ಸೆಟ್ಟೇರಿತು ಆರ್. ಚಂದ್ರು ನಿರ್ಮಾಣದ ‘ಫಾದರ್’ ಸಿನಿಮಾ; ಶುಭಕೋರಿದ ಶಿವಣ್ಣ
ಆರ್. ಚಂದ್ರು ಅವರು ನಿರ್ಮಾಣ ಮಾಡುತ್ತಿರುವ ‘ಫಾದರ್’ ಚಿತ್ರಕ್ಕೆ ರಾಜ್ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆದಿದೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಪ್ರದೀಪ್ ಈಶ್ವರ್, ಎಚ್.ಎಂ. ರೇವಣ್ಣ ಸೇರಿದಂತೆ ಅನೇಕ ಗಣ್ಯರು ಮುಹೂರ್ತಕ್ಕೆ ಆಗಮಿಸಿ ‘ಫಾದರ್’ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕನ್ನಡ ಚಿತ್ರರಂಗದ ಅನುಭವಿ ನಿರ್ದೇಶಕ/ನಿರ್ಮಾಪಕ ಆರ್. ಚಂದ್ರು (R. Chandru) ಅವರು ಇತ್ತೀಚೆಗಷ್ಟೇ ‘ಆರ್.ಸಿ. ಸ್ಟುಡಿಯೋಸ್’ ಸಂಸ್ಥೆಯನ್ನು ಆರಂಭಿಸಿದರು. ಅದರ ಮೂಲಕ 5 ಹೊಸ ಸಿನಿಮಾಗಳನ್ನು ನಿರ್ಮಾಣ ಮಾಡುವ ಕುರಿತು ಮಾಹಿತಿ ನೀಡಿದ್ದರು. ಈಗ ಆ ಐದು ಸಿನಿಮಾಗಳಲ್ಲಿ ಮೊದಲ ಚಿತ್ರವಾಗಿ ‘ಡಾರ್ಲಿಂಗ್’ ಕೃಷ್ಣ ನಟನೆಯ ‘ಫಾದರ್’ ಸಿನಿಮಾ (Father Kannada Movie) ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನಡೆಯಿತು. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಮತ್ತು ಗೀತಾ ಶಿವರಾಜ್ಕುಮಾರ್ ಆರಂಭ ಫಲಕ ತೋರುವ ಮೂಲಕ ‘ಫಾದರ್’ ಸಿನಿಮಾದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಶಾಸಕ ಪ್ರದೀಪ್ ಈಶ್ವರ್, ರಾಜಕೀಯ ಮುಖಂಡ ಎಚ್.ಎಂ. ರೇವಣ್ಣ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಚೇತನ್ ಕುಮಾರ್, ಮಂಜುನಾಥ್, ಮಮತಾ ದೇವರಾಜ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ‘ಫಾದರ್’ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದರು. ‘ಆರ್. ಚಂದ್ರು ನನ್ನ ಆತ್ಮೀಯ. ಸಿನಿಮಾವನ್ನು ಅವರು ಪ್ರೀತಿಸುತ್ತಾರೆ. ಆರ್.ಸಿ. ಸ್ಟುಡಿಯೋಸ್ ಸಂಸ್ಥೆಯ ಮೂಲಕ ಮೊದಲ ಚಿತ್ರವಾಗಿ ‘ಫಾದರ್’ ಸಿನಿಮಾ ಶುರು ಮಾಡಿದ್ದಾರೆ. ಅವರಿಗೆ ಮತ್ತು ಅವರ ಇಡೀ ತಂಡಕ್ಕೆ ಶುಭವಾಗಲಿ’ ಎಂದು ಶಿವಣ್ಣ ವಿಶ್ ಮಾಡಿದರು.
ಶಿವರಾಜ್ಕುಮಾರ್ ನಟಿಸಿದ್ದ ‘ಭೈರಾಗಿ’ ಸಿನಿಮಾಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜ್ ಮೋಹನ್ ಅವರು ಈಗ ‘ಫಾದರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದು, ಅವರಿಗೆ ಅಮೃತಾ ಅಯ್ಯಂಗಾರ್ ಜೋಡಿ ಆಗಿದ್ದಾರೆ. ಪ್ರಕಾಶ್ ರೈ, ಸುನೀಲ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ‘ಹನುಮಾನ್’ ಸಿನಿಮಾದ ಖ್ಯಾತಿಯ ಹರಿ ಅವರು ಸಂಗೀತ ನೀಡುತ್ತಿದ್ದಾರೆ ಎಂದು ಆರ್. ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.
‘ನಾನು ನಿರ್ದೇಶನ ಮಾಡಿದ್ದ ‘ಚಾರ್ ಮಿನಾರ್’ ಸಿನಿಮಾ ಆರಂಭ ಆದಗಿನಿಂದ ಈತನಕ ನನಗೆ ಶಿವಣ್ಣ ಮತ್ತು ಗೀತಾಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಲೋಕಸಭಾ ಚುನಾವಣೆಯ ಸಮಯ ಆಗಿದ್ದರೂ ಕೂಡ ಅವರು ಇಲ್ಲಿಗೆ ಬಂದು ನಮ್ಮ ಸಿನಿಮಾಗೆ ಚಾಲನೆ ನೀಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕೆಲವೇ ದಿನಗಳ ಹಿಂದೆ ‘ಆರ್.ಸಿ. ಸ್ಟುಡಿಯೋಸ್’ ಸಂಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ಸಂಸ್ಥೆಯಿಂದ 1 ವರ್ಷದಲ್ಲಿ 5 ಸಿನಿಮಾ ನಿರ್ಮಿಸುವುದಾಗಿ ಹೇಳಿದ್ದೇನೆ. ಅದರ ಮೊದಲ ಹೆಜ್ಜೆ ಎಂಬಂತೆ ‘ಫಾದರ್’ ಸಿನಿಮಾದ ಕೆಲಸ ಶುರುವಾಗಿದೆ’ ಎಂದಿದ್ದಾರೆ ಆರ್. ಚಂದ್ರು.
ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಶಿವಣ್ಣ, ಗೀತಾ ಭೇಟಿ; ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು
ನಿರ್ದೇಶಕ ರಾಜ್ ಮೋಹನ್ ಮಾತನಾಡಿ, ‘ಇದೊಂದು ತಂದೆ-ಮಗನ ನಡುವಿನ ಬಾಂಧವ್ಯದ ಕಹಾನಿ. ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ಫಾದರ್ ಸಿನಿಮಾದಲ್ಲಿ ಇರಲಿವೆ’ ಎಂದರು. ‘ಡೈರೆಕ್ಟರ್ ಹೇಳಿದ ಕಥೆ ನನ್ನ ಮನಸ್ಸಿಗೆ ತುಂಬ ಹತ್ತಿರ ಆಯಿತು. ಆರ್. ಚಂದ್ರು ಅವರ ಜೊತೆಗೆ ನನಗೆ ಇದು ಮೊದಲ ಸಿನಿಮಾ’ ಎಂದರು ನಟ ಡಾರ್ಲಿಂಗ್ ಕೃಷ್ಣ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.