನ್ನು ಬೆರಗುಗೊಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.