ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುನ್ನ ಬಿಡುಗಡೆ ಆಗಲಿದೆ ‘ಕಾಂಗರೂ’ ಸಿನಿಮಾ

ನಟ ಆದಿತ್ಯ ಹಾಗೂ ‘ಕನ್ನಡತಿ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಅವರು ‘ಕಾಂಗರೂ’ ಸಿನಿಮಾದಲ್ಲಿ ಪ್ರಧಾನ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಚಿತ್ರತಂಡದವರು ಈ ಸಿನಿಮಾದ ಟ್ರೇಲರ್​ ಅನಾವರಣ ಮಾಡಿದರು. ಮೇ 4ಕ್ಕೆ ಆದಿತ್ಯ ಅವರ ಜನ್ಮದಿನ. ಮೇ 3ರಂದು ‘ಕಾಂಗರೂ’ ಸಿನಿಮಾ ತೆರೆಕಾಣಲಿದೆ. ಸಾಧು ಕೋಕಿಲ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಒಂದು ದಿನ ಮುನ್ನ ಬಿಡುಗಡೆ ಆಗಲಿದೆ ‘ಕಾಂಗರೂ’ ಸಿನಿಮಾ
ಆದಿತ್ಯ, ರಂಜನಿ ರಾಘವನ್
Follow us
ಮದನ್​ ಕುಮಾರ್​
|

Updated on: Apr 29, 2024 | 10:53 PM

‘ಕಾಂಗರೂ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟ ಆದಿತ್ಯ (Aditya) ಅವರು ಹೀರೋ ಆಗಿ ನಟಿಸಿದ್ದಾರೆ. ‘ಆರೋಹ ಪ್ರೊಡಕ್ಷನ್ಸ್’ ಮೂಲಕ ಚೆನ್ನಕೇಶವ, ರಮೇಶ್‌ ಬಂಡೆ, ನರಸಿಂಹಮೂರ್ತಿ ಚಕ್ರಭಾವಿ, ಸ್ವಾಮಿ ಚಕ್ರಭಾವಿ, ಕೆ.ಜಿ.ಆರ್. ಗೌಡ, ರವಿ ಕೀಲಾರ ಮಂಡ್ಯ ಅವರು ನಿರ್ಮಾಣ ಮಾಡಿದ್ದಾರೆ. ಕಿಶೋರ್ ಮೇಗಳಮನೆ ಅವರ ನಿರ್ದೇಶನದಲ್ಲಿ ‘ಕಾಂಗರೂ’ ಸಿನಿಮಾ (Kangaroo Movie) ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಮೇ 4ರಂದು ಅದಿತ್ಯ ಅವರ ಹುಟ್ಟುಹಬ್ಬ. ಅದಕ್ಕೂ ಒಂದು ದಿನ ಮುನ್ನ, ಅಂದರೆ ಮೇ 3ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಟಿ ರಂಜನಿ ರಾಘವನ್​ (Ranjani Raghavan) ಅವರು ‘ಕಾಂಗರೂ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಈ ಸಿನಿಮಾದ ನಿರ್ಮಾಪಕರೇ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಆ ಬಗ್ಗೆ ಮಾತನಾಡಿದ ಆದಿತ್ಯ, ‘ನಿರ್ಮಾಪಕರೇ ನಮ್ಮ ಅನ್ನದಾತರು. ಆದ್ದರಿಂದ ಅವರಿಂದಲೇ ಟ್ರೇಲರ್ ಬಿಡುಗಡೆ ಮಾಡಿಸಬೇಕು ಎಂದು ನಾನು ಮತ್ತು ನಿರ್ದೇಶಕರು ಅಂದುಕೊಂಡೆವು. ಹಾಗಾಗಿ ನಿರ್ಮಾಪಕರೇ ಟ್ರೇಲರ್ ಅನಾವರಣ ಮಾಡಿದ್ದಾರೆ’ ಎಂದು ಹೇಳಿದರು. ಈ ಸಿನಿಮಾದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ತಾಯಿ ಸೆಂಟಿಮೆಂಟ್​ ಮುಂತಾದ ಅಂಶಗಳು ಇವೆ ಎಂದು ಆದಿತ್ಯ ಹೇಳಿದ್ದಾರೆ.

ಸಾಧು ಕೋಕಿಲ ಅವರು ‘ಕಾಂಗರೂ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಮೊದಲು ಆದಿತ್ಯ ಅವರ ಕಾಂಬಿನೇಷನ್​ನಲ್ಲಿ ‘ನೀನೊಂದು ಮುಗಿಯದ ಮೌನ..’ ಹಾಡನ್ನು ಸಾಧುಕೋಕಿಲ ನೀಡಿದ್ದರು. ಈಗ ಅವರೊಂದಿಗೆ ಮತ್ತೆ ಸಿನಿಮಾ ಮಾಡಿದ್ದಕ್ಕೆ ಆದಿತ್ಯ ಅವರಿಗೆ ಖುಷಿ ಇದೆ. ‘ಸಾಧು ಕೋಕಿಲ ಅವರು ಮತ್ತೊಮ್ಮೆ ನನ್ನ ಸಿನಿಮಾಗೆ ಅದ್ಭುತವಾದ ಸಂಗೀತ ನೀಡಿದ್ದಾರೆ. ಅದೇ ರೀತಿ ಕ್ಯಾಮೆರಾ ವರ್ಕ್ ಕೂಡ ನಮ್ಮ ಸಿನಿಮಾದ ಮತ್ತೊಂದು ಹೈಲೈಟ್. ಉದಯಲೀಲಾ ಅವರು ತುಂಬಾ ಚೆನ್ನಾಗಿ ಛಾಯಾಗ್ರಹಣ ಮಾಡಿದ್ದಾರೆ. ನನಗೆ ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರವಿದೆ’ ಎಂದಿದ್ದಾರೆ ಆದಿತ್ಯ.

Kangaroo Movie Producers

‘ಕಾಂಗರೂ’ ಸಿನಿಮಾದ ನಿರ್ಮಾಪಕರು

‘ಕನ್ನಡತಿ’ ಸೀರಿಯಲ್​ ಖ್ಯಾತಿಯ ರಂಜನಿ ರಾಘವನ್ ಅವರಿಗೆ ಈ ಸಿನಿಮಾದಲ್ಲಿ ನಾಯಕಿ ಪಾತ್ರವಿದೆ. ‘ನಾನು ಆದಿತ್ಯ ನಟನೆಯ ಸಿನಿಮಾಗಳನ್ನು ನೋಡಿ ಬೆಳೆದವಳು. ಈಗ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿತು. ಪ್ರೇಕ್ಷಕಳಾಗಿ ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ’ ಎಂದಿದ್ದಾರೆ ರಂಜನಿ ರಾಘವನ್​.

ಇದನ್ನೂ ಓದಿ: ಸೆಟ್ಟೇರಿತು ಆರ್​. ಚಂದ್ರು ನಿರ್ಮಾಣದ ‘ಫಾದರ್​’ ಸಿನಿಮಾ; ಶುಭಕೋರಿದ ಶಿವಣ್ಣ

ಅಂದಾಜು 150ರಿಂದ 200 ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ಕಿಶೋರ್ ಮೇಗಳಮನೆ ತಿಳಿಸಿದ್ದಾರೆ. ‘ಇದು ಫ್ಯಾಮಿಲಿ ಪ್ರೇಕ್ಷಕರಿಗಾಗಿ ಮಾಡಿದ ಸಿನಿಮಾ’ ಎಂದು ಅವರು ಹೇಳಿದಾರೆ. ಬೆಂಗಳೂರು, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು, ಹೊರನಾಡು ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ‘ಯು ಟರ್ನ್’ ಸಿನಿಮಾದಿಂದ ಸ್ಫೂರ್ತಿ ಪಡೆದು ಕಿಶೋರ್​ ಮೇಗಳಮನೆ ಅವರು ‘ಕಾಂಗರೂ’ ಸಿನಿಮಾ ಮಾಡಿದ್ದಾರೆ. ಒಂದು ಚಿಕ್ಕ ತಪ್ಪಿನಿಂದ ಮುಂದೆ ಏನೆಲ್ಲ ಆಗಬಹುದು ಎಂಬುದು ಈ ಸಿನಿಮಾವನ್ನು ಅವರು ತೋರಿಸಿದ್ದಾರಂತೆ.

ನಿರ್ಮಾಪಕ ರಮೇಶ್ ಬಂಡೆ ಮಾತನಾಡಿ, ‘ನಾವು ಆರು ಮಂದಿ ಸ್ನೇಹಿತರು ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಹೊಸದಾಗಿ ಏನಾದರೂ ಮಾಡೋಣ ಎಂಬ ಉದ್ದೇಶದಿಂದ ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಜನರು ಕೊಡುವ ಹಣಕ್ಕೆ ಈ ಸಿನಿಮಾ ನ್ಯಾಯ ಒದಗಿಸುತ್ತದೆ’ ಎಂದರು. ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ರವಿ ಕೀಲಾರ ಮಂಡ್ಯ ಹೇಳಿದ್ದಾರೆ. ‘ಕನ್ನಡದ ಪ್ರೇಕ್ಷಕರಿಗಾಗಿ ಒಳ್ಳೆಯ ಸಿನಿಮಾವನ್ನು ಮಾಡಿರುವ ಖುಷಿಯಿದೆ’ ಎಂದು ಮತ್ತೋರ್ವ ನಿರ್ಮಾಪಕ ಚೆನ್ನಕೇಶವ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.