ಶವವಾಗಿ ಪತ್ತೆಯಾದ ಯುವ ನಟಿ; ಸಾಯುವುದಕ್ಕೂ ಮುನ್ನ ವಾಟ್ಸಾಪ್​ನಲ್ಲಿ ನಿಗೂಢ ಸ್ಟೇಟಸ್

ಬಿಹಾರದ ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಅವರು ಬಂದು ನೋಡಿದಾಗ ಅಮೃತಾ ಬಾಡಿ ಹಾಸಿಗೆ ಮೇಲಿತ್ತು. ಮೊದಲು ರೂಂ ಒಳಗೆ ಬಂದಿದ್ದು ಅಮೃತಾ ಸಹೋದರಿ. ಅಕ್ಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಶಾಕ್ ಆದರು.

ಶವವಾಗಿ ಪತ್ತೆಯಾದ ಯುವ ನಟಿ; ಸಾಯುವುದಕ್ಕೂ ಮುನ್ನ ವಾಟ್ಸಾಪ್​ನಲ್ಲಿ ನಿಗೂಢ ಸ್ಟೇಟಸ್
ಅಮೃತಾ ಪಾಂಡೆ

Updated on: Apr 30, 2024 | 7:34 AM

ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಕನಸು ಕಂಡು ಬರುವ ಅನೇಕರಿದ್ದಾರೆ. ಆದರೆ, ಎಲ್ಲರಿಗೂ ಗೆಲುವು ಸಿಗುವುದಿಲ್ಲ. ಹೀಗಾದಾಗ ಕೆಲವರು ವೃತ್ತಿ ಬದಲಿಸುತ್ತಾರೆ. ಇನ್ನೂ ಕೆಲವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಶರಣಾಗುತ್ತಾರೆ. ಈಗ ಭೋಜ್​ಪುರಿ ನಟಿ ಅಮೃತಾ ಪಾಂಡೆ (Amrita Pandey) ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಹಾರ ಮೂಲದ ಈ ನಟಿ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವುದಕ್ಕೂ ಮೊದಲು ಅವರು ನಿಗೂಢಾರ್ಥದಲ್ಲಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದರು.

ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಅವರು ಬಂದು ನೋಡಿದಾಗ ಬಾಡಿ ಹಾಸಿಗೆ ಮೇಲಿತ್ತು. ಅಮೃತಾ ಸಹೋದರಿ ಮೊದಲು ರೂಂ ಒಳಗೆ ಬಂದಿದ್ದರು. ಈ ವೇಳೆ ಅಕ್ಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಶಾಕ್ ಆದರು. ಜೊತೆಗೆ ಅವರನ್ನು ಕೆಳಕ್ಕೆ ಇಳಿಸೋ ಪ್ರಯತ್ನ ಮಾಡಿದರು. ಆದರೆ, ಆಗಲೇ ಸಮಯ ಮೀರಿತ್ತು.

ಅಮೃತಾ ಪಾಂಡೆ ಅವರು ಸಾಯುವುದಕ್ಕೂ ಮೊದಲು ಸ್ಟೇಟಸ್ ಒಂದನ್ನು ಹಾಕಿದ್ದರು. ‘ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿದ್ದೇವೆ’ ಎಂದು ಸ್ಟೇಟಸ್ ಹಾಕಿದ್ದರು. ಇದರಿಂದ ಅವರ ಪತಿ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ‘ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆ ಸೇರಿದಾಗ ಅಣ್ಣಾವ್ರು ಬಂದು ತಲೆ ಸವರಿದ್ರು’; ಹಳೇ ಘಟನೆ ನೆನೆದ ಜಗ್ಗೇಶ್

2022ರಲ್ಲಿ ಅಮೃತಾ ಅವರು ಚಂದ್ರಮಣಿ ಎಂಬುವವರನ್ನು ವಿವಾಹವಾದರು. ಅವರ ಪತಿ ವೃತ್ತಿಯಲ್ಲಿ ಇಂಜಿನಿಯರ್. ಅಮೃತಾ ಅವರು ನಟನೆಯಲ್ಲಿ ಸರಿಯಾಗಿ ಚಾನ್ಸ್ ಸಿಗದೆ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ. ಅಮೃತಾ ಅವರು ‘ಪ್ರತಿಶೋಧ’ ಹೆಸರಿನ ಸೀರಿಸ್​ನಲ್ಲಿ ನಟಿಸಿದ್ದರು. ಅವರು ‘ದೀವಾನಪನ್’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅವರ ಸಾವಿಗೆ ನಿಜಕ್ಕೂ ಖಿನ್ನತೆ ಕಾರಣವೇ ಅಥವಾ ಬೇರೆ ಏನಾದರೂ ಇದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.