
ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಬೇಕಿತ್ತು. ನಿನ್ನೆ ಮಧ್ಯ ರಾತ್ರಿಯಿಂದಲೇ ಸಿನಿಮಾದ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ಕರ್ನಾಟಕ, ಆಂಧ್ರ ಇನ್ನಿತರೆಡೆಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಸಿನಿಮಾ ನೋಡಲು ಕಾತರದಿಂದ ಕಾದಿದ್ದರು. ಚಿತ್ರಮಂದಿರಗಳನ್ನು ಸಿಂಗರಿಸಿ, ಕಟೌಟ್ಗಳು, ಫ್ಲೆಕ್ಸ್ಗಳನ್ನು ಕಟ್ಟಿ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಅಚಾನಕ್ಕಾಗಿ ಸಿನಿಮಾದ ಬಿಡುಗಡೆ ರದ್ದಾಗಿದೆ.
ಹೌದು, ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿದ್ದ ‘ಅಖಂಡ 2’ ಸಿನಿಮಾದ ಬಿಡುಗಡೆ ಹಠಾತ್ತನೆ ರದ್ದಾಗಿದೆ. ಬಿಡುಗಡೆಗೆ ಎಲ್ಲ ತಯಾರಿ ಆದ ಬಳಿಕ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿನಿಮಾದ ನಿರ್ಮಾಪಕರು ಕಾನೂನು ಸಿಕ್ಕುಗಳಲ್ಲಿ ಸಿಲುಕಿಕೊಂಡಿರುವ ಕಾರಣ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಮಾತ್ರವಲ್ಲದೆ ಆಂಧ್ರದ ಪ್ರಮುಖ ರಾಜಕೀಯ ಮುಖಂಡರು, ಸ್ಟಾರ್ ನಟರೂ ಆಗಿರುವ ಬಾಲಕೃಷ್ಣ ಅವರಿಗೂ ಸಹ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಆದಂತಾಗಿದೆ.
‘ಅಖಂಡ 2’ ಸಿನಿಮಾವನ್ನು 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡಿದೆ. ಆದರೆ ಈ ಸಂಸ್ಥೆ ತಮ್ಮ ಕೆಲ ಹಿಂದಿನ ಸಿನಿಮಾಗಳಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಹಳೆ ಬಾಕಿಯ ಕಾರಣ ಫೈನ್ಯಾನ್ಸಿಯರ್ಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣಕ್ಕೆ ‘ಅಖಂಡ 2’ ಸಿನಿಮಾ ಬಿಡುಗಡೆ ತಡೆ ಹಿಡಿಯಲಾಗಿದೆ. ಇನ್ನು ತಮಿಳುನಾಡಿನಲ್ಲೂ ಸಹ ‘ಅಖಂಡ 2’ ಪ್ರತ್ಯೇಕ ಕಾನೂನು ಸಮಸ್ಯೆಗೆ ಗುರಿಯಾಗಿದೆ.
ಇದನ್ನೂ ಓದಿ:ಈ ವಾರ ‘ಧುರಂಧರ್’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್
28 ಕೋಟಿ ರೂಪಾಯಿ ಹಣಕಾಸಿನ ವಿಷಯವಾಗಿ ಎರೋಸ್ ಇಂಟರ್ನ್ಯಾಷನಲ್ ಮತ್ತು ‘ಅಖಂಡ 2’ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಡುವೆ ಕಾನೂನು ಸಮರ ನಡೆಯುತ್ತಿದ್ದು, ಇದೀಗ ಎರೋಸ್ ಇಂಟರ್ನ್ಯಾಷನಲ್ ಪರವಾಗಿ ಇಂಜೆಕ್ಷನ್ ಆರ್ಡರ್ ಹೊರಡಿಸಲಾಗಿದೆ. ಆದೇಶದಂತೆ 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಿಂದ ನಿರ್ಮಾಣವಾದ ಯಾವುದೇ ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿದೆ. ಮಾತ್ರವಲ್ಲದೆ ಅವರ ವಿತರಣೆಗೂ ತಡೆ ನೀಡಲಾಗಿದೆ.
With a heavy heart, we regret to inform you that #Akhanda2 will not be releasing as scheduled due to unavoidable circumstances.
This is a painful moment for us, and we truly understand the disappointment it brings to every fan and movie lover awaiting the film.
We are working…
— 14 Reels Plus (@14ReelsPlus) December 4, 2025
ಸಿನಿಮಾ ಬಿಡುಗಡೆ ರದ್ದಾಗಿರುವ ಬಗ್ಗೆ ಟ್ವೀಟ್ ಮಾಡಿರುವ 14 ರೀಲ್ಸ್ ಪ್ಲಸ್ ಸಂಸ್ಥೆ, ‘ಅಖಂಡ 2’ ಸಿನಿಮಾವು ನಿಗದಿತ ಸಮಯದಲ್ಲಿ ಬಿಡುಗಡೆ ಆಗುವುದಿಲ್ಲ ಎಂದು ಭಾರವಾದ ಹೃದಯದಿಂದ ನಾವು ತಿಳಿಸುತ್ತಿದ್ದೇವೆ. ಇದು ಬಹಳ ನೋವಿನ ಸಮಯವಾಗಿದೆ. ಸಿನಿಮಾ ಬಿಡುಗಡೆ ಮುಂದೂಡಿಕೆಯಿಂದ ಅಭಿಮಾನಿಗಳಿಗೆ ಆಗುವ ನೋವು ನಮಗೆ ಅರ್ಥವಾಗುತ್ತದೆ. ಆದರೆ ತಪ್ಪಿಸಲಾಗದ ಕೆಲವು ಕಾರಣಗಳಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಸಮಸ್ಯೆಯನ್ನು ಸರಿಪಡಿಸಲು ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಿಮ್ಮ ಬೆಂಬಲ ನಮಗೆ ಬೇಕಿದೆ. ಆದಷ್ಟು ಶೀಘ್ರವೇ ಸಿನಿಮಾ ಬಿಡುಗಡೆ ದಿನಾಂಕವನ್ನು ನಾವು ಘೋಷಿಸುತ್ತೇವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Fri, 5 December 25