ಹೊಸ ಅವತಾರದಲ್ಲಿ ‘ಬಾಹುಬಲಿ’: ಈಗ ದೇವರು v/s ಮನುಷ್ಯ
Bahubali The Eternal war: ‘ಬಾಹುಬಲಿ’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ, ಅದ್ಭುತ ಕತೆ, ಪಾತ್ರಗಳನ್ನು ಹೊಂದಿದ್ದ ಈ ಸಿನಿಮಾ ಈಗ ಅನಿಮೇಟೆಡ್ ಅವತಾರದಲ್ಲಿ ಬರುತ್ತಿದೆ. ಕಟ್ಟಪ್ಪನಿಂದ ಕೊಲೆಯಾದ ಅಮರೇಂದ್ರ ಬಾಹುಬಲಿ ಸತ್ತ ಬಳಿಕ ಪಾತಾಳ ಲೋಕಕ್ಕೆ ಹೋಗುತ್ತಾನೆ ಅಲ್ಲಿ ನಡೆಯುವ ಘಟನೆಗಳು, ಯುದ್ಧಗಳ ಕುರಿತಾದ ಕತೆಯನ್ನು ‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾ ಒಳಗೊಂಡಿದೆ.

‘ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಿನಿಮಾ. ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೇಲೆ ಬೀರಿದ ಪರಿಣಾಮ ಬಹಳ ದೊಡ್ಡದು. ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಗಿದ್ದು ಸಿನಿಮಾ ಇತ್ತೀಚೆಗಷ್ಟೆ ಮರು ಬಿಡುಗಡೆ ಆಗಿದ್ದು, ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ಜೊತೆಗೆ ‘ಬಾಹುಬಲಿ’ ಸರಣಿಯನ್ನು ಮುಂದುವರೆಸಿಕೊಂಡು ಹೋಗಲು ನಿರ್ಮಾಣ ಸಂಸ್ಥೆಯಾದ ಅರ್ಕ ನಿಶ್ಚಯಿಸಿದ್ದು, ಇದೀಗ ‘ಬಾಹುಬಲಿ: ದಿ ಎಟರ್ನಲ್ ವಾರ್’ ಹೆಸರಿನ ಅನಿಮೇಷನ್ ಸಿನಿಮಾ ಬಿಡುಗಡೆಗೆ ಮುಂದಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾ, ಕಟ್ಟಪ್ಪನಿಂದ ಕೊಲ್ಲಲ್ಪಟ್ಟ ಅಮರೇಂದ್ರ ಬಾಹುಬಲಿಯ ಮರಣಾನಂತರದ ಕತೆಯನ್ನು ಒಳಗೊಂಡಿದೆ. ಅಮರೇಂದ್ರ ಬಾಹುಬಲಿ ಮರಣದ ಬಳಿಕ ಪಾತಾಳ ಲೋಕಕ್ಕೆ ಹೋದ ಬಳಿಕ ಅಲ್ಲಿ ನಡೆಯುವ ಘಟನೆಗಳ ಕಾಲ್ಪನಿಕ ಕತೆಯನ್ನು ‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾ ಒಳಗೊಂಡಿದೆ. ಸಿನಿಮಾದ ಎರಡು ನಿಮಿಷದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ‘ಬಾಹುಬಲಿ’ಯನ್ನು ಅನಿಮೇಷನ್ ಅವತಾರದಲ್ಲಿ ತೋರಿಸಲಾಗಿದೆ.
ಕಟ್ಟಪ್ಪನಿಂದ ಕೊಲ್ಲಲ್ಪಟ್ಟು ಪಾತಾಳ ಲೋಕಕ್ಕೆ ಹೋಗುವ ಅಮರೇಂದ್ರ ಬಾಹುಬಲಿ ಅಲ್ಲಿ ಶಿವನ ಆರಾಧನೆಯಲ್ಲಿ ತೊಡಗಿಕೊಂಡಿರುತ್ತಾನೆ. ಪಾತಾಳ ಲೋಕದಲ್ಲಿ ವಿಷಾಸುರ ಅಮರೇಂದ್ರ ಬಾಹುಬಲಿಯ ಗೆಳೆಯ. ಆದರೆ ಇಂದ್ರನಿಗೆ ಬಾಹುಬಲಿ ವಿರುದ್ಧ ಸಿಟ್ಟು, ಬಾಹುಬಲಿಯನ್ನು ಎಳೆದೊಯ್ಯಲು ಸಾಕ್ಷಾತ್ ಇಂದ್ರನೇ ಬರುತ್ತಾನೆ ಆದರೆ ವಿಷಾಸುರ ಇಂದ್ರನನ್ನು ಅಡ್ಡಗಟ್ಟುತ್ತಾನೆ. ಇಬ್ಬರ ನಡುವೆ ಯುದ್ಧವಾಗುತ್ತದೆ, ವಿಷಾಸುರ ಸುಸ್ತಾಗಿ ಕೂರುತ್ತಾನೆ, ಅಷ್ಟರಲ್ಲಿ ಬಾಹುಬಲಿ ತನ್ನ ರಥದಲ್ಲಿ ಬಂದು ಇಂದ್ರನನ್ನು ಸಮರದಲ್ಲಿ ಎದುರುಗೊಳ್ಳುತ್ತಾನೆ. ಇಷ್ಟು ಕತೆಯನ್ನು ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ:‘ಬಾಹುಬಲಿ’ ರೀ ರಿಲೀಸ್ ತಮನ್ನಾ ಅಭಿಮಾನಿಗಳಿಗೆ ಮತ್ತೆ ಬೇಸರ
‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾದ ಮೊದಲ ಭಾಗದ ಕತೆ ಇದಾಗಿದ್ದು, ಸಿನಿಮಾವನ್ನು ಅರ್ಕಾ ಮೀಡಿಯಾಸ್ ಅವರೇ ನಿರ್ಮಾಣ ಮಾಡಿದ್ದಾರೆ. ಎಸ್ಎಸ್ ರಾಜಮೌಳಿ ಅದನ್ನು ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾದ ಬಾಹುಬಲಿ ಪಾತ್ರಕ್ಕೆ ಪ್ರಭಾಸ್ ಅವರೇ ಧ್ವನಿ ನೀಡಿದ್ದಾರೆ. ಇಶಾನ್ ಶುಕ್ಲ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆ ಆಗುವುದು 2027ಕ್ಕೆ ಅಂತೆ.
ಇತ್ತೀಚೆಗೆ ಅನಿಮೇಷನ್ ಸಿನಿಮಾಗಳು ಅದರಲ್ಲೂ ಪೌರಾಣಿಕ ಕತೆಗಳನ್ನು ಆಧರಿಸಿದ ಅನಿಮೇಷನ್ ಸಿನಿಮಾಗಳೂ ಭಾರಿ ಯಶಸ್ಸು ಗಳಿಸುತ್ತಿವೆ. ಹೊಂಬಾಳೆ ವಿತರಣೆ ಮಾಡಿದ್ದ ‘ಮಹಾವತಾರ್: ನರಸಿಂಹ’ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು. ಸುಮಾರು 400 ಕೋಟಿಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿತ್ತು. ಇದೀಗ ‘ಬಾಹುಬಲಿ’ಯನ್ನೂ ಅನಿಮೇಷನ್ ರೂಪದಲ್ಲಿ ಹೊರತರಲಾಗುತ್ತಿದ್ದು, ಆ ಸಿನಿಮಾ ಸಹ ಹಿಟ್ ಆಗುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 am, Wed, 5 November 25




