ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ನಡುವೆ ಪ್ರೀತಿ ಚಿಗುರಿದೆ ಎಂಬುದು ಬಹುತೇಕರ ಅಭಿಪ್ರಾಯ. ಅವರಿಬ್ಬರ ಮಧ್ಯೆ ಇರುವ ಆಪ್ತತೆ ನೋಡಿದರೆ ಎಂಥವರಿಗೂ ಈ ಅನುಮಾನ ಮೂಡುವುದು ಸಹಜ. ಅಷ್ಟೇ ಅಲ್ಲದೇ, ನಟಿ ಶುಭಾ ಪೂಂಜಾ ಅವರಂತೂ ಈ ವಿಚಾರವನ್ನು ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ. ಅದಕ್ಕೆ ಅರವಿಂದ್ ಕೂಡ ಹೂಂ ಎಂಬಂತೆ ತಲೆ ಅಲ್ಲಾಡಿಸಿದ್ದಾರೆ.
ದಿವ್ಯಾ-ಅರವಿಂದ್ಗೆ ಮದುವೆ ಮಾಡಿಸುವ ಬಗ್ಗೆ ಶುಭಾ ಆಸಕ್ತಿ ತೋರಿಸಿದ್ದಾರೆ. ‘ಈ ಮದುವೆಗೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ ಎಂದು ನಾನು ಅವಳಿಗೆ ಕೇಳಿದೆ. ಅವಳಿಗೆ ಇಷ್ಟ ಆದ್ರೆ ಮನೆಯವರು ಒಪ್ಪುತ್ತಾರಂತೆ. ಹಾಗಾದರೆ ಅರವಿಂದ್ಗೂ ಕೇಳು ಅಂತ ಹೇಳಿದ್ದೇನೆ. ಅದಕ್ಕೂ ಒಂದು ಟೈಮ್ ಬರತ್ತೆ ಎಂದು ದಿವ್ಯಾ ಹೇಳಿದಾಳೆ’ ಎಂದು ಅರವಿಂದ್ ಬಳಿ ಶುಭಾ ಪೂಂಜಾ ಶಂಕ ಊದಿದ್ದಾರೆ. ಆ ಮಾತಿಗೆ ಅರವಿಂದ್ ವಿರೋಧ ವ್ಯಕ್ತಪಡಿಸಿಲ್ಲ!
‘ನಿಮ್ಮಿಬ್ಬರಿಗೂ ನಾನು ಸಲಹೆ ನೀಡುವುದು ಏನೆಂದರೆ, ಬಿಗ್ ಬಾಸ್ ಮನೆಯೊಳಗೆ ನೀವು ಪರಸ್ಪರ ಇಷ್ಟಪಟ್ಟಿದ್ದರೂ ಸಹ, ಹೊರಗಡೆ ಹೋದ ಬಳಿಕ 4 ತಿಂಗಳು ಒಟ್ಟಿಗೆ ಕಳೆಯಿರಿ. ಯಾಕೆಂದರೆ ಇಲ್ಲಿ ವಾತಾವರಣ ಬೇರೆ ಇರುತ್ತದೆ. ದಿವ್ಯಾ ನಿನಗೆ ನಿಜಕ್ಕೂ ಇಷ್ಟ ಆಗಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ?’ ಎಂದು ಅರವಿಂದ್ಗೆ ಶುಭಾ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅರವಿಂದ್, ‘ಖಂಡಿತಾ ಒಪ್ಪಿಕೊಳ್ಳುತ್ತಾರೆ. ಅಂತಿಮವಾಗಿ ನಮಗೆ ಇಷ್ಟ ಆಗಿದೆ ಎಂಬುದು ಮುಖ್ಯವಾಗುತ್ತದೆ’ ಎಂದಿದ್ದಾರೆ.
ದಿವ್ಯಾ ಮತ್ತು ಅರವಿಂದ್ ತಂದೆ-ತಾಯಿ ಈ ಎಪಿಸೋಡ್ಗಳನ್ನು ನೋಡುತ್ತಿದ್ದಾರೆ. ಅವರ ತಲೆಯಲ್ಲಿ ಏನು ಓಡುತ್ತಿದೆಯೋ ಗೊತ್ತಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ದಿವ್ಯಾ ಇಮೇಜ್ಗೆ ಏನಾದರೂ ತೊಂದರೆ ಆಗಬಹುದಾ ಎಂಬುದನ್ನೂ ಅರವಿಂದ್ ಆಲೋಚಿಸಿದ್ದಾರೆ. ‘ನಾನು ಈ ಶೋ ಮುಗಿದ ಬಳಿಕ ಎಲ್ಲೋ ಇರುವವನು. ಆದರೆ, ಅವಳು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವಳು. ಅವಳಿಗೆ ಆಗಾಗ ಇದರ ಬಗ್ಗೆ ಪ್ರಶ್ನೆ ಎದುರಾಗುತ್ತದೆ’ ಎಂದು ಅರವಿಂದ್ ಹೇಳಿದ್ದಾರೆ.
ಬಿಗ್ ಬಾಸ್ 8ನೇ ಸೀಸನ್ ಆರಂಭವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಬ್ಬರ ನಡುವೆ ಮೂಡಿದ ಆಪ್ತತೆಗೆ ಪ್ರೀತಿ ಎಂದು ಕರೆಯುವುದು ಸರಿಯೋ ತಪ್ಪೋ ಎಂಬ ಬಗ್ಗೆ ಅರವಿಂದ್ಗೆ ಸ್ವಲ್ಪ ಗೊಂದಲ ಇದೆ. ‘ಬಿಗ್ ಬಾಸ್ ಮನೆಯಲ್ಲಿ ಇರುವವರಲ್ಲಿ ದಿವ್ಯಾ ನನಗೆ ಹೆಚ್ಚು ಇಷ್ಟ. ಕ್ಯೂಟ್ ಆಗಿದ್ದಾಳೆ. 25 ದಿನದಲ್ಲಿ ಏನು ಅಂತ ನಿರ್ಧಾರ ಮಾಡೋಕೆ ಆಗಲ್ಲ. ಮುಂದೆ ಏನೋ ಗೊತ್ತಿಲ್ಲ’ ಎಂದು ಅರವಿಂದ್ ಹೇಳಿದ್ದಾರೆ.
ಇದನ್ನೂ ಓದಿ: ದಿವ್ಯಾ ಸುರೇಶ್ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್!