
ಪ್ರಭಾಸ್, ರಾಣಾ ದಗ್ಗುಬಾಟಿ ನಟನೆಯ ‘ಬಾಹುಬಲಿ’ (Baahubali) ಸಿನಿಮಾ ಬಿಡುಗಡೆ ಆಗಿ 10 ವರ್ಷಗಳು ಕಳೆದಿವೆ. ಪ್ರೇಕ್ಷಕರ ಫೇವರಿಟ್ ಪಟ್ಟಿಯಲ್ಲಿ ಈಗಲೂ ಈ ಸಿನಿಮಾಗೆ ಪ್ರಮುಖ ಸ್ಥಾನ ಇದೆ. ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನನ್ನು ಬರೆದ ಸಿನಿಮಾ ಇದು. ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾಗೆ ಸಿಕ್ಕ ಅಭೂತಪೂರ್ವ ಯಶಸ್ಸಿನ ನಂತರ ‘ಬಾಹುಬಲಿ: ದಿ ಕನ್ಕ್ಲೂಷನ್’ ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾ ಕೂಡ ಬ್ಲಾಕ್ಬಸ್ಟರ್ ಹಿಟ್ ಆಯಿತು. ಈಗ ಎರಡೂ ಸಿನಿಮಾವನ್ನು ಒಟ್ಟಿಗೆ ಸೇರಿಸಿ ರಿಲೀಸ್ ಮಾಡಲಾಗುತ್ತಿದೆ. ಅದಕ್ಕೆ ‘ಬಾಹುಬಲಿ: ದಿ ಎಪಿಕ್’ (Baahubali The Epic) ಎಂದು ಹೆಸರು ಇಡಲಾಗಿದೆ. ಇದರ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಎರಡೂ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಸಿದ್ಧವಾಗಿದೆ. ಅಕ್ಟೋಬರ್ 31ರಂದು ‘ಬಾಹುಬಲಿ: ದಿ ಎಪಿಕ್’ ಸಿನಿಮಾ ತೆರೆಕಾಣಲಿದೆ.
ಎರಡೂ ಸಿನಿಮಾಗಳನ್ನು ಸೇರಿಸಿ ಒಟ್ಟು 3 ಗಂಟೆ 45 ನಿಮಿಷ ಅವಧಿಯ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಸಿದ್ಧಪಡಿಸಲಾಗಿದೆ. ಮೊದಲೆರಡು ಸಿನಿಮಾಗಳಲ್ಲಿ ಇದ್ದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಹಾಡುಗಳನ್ನು ಮೊಟಕುಗೊಳಿಸಿ, ಕೆಲವು ಹೊಸ ದೃಶ್ಯಗಳನ್ನು ಸೇರಿಸಿ ಪ್ರೇಕ್ಷಕರಿಗೆ ಬೇರೆಯದೇ ಅನುಭವ ನೀಡಲು ಚಿತ್ರತಂಡ ಮುಂದಾಗಿದೆ. ಇದರ ಝಲಕ್ ಹೇಗಿರಲಿದೆ ಎಂಬುದನ್ನು ತೋರಿಸಲು ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.
ಆಗಸ್ಟ್ 14ರಂದು ಬಹುನಿರೀಕ್ಷಿತ ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳು ಬಿಡುಗಡೆ ಆಗಲಿವೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳ ಜೊತೆಯಲ್ಲಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾದ ಟೀಸರ್ ಬಿತ್ತರ ಆಗಲಿದೆ. ಹೊಸ ಅನುಭವ ಹೇಗಿರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಮೊದಲೆರಡು ಪಾರ್ಟ್ಗಳ ರೀತಿಯೇ ಈ ಹೊಸ ವರ್ಷನ್ ಕೂಡ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ‘ಬಾಹುಬಲಿ’ಗೆ ಹತ್ತು ವರ್ಷ, ಒಂದೆಡೆ ಸೇರಿ ಸಂಭ್ರಮಿಸಿದ ಘಟಾನುಘಟಿಗಳು
‘ಬಾಹುಬಲಿ’ ಸಿನಿಮಾದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ಸತ್ಯರಾಜ್, ನಾಸರ್ ಮುಂತಾದವರು ನಟಿಸಿದ್ದಾರೆ. ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜಮೌಳಿ ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಾಯಿತು. ಸದ್ಯ ಅವರು ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.