
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯಲು ಬಂದಿದೆ. ಮುಂದಿನ ಭಾನುವಾರ ಫಿನಾಲೆ ನಡೆದು ವಿನ್ನರ್ ಘೋಷಣೆ ಆಗಲಿದೆ. ಹಾಗಾಗಿ ಇಂದು (ಶನಿವಾರ) ಈ ಸೀಸನ್ನ ಕೊನೆಯ ವಾರದ ಪಂಚಾಯಿತಿ ಆಗಿತ್ತು. ಮನೆಯಲ್ಲಿ ಆರಂಭದಿಂದಲೂ ಇತರೆ ಸದಸ್ಯರಿಂದ ಅತಿ ಹೆಚ್ಚು ನಿಂದನೆಗೆ, ಟೀಕೆಗೆ, ಬೆನ್ನ ಹಿಂದಿನ ಮಾತಿಗೆ ಕಾರಣ ಆಗಿರುವುದು ಧ್ರುವಂತ್ ಮತ್ತು ಅಶ್ವಿನಿ. ಅದರಲ್ಲೂ ಧ್ರುವಂತ್ ಅವರನ್ನು ಇಡೀ ಮನೆಯ ಸದಸ್ಯರು ದ್ವೇಷಿಸುತ್ತಿದ್ದ ಸಮಯವೂ ಒಂದಿತ್ತು. ಆದರೆ ಈ ಸೀಸನ್ನ ಕೊನೆಯ ವಾರದ ಪಂಚಾಯಿತಿಯಲ್ಲಿ ಮರೆಯಲಾಗದ ಉಡುಗೊರೆ ಕೊಟ್ಟರು ಸುದೀಪ್.
ಪ್ರತಿ ವಾರ, ಆಯಾ ವಾರದಲ್ಲಿ ಯಾರು ಚೆನ್ನಾಗಿ ಆಡಿರುತ್ತಾರೊ ಅವರಿಗೆ ಸುದೀಪ್ ಅವರು ಚಪ್ಪಾಳೆ ನೀಡುತ್ತಾರೆ. ಯಾರು ಕಿಚ್ಚನ ಚಪ್ಪಾಳೆ ಪಡೆಯುತ್ತಾರೆ ಎಂಬುದು ಬಹಳ ಮಹತ್ವ ಪಡೆದುಕೊಳ್ಳುವ ವಿಷಯವಾಗಿದೆ. ಆದರೆ ಸುದೀಪ್ ಅವರು ಈ ಶನಿವಾರ, ಇಡೀ ಸೀಸನ್ನ ಪ್ರದರ್ಶನವನ್ನು ನೋಡಿ, ಸೀಸನ್ನ ಅತ್ಯುತ್ತಮ ಆಟಗಾರನಿಗೆ ಕಿಚ್ಚನ ಚಪ್ಪಾಳೆ ನೀಡಿದರು. ಸೀಸನ್ನ ಚಪ್ಪಾಳೆ ಪಡೆದವರು ಧ್ರುವಂತ್.
ಮನೆಯ ಎಲ್ಲ ಸದಸ್ಯರ ವಿರೋಧ ಕಟ್ಟಿಕೊಂಡು, ಒಂದು ಹಂತದಲ್ಲಂತೂ ಮನೆಯಿಂದಲೇ ಹೊರಗೆ ಹೋಗಿಬಿಡುತ್ತೇನೆ ಎಂದು ಕೂತಿದ್ದ. ಬಿಗ್ಬಾಸ್ ನನ್ನನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದೆಲ್ಲ ದೂರುಗಳನ್ನು ಹೇಳಿದ್ದ ಅದೇ ಧ್ರುವಂತ್, ತಮ್ಮ ಆಟ, ಹಠ, ಬದಲಾಗದೇ ಇರುವ ರೀತಿ, ತೆಗೆದುಕೊಂಡ ನಿಲವುಗಳು, ತಮ್ಮ ಅಭಿಪ್ರಾಯಕ್ಕೆ ಬದ್ಧವಾಗಿ ನಿಂತ ರೀತಿಗೆ ಇಡೀ ಸೀಸನ್ನ ‘ಕಿಚ್ಚನ ಚಪ್ಪಾಳೆ’ ಪಡೆದರು. ವಿಶೇಷವೆಂದರೆ ಧ್ರುವಂತ್ ಅವರನ್ನು ಬಹುವಾಗಿ ದ್ವೇಷಿಸುವ ರಕ್ಷಿತಾ ಅವರೇ ‘ಕಿಚ್ಚನ ಚಪ್ಪಾಳೆ’ ಫೋಟೊ ಅನ್ನು ಧ್ರುವಂತ್ಗೆ ನೀಡಿದರು. ಚಪ್ಪಾಳೆ ಪಡೆದ ಧ್ರುವಂತ್ ಬಹಳ ಭಾವುಕರಾಗಿಬಿಟ್ಟರು. ಅವರ ತಾಯಿಗೆ ಅದನ್ನು ಡೆಡಿಕೇಟ್ ಮಾಡಿದರು.
ಇನ್ನು ಅಶ್ವಿನಿ ಸಹ ಇಡೀ ಮನೆಯಲ್ಲಿ ಎಲ್ಲರೊಟ್ಟಿಗೆ ದ್ವೇಷ ಕಟ್ಟಿಕೊಂಡಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಬಹಳ ಕೆಟ್ಟದಾಗಿ, ಅಸಹ್ಯವಾಗಿ ಅಶ್ವಿನಿ ಅವರನ್ನು ಗೇಲಿ ಮಾಡಿ, ನಿಂದಿಸುತ್ತಲೇ ಇರುತ್ತಾರೆ. ತನಗಿಂತ ಅರ್ಧ ವಯಸ್ಸಿನ ರಾಶಿಕಾ, ಕಾವ್ಯಾ ಅವರುಗಳ ಬಳಿಯಿಂದಲೂ ಹೋಗೆ ಬಾರೆ ಎನಿಸಿಕೊಂಡಿದ್ದಾರೆ. ಆದರೆ ಛಲ ಬಿಡದೆ ಆಡುತ್ತಲೇ ಇದ್ದಾರೆ. ವಯಸ್ಸನ್ನು ಮರೆತು ಈ ವಾರ ಟಾಸ್ಕ್ಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲ ನಿಂದನೆಗಳನ್ನು ತಾಳ್ಮೆಯಿಂದ ಎದುರಿಸಿದ್ದಾರೆ. ಇಡೀ ಮನೆಯೇ ವಿರುದ್ಧ ನಿಂತು ಸವಾಲೆಸೆದರೂ ಸ್ವೀಕರಿಸಿ ಆಡಿದ ಅಶ್ವಿನಿ ಅವರಿಗೆ ಸುದೀಪ್ ಈ ವಾರದ ಕಿಚ್ಚನ ಚಪ್ಪಾಳೆ ನೀಡಿದರು. ಇದು ಈ ಸೀಸನ್ನ ಕೊನೆಯ ಕಿಚ್ಚನ ಚಪ್ಪಾಳೆ ಆಗಿತ್ತು.
ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್
ಈ ವಾರ ನಿಮ್ಮ ಹಠ, ಛಲ, ಫೋಕಸ್, ತಾಳ್ಮೆ, ನಿರ್ಧಾರ, ನಿಂದನೆಗಳನ್ನು ಎದುರಿಸಿದ ರೀತಿ ಅದ್ಭುತ, ಹೇಗೆ ಆಟ ಶುರು ಮಾಡ್ದ ಎಂಬುದಲ್ಲ, ಹೇಗೆ ಎಂಡ್ ಮಾಡಿದೆ ಎಂಬುದು ಮುಖ್ಯ. ಆರಂಭದಲ್ಲಿ ಅಹಂ ಸಹಜ, ಮಾತುಗಳು ಹೆಚ್ಚು ಕಡಿಮೆ ಆಗುವುದು ಸಹಜ. ಆದರೆ ಆ ನಂತರ ಗೇಮ್ ಅರ್ಥ ಮಾಡಿಕೊಳ್ಳೋದು, ಅಹಂ ಇಲ್ಲದೆ ಎಲ್ಲವನ್ನೂ ಸ್ವೀಕರಿಸೋದು. ಕೇವಲ ಗೇಮ್ ಮೇಲೆ ಫೋಕಸ್ ಬದಲಾಯಿಸಿದ್ದು, ಈ ವಾರ ನೀವು ಆಡಿದ ರೀತಿಯಂತೂ ಅದ್ಭುತ. ನಿಮ್ಮನ್ನು ಯಾರು ನಿಂದಿಸಿದ್ದರೊ ಅವರಿಂದಲೇ ಉತ್ತಮ ಪಡೆದಿರಿ, ಅವಮಾನ ಮಾಡಿದವರಿಂದಲೇ ಹೊಗಳಿಕೆ ಪಡೆದಿರಿ ಹಾಗಾಗಿ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ ಎಂದು ಸುದೀಪ್ ಚಪ್ಪಾಳೆ ತಟ್ಟಿದರು. ಅಶ್ವಿನಿ ಸಹ ಭಾವುಕರಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Sat, 10 January 26