ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿನಕ್ಕೊಂದು ರೋಚಕ ಟ್ವಿಸ್ಟ್ಗಳು ಸಿಗುತ್ತಿವೆ. ಈ ಮೂಲಕ ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಕೂಡ ಬಿಗ್ ಬಾಸ್ ಶಾಕ್ ನೀಡುತ್ತಿದ್ದಾರೆ. ಈ ವಾರ ಎಲಿಮಿನೇಷನ್ನಲ್ಲಿ ಯಾರ ಆಟ ಕೊನೆ ಆಗಬಹುದು ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ. ಅಷ್ಟರಲ್ಲೇ ಒಂದು ಅಚ್ಚರಿಯ ಸುದ್ದಿ ಕೇಳಿಬಂದಿದೆ. ನಟಿ ವೈಜಯಂತಿ ಅಡಿಗ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.
ಕೇವಲ ನಾಲ್ಕು ದಿನದ ಹಿಂದೆ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವರಿಗೆ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು. ಅವರ ಆಗಮನದಿಂದ ಮನೆಯಲ್ಲಿ ಹೆಚ್ಚೇನೂ ಬದಲಾವಣೆ ಆಗಿರಲಿಲ್ಲ. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದ ಅವರಿಗೆ ಈಗ ಗೇಟ್ ಪಾಸ್ ನೀಡಲಾಗಿದೆ.
ವೈಜಯಂತಿ ಅಡಿಗ ಅವರು ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿರಲಿಲ್ಲ. ಅವರು ಕೇವಲ ಅತಿಥಿಯಾಗಿ ಬಂದಿದ್ದರು ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. ಹಾಗಾಗಿ ಅವರು ಕೇವಲ ನಾಲ್ಕೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬರುವಂತಾಗಿದೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಮನೆಯೊಳಗಿನ ಇತರೆ ಸದಸ್ಯರಿಗೆ ಅಚ್ಚರಿ ಆಗಿದೆ. ಈ ಮನೆಯಲ್ಲಿ ಇರುವುದು ಕಷ್ಟ ಆಗುತ್ತದೆ ಎಂದು ಶನಿವಾರದ (ಏ.10) ಎಪಿಸೋಡ್ನಲ್ಲಿ ವೈಜಯಂತಿ ಹೇಳಿದ್ದರು.
ವೈಜಯಂತಿ ಮಾತ್ರವಲ್ಲದೆ ನಟಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ಪತ್ರಕರ್ತ ಚಕ್ರವತ್ರಿ ಚಂದ್ರಚೂಡ್ ಅವರು ಅವರು ಸಹ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಬಂದಿದ್ದರು. ಸದ್ಯ ಅವರು ಆಟ ಮುಂದುವರಿಸಿದ್ದಾರೆ. ಶಮಂತ್ ಬ್ರೋ ಗೌಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರಾಜೀವ್ ಈ ವಾರ ನಾಮಿನೇಟ್ ಆಗಿದ್ದರು. ಆ ಪೈಕಿ ಶನಿವಾರವೇ ನಿಧಿ ಸುಬ್ಬಯ್ಯ ಹಾಗೂ ಅರವಿಂದ್ ಸೇಫ್ ಆದರು. ಇನ್ನುಳಿದವರ ಕಥೆ ಏನಾಗಿದೆ ಎಂಬ ಕೌತುಕ ಮನೆ ಮಾಡಿದೆ.
ಇದನ್ನೂ ಓದಿ: ಇಲ್ಲಿ ಇರೋಕೆ ತುಂಬಾನೇ ಕಷ್ಟ ಆಗ್ತಿದೆ; ಎರಡೇ ದಿನಕ್ಕೆ ಸುಸ್ತಾದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
(Bigg Boss Kannada 8 Elimination: Vaijayanti Adiga reportedly gets eliminated from BBK8)