ತನ್ನ ಜೀವನಗಾಥೆಯನ್ನು ಸಿನಿಮಾ ಮಾಡಲು 45 ಕೋಟಿ ರೂ. ಪಡೆದ ಧೋನಿ; ಸುಶಾಂತ್ ಸಿಂಗ್ ಸಂಭಾವನೆಗಿಂತ ಮಾಹಿ ಮ್ಯಾನೇಜರ್ಗೇ ಹೆಚ್ಚು ಹಣ!
ಧೋನಿ ಪಾತ್ರ ನಿರ್ವಹಿಸಿದ ಸುಶಾಂತ್ ಸಿಂಗ್ ರಜಪೂತ್ಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಅಚ್ಚರಿಯ ವಿಷಯ ಎಂದರೆ ಸಿನಿಮಾದ ಮುಖ್ಯ ಪಾತ್ರಧಾರಿ ಸುಶಾಂತ್ ಸಿಂಗ್ಗಿಂತಲೂ ಅಧಿಕ ಮೊತ್ತ ಧೋನಿಯ ಮ್ಯಾನೇಜರ್ ಪಾಲಾಗಿದೆಯಂತೆ.
ಭಾರತೀಯ ಕ್ರಿಕೆಟ್ನಲ್ಲಿ ಎಂ.ಎಸ್.ಧೋನಿ ನಿಸ್ಸಂದೇಹವಾಗಿ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಧೋನಿ ಎಂಬ ಒಂದೇ ಒಂದು ಹೆಸರಿಗಿರುವ ಅಭಿಮಾನಿಗಳ ಸಂಖ್ಯೆಯೇ ಅವರ ಸಾಧನೆಗೆ ಕೈಗನ್ನಡಿ. 2007ರಿಂದ 2016ರ ತನಕ ಭಾರತದ ಕ್ರಿಕೆಟ್ ತಂಡವನ್ನು ಅವರು ಎಲ್ಲಾ ಪ್ರಕಾರದ ಪಂದ್ಯಗಳಲ್ಲೂ ಮೆರೆಸಿದ ಪರಿ ಅದ್ಭುತವಾದದ್ದು. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಸಿಡಿಸಿದ ಸಿಕ್ಸರ್ ತಂಡವನ್ನು ಗೆಲ್ಲಿಸಿದ್ದಷ್ಟೇ ಅಲ್ಲದೇ ಅವರ ಹೆಸರನ್ನೂ ಇತಿಹಾಸದ ಪುಟಗಳಲ್ಲಿ ಅಚ್ಚೊತ್ತುವಂತೆ ಮಾಡಿದೆ. ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಂಡು ಎಲ್ಲರ ಹೃದಯದಲ್ಲಿ ಬೆಚ್ಚಗಿನ ಸ್ಥಾನ ಪಡೆದ ಎಂ.ಎಸ್.ಧೋನಿ ಮೈದಾನಕ್ಕಷ್ಟೇ ಸೀಮಿತವಾಗಲಿಲ್ಲ ಎನ್ನುವುದೂ ಗಮನಾರ್ಹ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿಯನ್ನು ಅರಸಿಕೊಂಡು ಬಂದ ಪ್ರಖ್ಯಾತಿ ಅವರ ಬೇಡಿಕೆಯನ್ನು ಇತರೆ ರಂಗಗಳಲ್ಲೂ ಹೆಚ್ಚುವಂತೆ ಮಾಡಿತು. ಜಾಹೀರಾತು ಸಂಸ್ಥೆಗಳು, ಟಿವಿ ವಾಹಿನಿಗಳು ಧೋನಿಯನ್ನು ನೆಚ್ಚಿಕೊಂಡವು. ಧೋನಿ ಜನಪ್ರಿಯತೆ ಉತ್ತುಂಗಕ್ಕೆ ಹೋಗುವಷ್ಟರಲ್ಲಿ ಅವರ ಜೀವನಗಾಥೆಯ ಮೇಲೆ ಕಣ್ಣಿಟ್ಟಿದ್ದ ಬಾಲಿವುಡ್ ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಹೆಸರಿನಲ್ಲಿ ಸಿನಿಮಾ ನಿರ್ಮಿಸುವುದಕ್ಕೆ ಸಜ್ಜಾಗಿತ್ತು. ಅದರಂತೆಯೇ ಬಹು ನಿರೀಕ್ಷೆಯನ್ನು ಹುಟ್ಟುಹಾಕಿಸಿ 2016ರ ಸೆಪ್ಟೆಂಬರ್ನಲ್ಲಿ ತೆರೆಕಂಡ ಸಿನಿಮಾ ಧೋನಿಯ ಕತೆಯನ್ನು ಮತ್ತಷ್ಟು ಜನರಿಗೆ ತಲುಪಿಸಿತು.
ಧೋನಿಯ ಪಾತ್ರ ನಿರ್ವಹಿಸಿದ ಬಾಲಿವುಡ್ನ ಖ್ಯಾತ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್, ಸಾಕ್ಷಿ ಧೋನಿಯ ಪಾತ್ರ ನಿರ್ವಹಿಸಿದ ನಟಿ ಕಿಯಾರಾ ಅಡ್ವಾಣಿ ಈ ಸಿನಿಮಾ ಅತ್ಯಂತ ಸಹಜವೆಂಬಂತೆ ಮೂಡಿ ಬರುವಲ್ಲಿ ಕಾರಣರಾದರು. ಅಂದಹಾಗೆ ಇತ್ತೀಚೆಗೆ ಬಹಿರಂಗಗೊಂಡ ಕೆಲ ಮಾಹಿತಿಗಳ ಪ್ರಕಾರ ಈ ಸಿನಿಮಾಕ್ಕಾಗಿ ಧೋನಿಗೆ ದೊಡ್ಡ ಮೊತ್ತ ಪಾವತಿಯಾಗಿದೆಯಂತೆ. ತನ್ನ ಜೀವನಾಧಾರಿತ ಕತೆಯನ್ನು ಸಿನಿಮಾ ಮಾಡಲಿಕ್ಕಾಗಿ ಧೋನಿ ಪಡೆದಿದ್ದಾರೆ ಎನ್ನಲಾದ ಹಣದ ಮೊತ್ತ ಸದ್ಯ ಎಲ್ಲರ ಹುಬ್ಬೇರುವಂತೆ ಮಾಡಿದೆ.
ದಿ ಕ್ವಿಂಟ್ ಆನ್ಲೈನ್ ಮಾಧ್ಯಮ ಮಾಡಿರುವ ವರದಿ ಪ್ರಕಾರ ತಮ್ಮ ಜೀವನಗಾಥೆಯನ್ನು ಸಿನಿಮಾ ಮಾಡಲು ಧೋನಿ ಪಡೆದ ಮೊತ್ತ ಬರೋಬ್ಬರಿ 45 ಕೋಟಿ ರೂಪಾಯಿ! ಹೌದು, ಇದು ಅಚ್ಚರಿ ಎನಿಸುವ ಮೊತ್ತವಾದರೂ ಧೋನಿಯ ವೈಯಕ್ತಿಕ ಜೀವನ, ಅದಕ್ಕೆ ಸಂಬಂಧಿಸಿದ ದಾಖಲೆಗಳು, ಹಳೆಯ ಚಿತ್ರಗಳು ಜತೆಗೆ, ಸಿನಿಮಾದ ಪ್ರಚಾರ ಕಾರ್ಯ ಎಲ್ಲವೂ ಸೇರಿ 45 ಕೋಟಿ ರೂಪಾಯಿಯನ್ನು ಧೋನಿಗೆ ಪಾವತಿಸಲಾಗಿತ್ತು ಎಂಬ ಸುದ್ದಿ ಹೊರಬಿದ್ದಿದೆ. ಇದೇ ವೇಳೆ ಧೋನಿ ಪಾತ್ರ ನಿರ್ವಹಿಸಿದ ಸುಶಾಂತ್ ಸಿಂಗ್ ರಜಪೂತ್ಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು ಎನ್ನುವುದೂ ತಿಳಿದುಬಂದಿದೆ.
ಅಚ್ಚರಿಯ ವಿಷಯ ಎಂದರೆ ಸಿನಿಮಾದ ಮುಖ್ಯ ಪಾತ್ರಧಾರಿ ಸುಶಾಂತ್ ಸಿಂಗ್ಗಿಂತಲೂ ಅಧಿಕ ಮೊತ್ತ ಧೋನಿಯ ಮ್ಯಾನೇಜರ್ ಪಾಲಾಗಿದೆಯಂತೆ. ಧೋನಿಯ ವ್ಯಾವಹಾರಿಕ ಚಟುವಟಿಕೆಗಳನ್ನು ನೋಡಿಕೊಳ್ಳುವ ಮ್ಯಾನೇಜರ್ ಅರುಣ್ ಪಾಂಡೆ ಈ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದು, ಅವರಿಗೆ 5 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಸಿನಿಮಾ ತಂಡದ ಮೂಲಗಳು ಗುಟ್ಟು ಬಿಟ್ಟುಕೊಟ್ಟಿವೆ. ಕೆಲ ವರದಿಗಳ ಪ್ರಕಾರ ಸಿನಿಮಾ ನಿರ್ಮಾಣಕ್ಕಾಗಿ ನೂರಾರು ಕೋಟಿ ವ್ಯಯಿಸಲಾಗಿದ್ದು, ಅದರಲ್ಲಿ ಬಹುಪಾಲು ಮೊತ್ತ ಬಿಡುಗಡೆಗೂ ಮುನ್ನವೇ ನಿರ್ಮಾಪಕರಿಗೆ ಹಿಂದಿರುಗಿತ್ತಂತೆ. ಅದೇನೇ ಇದ್ದರೂ ತನ್ನ ಜೀವನಗಾಥೆಯನ್ನು ಸಿನಿಮಾ ಮಾಡಲಿಕ್ಕಾಗಿ ಧೋನಿ ಪಡೆದಿದ್ದಾರೆ ಎನ್ನಲಾದ ಮೊತ್ತ ಸದ್ಯ ಎಲ್ಲರನ್ನೂ ಅಚ್ಚರಿಗೆ ನೂಕಿರುವುದು ಸುಳ್ಳಲ್ಲ.
ಇದನ್ನೂ ಓದಿ: MS Dhoni: ಧೋನಿ ಇಷ್ಟರಲ್ಲೇ ಐಪಿಎಲ್ಗೆ ವಿದಾಯ! ಚೆನ್ನೈ ಇನ್ಮುಂದೆ ಮಹಿಗೆ ಹಣ ಹೂಡುವುದಿಲ್ಲ;ಆಕಾಶವಾಣಿ
ಭಾರತದ ಶೀಮಂತ ಕ್ರಿಕೆಟಿಗ ಯಾರು ಗೊತ್ತಾ? ಕೊಹ್ಲಿ, ಧೋನಿ, ಸಚಿನ್ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ