ನಿಮಗೂ ಸಿಗಬಹುದು 600 ರೂಪಾಯಿ ನೋಟು; ಏನಿದರ ಅಸಲಿಯತ್ತು?
ನ್ಯೂಸ್ ಪೇಪರ್ ಒಳಗೆ 600 ರೂಪಾಯಿ ನೋಟನ್ನು ಇಟ್ಟು ಜನರಿಗೆ ತಲುಪಿಸಲಾಗುತ್ತಿದೆ. ಜನಜಂಗುಳಿ ಇರುವ ಜಾಗಗಳಲ್ಲೂ ಕೂಡ ಈ ನೋಟನ್ನು ಇಡಲಾಗುತ್ತಿದೆ. ಆ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಒಮ್ಮೆಲೇ ನೋಡಿದರೆ ರಿಯಲ್ ದುಡ್ಡಿನ ರೀತಿ ಕಾಣುವ ಈ ನೋಟಿನ ಇನ್ನೊಂದು ಬದಿಯಲ್ಲಿ ಅಸಲಿ ವಿಚಾರ ಅಡಗಿದೆ.

ಸುಮ್ಮನೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ದುಡ್ಡು ಸಿಗಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಕೆಲವೊಮ್ಮೆ ಅದು ನಿಜವಾಗುತ್ತದೆ ಕೂಡ. ಈಗ ಕೆಲವರಿಗೆ ಗರಿ ಗರಿ ನೋಟು ಸಿಗುತ್ತಿದೆ. ಆದರೆ ಅದು 500 ರೂಪಾಯಿ ನೋಟು ಅಲ್ಲ. ಬದಲಿಗೆ 600 ರೂಪಾಯಿ ನೋಟು! ದೂರದಿಂದ ನೋಡಿದರೆ ಪಕ್ಕಾ 500 ರೂಪಾಯಿಯ ನೋಟಿನಂತೆ ಕಾಣುವ ಇದು ಸಂಪೂರ್ಣ ನಕಲಿ! ತಿರುಗಿಸಿ ನೋಡಿದರೆ ಅದರ ಅಸಲಿಯತ್ತು ಏನು ಎಂಬುದು ಗೊತ್ತಾಗುತ್ತದೆ. ಹೌದು, ಇದು ‘ಫ್ಯಾಮಿಲಿ ಡ್ರಾಮಾ’ (Family Drama) ಸಿನಿಮಾದ ಪ್ರಮೋಷನ್ ಪ್ಲ್ಯಾನ್.
ಹೊಸಬರ ತಂಡವೊಂದು ‘ಫ್ಯಾಮಿಲಿ ಡ್ರಾಮಾ’ ಸಿನಿಮಾ ಮಾಡಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್ ಬಿಡುಗಡೆಯ ವಿಚಾರವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಹಾಗೂ ಸಿನಿಪ್ರಿಯರು ಟ್ರೇಲರ್ ನೋಡುವಂತೆ ಆಗಬೇಕು ಎಂಬ ಉದ್ದೇಶದಿಂದ ಈ 600 ರೂಪಾಯಿ ನೋಟಿನ ಪ್ಲ್ಯಾನ್ ಮಾಡಲಾಗಿದೆ. ಈ ನೋಟಿನ ಇನ್ನೊಂದು ಬದಿಯಲ್ಲಿ ದೊಡ್ಡದಾಗಿ ‘ಫ್ಯಾಮಿಲಿ ಡ್ರಾಮಾ ಟ್ರೇಲರ್’ ಎಂದು ಬರೆಯಲಾಗಿದೆ. ಪಕ್ಕದಲ್ಲಿ ಕ್ಯೂಆರ್ ಕೋಡ್ ನೀಡಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ‘ಫ್ಯಾಮಿಲಿ ಡ್ರಾಮಾ’ ಸಿನಿಮಾದ ಟ್ರೇಲರ್ ವೀಕ್ಷಿಸಬಹುದು.

600 ರೂಪಾಯಿ ನೋಟಿನ ಇನ್ನೊಂದು ಬದಿ
ಆರ್ಕಷ್ ಎಚ್.ಪಿ. ಅವರು ‘ಫ್ಯಾಮಿಲಿ ಡ್ರಾಮಾ’ ಸಿನಿಮಾಗೆ ನಿರ್ದೇಶನ ಮಾಡಿದ್ದು, ದಬ್ಬುಗುಡಿ ಮುರಳಿಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಸಿಂಧೂ ಶ್ರೀನಿವಾಸ ಮೂರ್ತಿ, ಮಹದೇವ್ ಹಡಪದ್, ಅಭಯ್, ಪೂರ್ಣಚಂದ್ರ ಮೈಸೂರು ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡದವರು ಹೊಸ ತಂತ್ರ ರೂಪಿಸಿದ್ದಾರೆ.
ಇದನ್ನೂ ಓದಿ: ಸದ್ದು ಮಾಡುತ್ತಿದೆ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್; ಭರವಸೆ ಮೂಡಿಸಿದ ಹೊಸ ಸಿನಿಮಾ ತಂಡ
ನ್ಯೂಸ್ ಪೇಪರ್ ಜೊತೆಗೆ ಇಟ್ಟು 600 ರೂಪಾಯಿ ನೋಟನ್ನು ಜನರಿಗೆ ತಲುಪಿಸಲಾಗಿದೆ. ಜನ ಜಂಗುಳಿ ಇರುವ ಪ್ರದೇಶಗಳಲ್ಲೂ ಸಹ ಈ ನೋಟನ್ನು ಇಡಲಾಗಿದೆ. ಆ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಿನಿಮಾ ಮಾಡುವುದು ಎಷ್ಟು ಮುಖ್ಯವೋ ಸೂಕ್ತವಾಗಿ ಪ್ರಚಾರ ಮಾಡುವುದು ಕೂಡ ಅಷ್ಟೇ ಮುಖ್ಯ. ಜನರಿಗೆ ಸಿನಿಮಾ ಬಗ್ಗೆ ತಿಳಿಸಿಕೊಡಲು ‘ಫ್ಯಾಮಿಲಿ ಡ್ರಾಮಾ’ ತಂಡದವರು ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್, ಪೋಸ್ಟರ್ ಗಮನ ಸೆಳೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.