ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅನುಮುಲಾ ರೇವಂತ್ ರೆಡ್ಡಿ (Revanth Reddy) ಆಯ್ಕೆ ಆಗಿದ್ದಾರೆ. ಇಂದು (ಡಿಸೆಂಬರ್ 7) ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ನಟ ಮತ್ತು ನಿರ್ಮಾಪಕ ಬಂಡ್ಲ ಗಣೇಶ್ (Bandla Ganesh) ಅವರು ಹೊಸ ಸುದ್ದಿ ಬ್ರೇಕ್ ಮಾಡಿದ್ದಾರೆ. ತೆಲಂಗಾಣದ ಹೊಸ ಸಿಎಂ ರೇವಂತ್ ರೆಡ್ಡಿ ಅವರ ಜೀವನವನ್ನು ಆಧರಿಸಿ ಸಿನಿಮಾ (Revanth Reddy Biopic) ಮಾಡಲು ತಾವು ಸಿದ್ಧರಿರುವುದಾಗಿ ಬಂಡ್ಲ ಗಣೇಶ್ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಅನುಮುಲಾ ರೇವಂತ್ ರೆಡ್ಡಿ ಅವರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.
ಬಂಡ್ಲ ಗಣೇಶ್ ಅವರು ಕಾಂಗ್ರೆಸ್ ಪಕ್ಷದ ಬೆಂಬಲಿಗನಾಗಿ ಗುರುತಿಸಿಕೊಂಡಿದ್ದಾರೆ. ಅನುಮುಲಾ ರೇವಂತ್ ರೆಡ್ಡಿ ಅವರ ಮೇಲೆ ಬಂಡ್ಲ ಗಣೇಶ್ ಬಹಳ ಅಭಿಮಾನ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಮೋಘ ಗೆಲುವಿನ ಹಿಂದೆ ರೇವಂತ್ ರೆಡ್ಡಿ ಅವರ ಪಾತ್ರ ದೊಡ್ಡದಿದೆ. ಹಾಗಾಗಿ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುವ ಬಗ್ಗೆ ಮಾತುಕಥೆ ಶುರುವಾದಂತಿದೆ. ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನವೇ ಬಂಡ್ಲ ಗಣೇಶ್ ಅವರು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣದ ನೂತನ ಸಿಎಂ ಅನುಮೂಲ ರೇವಂತ್ ರೆಡ್ಡಿ ಕಿರು ಪರಿಚಯ
ಈಗಾಗಲೇ ಅನೇಕ ರಾಜಕೀಯ ನಾಯಕರ ಜೀವನದ ವಿವರಗಳನ್ನು ಆಧರಿಸಿ ಸಿನಿಮಾಗಳು ಮೂಡಿಬಂದಿವೆ. ಹಾಗೆಯೇ, ರೇವಂತ್ ರೆಡ್ಡಿ ಅವರ ಬದುಕಿನ ಕಹಾನಿ ಕೂಡ ಆಸಕ್ತಿಕರ ವಿಚಾರಗಳನ್ನು ಒಳಗೊಂಡಿದೆ. ವಿದ್ಯಾರ್ಥಿ ನಾಯಕನಿಂದ ಆರಂಭವಾಗಿ ತೆಲಂಗಾಣದ ಮುಖ್ಯಮಂತ್ರಿ ಪಟ್ಟಕ್ಕೇರುವ ಹಂತಕ್ಕೆ ಬೆಳೆದ ರೇವಂತ್ ಅವರ ಬದುಕು ಯಾವ ಸಿನಿಮಾ ಕಥೆಗಿಂತಲೂ ಕಡಿಮೆ ಇಲ್ಲ. ಅವರ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಬಂಡ್ಲ ಗಣೇಶ್ ಉತ್ಸಾಹ ತೋರಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಇಂದು ಪ್ರಮಾಣವಚನ, ಯಾರ್ಯಾರು ಬರಲಿದ್ದಾರೆ?
2018ರ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಗೆಲ್ಲದಿದ್ದರೆ ಬ್ಲೇಡ್ನಿಂದ ತಾವು ಗಂಟಲು ಕತ್ತರಿಸಿಕೊಳ್ಳುವುದಾಗಿ ಬಂಡ್ಲ ಗಣೇಶ್ ಹೇಳಿದ್ದರು. ಅದೇ ವಿಚಾರವನ್ನು ಇಟ್ಟುಕೊಡು ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ 2023ರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ಬಂಡ್ಲ ಗಣೇಶ್ ಅವರ ಉತ್ಸಾಹ ಇಮ್ಮಡಿ ಆಗಿದೆ. ರೇವಂತ್ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಎಲ್.ಬಿ. ಸ್ಟೇಡಿಯಂಗೆ ಅವರು ಬಂದಿದ್ದಾರೆ. ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ಬಂಡ್ಲ ಗಣೇಶ್ ಅವರು ಹಂಬಲಿಸುತ್ತಿದ್ದಾರೆ. ಈ ವೇಳೆ ಟಿವಿ ಚಾನಲ್ವೊಂದಕ್ಕೆ ಹೇಳಿಕೆ ನೀಡುವಾಗ ಬಯೋಪಿಕ್ ಕುರಿತು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.