AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ರೂಪಾಯಿ ಸಂಭಾವನೆ ಇದ್ದ ಕಾಲಕ್ಕೆ 50 ಸಾವಿರ ಸಂಭಾವನೆ ಪಡೆದಿದ್ದ ಲೀಲಾವತಿ

Leelavathi: ನಟರ ತಿಂಗಳ ಸಂಭಾವನೆಯೇ ತಿಂಗಳಿಗೆ 500 ಇದ್ದ ಸಮಯದಲ್ಲಿ ಒಂದೇ ಬಾರಿ 50 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರು ಲೀಲಾವತಿ. ಆ ಬಗ್ಗೆ ಅವರೇ ಹೀಗೆ ಬರೆದುಕೊಂಡಿದ್ದಾರೆ.

500 ರೂಪಾಯಿ ಸಂಭಾವನೆ ಇದ್ದ ಕಾಲಕ್ಕೆ 50 ಸಾವಿರ ಸಂಭಾವನೆ ಪಡೆದಿದ್ದ ಲೀಲಾವತಿ
ಮಂಜುನಾಥ ಸಿ.
|

Updated on: Dec 08, 2023 | 9:25 PM

Share

ಲೀಲಾವತಿ (Leelavathi) ಅವರ ಸಿನಿಮಾ ಜರ್ನಿ ಅದ್ಭುತವಾದುದು, ಅವರ ಜೀವನ ಪಯಣವೂ ಸಹ. ಲೀಲಾವತಿಯವರು ರಂಗಭೂಮಿಯಿಂದ ನಟನೆ ಆರಂಭಿಸಿ ಬಳಿಕ ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಅನಭಿಶಿಕ್ತ ರಾಣಿಯಾಗಿ ಮೆರೆದವರು. ಸಿನಿಮಾಗಳಂತೆ ರಂಗಭೂಮಿಯಲ್ಲೂ ಅತ್ಯಂತ ಬೇಡಿಕೆಯ ನಟಿಯಾಗಿದ್ದವರು ಲೀಲಾವತಿ. ಸಿನಿಮಾಗಳಲ್ಲಿಯೇ ತಿಂಗಳ ಸಂಬಳ 500 ರೂಪಾಯಿಗಳಷ್ಟೆ ಇದ್ದ ಸಮಯದಲ್ಲಿಯೇ ಅವರು ನಾಟಕದಲ್ಲಿ ಅಭಿನಯಿಸಲು 50 ಸಾವಿರ ರೂಪಾಯಿ ಸಂಭಾವನೆ ಒಟ್ಟಿಗೆ ಪಡೆದಿದ್ದರಂತೆ. ಈ ಬಗ್ಗೆ ಸ್ವತಃ ಲೀಲಾವತಿಯವರೇ ಬರೆದುಕೊಂಡಿದ್ದಾರೆ.

ರಂಗಭೂಮಿಯ ಧೀಮಂತ ಪ್ರತಿಭೆ ಚಿತ್ತರಗಿ ಗಂಗಾಧರ ಶಾಸ್ತ್ರಿ ಅವರ ಜನ್ಮಶತಮಾನೋತ್ಸವ ಗಣೇಶ ಅಮೀನಗಡ ಸಂಪಾದಿಸಿದ್ದ ಸಂಸ್ಮರಣಾ ಗ್ರಂಥದಲ್ಲಿ, ಚಿತ್ತರಗಿ ಗಂಗಾಧರ ಶಾಸ್ತ್ರಿಯವರ ಬಗ್ಗೆ ಸ್ವತಃ ಲೀಲಾವತಿಯವರು ಬರೆದಿರುವ ಲೇಖನವೊಂದರಲ್ಲಿ ಮೇಲಿನ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ತಮಗೆ ಅಷ್ಟು ದೊಡ್ಡ ಸಂಭಾವನೆ ಕೊಟ್ಟ ಮಹನೀಯ ಚಿತ್ತರಗಿ ಗಂಗಾಧರ ಶಾಸ್ತ್ರಿಯವರನ್ನು ನೆನದಿದ್ದಾರೆ.

‘ಉತ್ತರ ಕರ್ನಾಟಕದ ನಾಟಕ ಮಂಡಳಿಗಳ ಋಣ, ಅಲ್ಲಿನ ಪ್ರೇಕ್ಷಕರ ಋಣ ಎಂದಿಗೂ ಮರೆಯುವಂತಿಲ್ಲ. ನಾನು ಅತೀವ ಕಷ್ಟದಲ್ಲಿದ್ದಾಗ ಕೈಹಿಡಿದವರು ಅಲ್ಲಿನ ಜನ, ಮತ್ತು ಚಿತ್ತರಗಿ ಗಂಗಾಧರ ಶಾಸ್ತ್ರಿಗಳು, ನನ್ನ ಪಾಲಿಗೆ ಅವರು ಗಂಗಾಧರೇಶ್ವರ ಅಂದರೆ ಈಶ್ವರನೇ. ನಾನು ಬಹಳ ಕಷ್ಟದಲ್ಲಿದ್ದ ಸಮಯದಲ್ಲಿ ನನಗೆ ಒಮ್ಮೆಲೆ 50 ಸಾವಿರ ರೂಪಾಯಿ ಹಣ ನೀಡಿ ನಾಟಕಗಳಿಗೆ ಒಪ್ಪಂದ ಮಾಡಿಕೊಂಡರು. ಅದರಿಂದಲೇ ಮದ್ರಾಸ್​ನ ನನ್ನ ತೋಟವನ್ನು ಉಳಿಸಿಕೊಳ್ಳುವಂತಾಯ್ತು, ಇಂದು ಅದು ನನ್ನ ಕೋಟ್ಯಂತರ ಮೌಲ್ಯದ ಆಸ್ತಿ’ ಎಂದು 2018ರಲ್ಲಿ ಬರೆದಿದ್ದರು ಲೀಲಾವತಿ.

ಇದನ್ನೂ ಓದಿ:ಪ್ರಾಣಿಗಳನ್ನೂ ಮಕ್ಕಳಂತೆ ಕಾಣುತ್ತಿದ್ದ ಲೀಲಾವತಿ; ದೇವರು ಮೆಚ್ಚುವ ಕೆಲಸ ಮಾಡಿದ ಬಳಿಕವೇ ನಿಧನರಾದ ನಟಿ

‘ಒಂದು ದಿನ ಗಂಗಾಧರ ಶಾಸ್ತ್ರಿಗಳು ಮನೆಗೆ ಬಂದರು. ಅಮ್ಮ ನಾಟಕಕ್ಕೆ ಒಪ್ಪಂದ ಮಾಡಿಕೊಳ್ಳಿ ಮುಂಗಡವಾಗಿ 50,000 ಕೊಡ್ತೀನಿ ಅಂದರು. ನನಗೆ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಒಂದೇ ಬಾರಿ ಅಷ್ಟು ಹಣವನ್ನು ನಾನು ನೋಡಿಯೇ ಇರಲಿಲ್ಲ. ಸಿನಿಮಾದಲ್ಲಿ ಸಹ ಹೆಚ್ಚೆಂದರೆ ಐದು ಸಾವಿರ, ಅದರ ಮೇಲೆ ಕೊಡುತ್ತಿರಲಿಲ್ಲ. ಮದ್ರಾಸ್​ನಲ್ಲಿ ತೋಟ ಖರೀದಿಸಿದ್ದೆ ಅದರ ಸಾಲ ಬಾಕಿ ಇತ್ತು, ಹಣ ಹೊಂದಿಸದೆ ಹೋಗಿದ್ದರೆ ತೋಟ ಕೈಬಿಡುತ್ತಿತ್ತು. ಅದೇ ಸಮಯಕ್ಕೆ ಗಂಗಾಧರ ಶಾಸ್ತ್ರಿಗಳು ಬಂದು ಹಣ ಕೊಟ್ಟರು. ಅದರಿಂದಾಗಿಯೇ ತೋಟ ಉಳಿಸಿಕೊಂಡೆ. ಅದು ನನ್ನ ತೋಟವನ್ನು ಬದಲಿಗೆ ಗಂಗಾಧರ ಶಾಸ್ತ್ರಿಗಳದ್ದೇ ತೋಟ’’ ಎಂದು ಲೀಲಾವತಿಯವರು ಬರೆದಿದ್ದರು.

‘‘50 ಸಾವಿರ ರೂಪಾಯಿ ಕೊಟ್ಟು 160 ನಾಟಕಕ್ಕೆ ಮುಂಗಡವಾಗಿ ಬುಕ್ ಮಾಡಿಕೊಂಡರು. ಗುಡಿಗೇರೆ ಬಸವರಾಜು ಅವರ ನಾಟಕ ಕಂಪೆನಿ ನಷ್ಟದಲ್ಲಿದ್ದರಿಂದ ಅದನ್ನು ಗಂಗಾಧರ ಶಾಸ್ತ್ರಿಗಳು ವಹಿಸಿಕೊಂಡು ನಡೆಸಿಕೊಂಡು ಹೋಗುತ್ತಿದ್ದರು. ಅದೇ ಕಂಪೆನಿಯಲ್ಲಿ ನಾನು ‘ಸೂಳೆಯ ಮಗ’ ನಾಟಕದ ನಾಯಕಿಯ ಪಾತ್ರದಲ್ಲಿ ನಟಿಸಿದೆ. ಹೋದಲ್ಲೆಲ್ಲ ಉತ್ತರ ಕರ್ನಾಟಕದ ಜನ ಭರಪೂರ ಪ್ರೀತಿ ನೀಡಿದರು. ಅದನ್ನು ಎಂದಿಗೂ ನಾನು ಮರೆಯುವುದಿಲ್ಲ. ನನಗೆ ಸಿನಿಮಾದಿಂದ ಆಗಿರುವ ಉಪಕಾರಕ್ಕಿಂತಲೂ ನಾಟಕದಿಂದ ಆಗಿರುವ ಉಪಕಾರವೇ ಹೆಚ್ಚು, ಉಸಿರು ಹೋಗುವ ಸಮಯದಲ್ಲಿ ನಾಟಕ ನನ್ನನ್ನು ಕಾಪಾಡಿದೆ. ಉತ್ತರ ಕರ್ನಾಟಕದ ಜನ ನನ್ನನ್ನು ಕಾಪಾಡಿದ್ದಾರೆ’ ಎಂದು ಭಾವುಕರಾಗಿ ಲೀಲಾವತಿಯವರು ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ