ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು

|

Updated on: May 28, 2021 | 9:00 AM

ಕೊವಿಡ್​ನಿಂದಾಗಿ ಕಷ್ಟಪಡುತ್ತಿರುವ ಹಲವು ಪ್ರದೇಶಗಳ ಜನರಿಗೆ ಭೂಮಿ ಪಡ್ನೇಕರ್​ ಸಹಾಯ ಮಾಡಿದ್ದಾರೆ. ಈಗ ಅವರು ಕಪಿಲ್​ ಶರ್ಮಾ ಜೊತೆಗೂಡಿ ಕರ್ನಾಟಕದ ಜನರ ಸಹಾಯಕ್ಕೆ ಧಾವಿಸಿದ್ದಾರೆ.

ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು
ಭೂಮಿ ಪೆಡ್ನೇಕರ್​- ಕಪಿಲ್​ ಶರ್ಮಾ
Follow us on

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ತೀವ್ರ ಹೊಡೆತ ತಿಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಮುಂಚೂಣಿಯಲ್ಲಿದೆ. ಬೆಡ್​ ಮತ್ತು ಆಕ್ಸಿಜನ್​ ಸಿಲಿಂಡರ್​ಗಳ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಅನೇಕರು ಅಸುನೀಗಿದ್ದಾರೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಅನೇಕ ಸ್ಟಾರ್​ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಸೋನು ಸೂದ್​ ಹಲವು ಬಗೆಯಲ್ಲಿ ಕರ್ನಾಟಕಕ್ಕೆ ನೆರವಾಗುತ್ತಿದ್ದಾರೆ. ಸೋನು ಮಾತ್ರವಲ್ಲದೆ ಇನ್ನೂ ಕೆಲವು ಬಾಲಿವುಡ್​ ಸ್ಟಾರ್​ಗಳು ನೆರವು ನೀಡುತ್ತಿದ್ದಾರೆ. ಹಾಸ್ಯ ಕಲಾವಿದ, ಟಿವಿ ಕಾರ್ಯಕ್ರಮಗಳ ನಿರೂಪಕ ಕಪಿಲ್​ ಶರ್ಮಾ ಹಾಗೂ ನಟಿ ಭೂಮಿ ಪೆಡ್ನೇಕರ್​ ಕೂಡ ಕರುನಾಡಿಗೆ ನೆರವು ನೀಡುತ್ತಿದ್ದಾರೆ.

ಕೊವಿಡ್​ನಿಂದಾಗಿ ಕಷ್ಟಪಡುತ್ತಿರುವ ಹಲವು ಪ್ರದೇಶಗಳ ಜನರಿಗೆ ಭೂಮಿ ಪೆಡ್ನೇಕರ್​ ಸಹಾಯ ಮಾಡಿದ್ದಾರೆ. ಈಗ ಅವರು ಕಪಿಲ್​ ಶರ್ಮಾ ಜೊತೆಗೂಡಿ ಕರ್ನಾಟಕದ ಜನರ ಸಹಾಯಕ್ಕೆ ಧಾವಿಸಿದ್ದಾರೆ. ಇಬ್ಬರೂ ಜೊತೆಯಾಗಿ ಕರುನಾಡಿನ ಹಲವು ಆಸ್ಪತ್ರೆಗಳಿಗೆ ಆಕ್ಸಿಜನ್​ ಬಸ್​ಗಳನ್ನು ಬದಗಿಸುತ್ತಿದ್ದಾರೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮುಂತಾದ ಕಡೆಗಳಲ್ಲಿ ಆಸ್ಪತ್ರೆಗಳ ಎದುರು ಆಕ್ಸಿಜನ್​ ಬಸ್​ಗಳು ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳಲು ಭೂಮಿ ಪೆಡ್ನೇಕರ್​ ಮತ್ತು ಕಪಿಲ್​ ಶರ್ಮಾ ವ್ಯವಸ್ಥೆ ಮಾಡುತ್ತಿದ್ದಾರೆ.

‘ಕೊವಿಡ್​ ಎರಡನೇ ಅಲೆ ಈಗ ಗ್ರಾಮೀಣ ಭಾಗಗಳಿಗೆ ಹಬ್ಬಿದೆ. ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್​ ಸೇರಿದಂತೆ ಕೆಲವು ಅಗತ್ಯ ಸೌಲಭ್ಯಗಳ ಕೊರತೆ ಇದೆ. ಹಾಗಾಗಿ ಅಂಥ ಕಡೆಗಳಿಗೆ ನಾವು ಆಕ್ಸಿಜನ್​ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಗ್ರಾಮೀಣ ಪ್ರದೇಶ ಮತ್ತು ಜಿಲ್ಲಾ ಕೇಂದ್ರಗಳ ಕಡೆಗೆ ನಾವು ಗಮನ ಹರಿಸುತ್ತಿದ್ದೇವೆ’ ಎಂದು ಭೂಮಿ ಪೆಡ್ನೇಕರ್​ ಹೇಳಿದ್ದಾರೆ.

‘ಬೆಡ್​ ಸಿಗುವುದಕ್ಕೂ ಮುನ್ನ ಆಸ್ಪತ್ರೆಯ ಎದುರು ಕಾಯುತ್ತಿರುವ ಸೋಂಕಿತರಿಗೆ ನಮ್ಮ ಬಸ್​ಗಳಿಂದ ಸಹಾಯ ಆಗುತ್ತದೆ. ಅದರಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಅಳವಡಿಸಿರುತ್ತೇವೆ. ಈ ಕಾರ್ಯದಲ್ಲಿ ಕಪಿಲ್ ಶರ್ಮಾ ಕೈ ಜೋಡಿಸಿರುವುದು ಸಂತಸದ ವಿಚಾರ’ ಎಂದಿದ್ದಾರೆ ಭೂಮಿ. ಇತ್ತೀಚೆಗೆ ನಟ ಸೋನು ಸೂದ್​ ಅವರು ಬೆಂಗಳೂರಿನ 5 ಸಾವಿರ ಜನರಿಗೆ ಪ್ರತಿ ದಿನ ಊಟ ಒದಗಿಸುವ ಕಾರ್ಯ ಆರಂಭಿಸಿದರು. ಸೂದ್​ ಚಾರಿಟಿ ಫೌಂಡೇಷನ್​ ಕಡೆಯಿಂದ ಈ ಕಾರ್ಯ ನಡೆಯುತ್ತಿದೆ.

ಇದಕ್ಕೆ ‘ಫುಡ್​ ಫ್ರಮ್​ ಸೂದ್​’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಹಾಗೂ ಕರ್ನಾಟಕ ರಾಜ್ಯ, ರೈಲ್ವೇ ಪೊಲೀಸರು ಸಾಥ್ ನೀಡಿದ್ದಾರೆ. ಸೂದ್​ ಚಾರಿಟಿ ಫೌಂಡೇಷನ್ ಸ್ವಯಂ ಸೇವಕರ ಈ ಕೆಲಸಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಮಾಲೀಕ ಇಬ್ರಾಹಿಂ ಕೈ ಜೋಡಿಸಿದ್ದಾರೆ. ಪ್ರತಿ ದಿನ 5 ಸಾವಿರ ಜನರಿಗೆ ಉಡುಗೆ ಮಾಡಲು ಇಬ್ರಾಹಿಂ ಅವರು ಉಚಿತವಾಗಿ ತಮ್ಮ ರೆಸ್ಟೊರೆಂಟ್​ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ:

Sonu Sood: ಸೋನು ಸೂದ್​ ಕಾಲಿಗೆ ಬೀಳಲು ಮುಂದಾದ ಜನ; ಕೈ ಮುಗಿದು ದೊಡ್ಡವರಾದ ರಿಯಲ್​ ಹೀರೋ

Sonu Sood: ಸೋನು ಸೂದ್​ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು