ಬಿಗ್ ಬಾಸ್ ಮನೆಯಲ್ಲಿ ಐದನೇ ವಾರದ ಎಲಿಮಿನೇಷನ್ ಪೂರ್ಣಗೊಂಡಿದೆ. ಕಳೆದ ವಾರ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದ ಶಂಕರ್ ಅಶ್ವತ್ಥ್ ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ. ಅವರು ಮನೆಯಿಂದ ಹೊರಗೆ ಹೋಗೋಕೆ ಬಲವಾದ ಕಾರಣ ಕೂಡ ಇದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ಸ್ಪರ್ಧಿಗಳಲ್ಲಿ ಶಂಕರ್ ಅಶ್ವತ್ಥ್ ವಯಸ್ಸಿನಲ್ಲಿ ಹಿರಿಯರಾಗಿದ್ದರು. ಇದು ಅವರಿಗೆ ಲಾಭವಾಗಿತ್ತು. ಮನೆಯಲ್ಲಿ ಎಲ್ಲರೂ ಇವರನ್ನು ತಂದೆ ರೀತಿಯಲ್ಲಿ ನೋಡುತ್ತಿದ್ದರು. ಇದೇ ಭಾವನಾತ್ಮಕ ಅಂಶ ಶಂಕರ್ ಅವರು ಎರಡು ವಾರ ಎಲಿಮಿನೇಷ್ನಗೆ ನಾಮಿನೇಟ್ ಆಗುವುದನ್ನು ತಪ್ಪಿಸಿತ್ತು.
ಇತರ ಸ್ಪರ್ಧಿಗಳ ಜೊತೆಗೆ ವಯಸ್ಸಿನ ಅಂತರ ಇರುವುದರಿಂದ ಶಂಕರ್ ಅಶ್ವತ್ಥ್ ಅವರು ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಇದು ಅನೇಕ ಬಾರಿ ಸಾಬೀತಾಗಿದೆ. ಶಂಕರ್ ಒಮ್ಮೊಮ್ಮೆ ಅವರ ಪಾಡಿಗೆ ಅವರು ಇದ್ದುಬಿಡುತ್ತಿದ್ದರು. ಇನ್ನು, ಸತತ ಎರಡು ವಾರ ಶಂಕರ್ ಅಶ್ವತ್ಥ್ ಅವರು ಕಳಪೆ ಪ್ರದರ್ಶನ ನೀಡಿದರು. ಮನೆಯ ಎಲ್ಲ ಸದಸ್ಯರು ಅವರಿಗೆ ಕಳಪೆ ಹಣೆಪಟ್ಟಿ ನೀಡಿದ್ದರಿಂದ ಎರಡು ಬಾರಿ ಅವರು ಜೈಲಿಗೆ ಹೋಗಬೇಕಾಯಿತು.
ಟಾಸ್ಕ್ವೊಂದರಲ್ಲಿ ದಿವ್ಯಾ ಸುರೇಶ್ ಮತ್ತು ವೈಷ್ಣವಿ ನಡುವೆ ಪೈಪೋಟಿ ನಡೆಯುತ್ತಿತ್ತು. ಸ್ವಿಮಿಂಗ್ ಪೂಲ್ನಲ್ಲಿ ಇಬ್ಬರೂ ನಿಂತುಕೊಂಡಿರುವಾಗ ಆ ಆಟವನ್ನು ನಿಲ್ಲಿಸಲು ಶಂಕರ್ ಅಶ್ವತ್ಥ್ ಪೂಲ್ಗೆ ಹಾರಿ ವೈಷ್ಣವಿ ಅವರನ್ನು ಬೀಳಿಸಿದರು. ಅವರ ಈ ವರ್ತನೆಯಿಂದ ಅನೇಕರಿಗೆ ಬೇಸರ ಆಗಿತ್ತು. ಹೀಗಾಗಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಬರುವಾಗ, ಶಮಂತ್ ಉಳಿದುಕೊಂಡಿದ್ದು ಸರಿ ಇದೆ ಎಂದಿದ್ದಾರೆ.
ದಿನದಿಂದ ದಿನಕ್ಕೆ ಟಾಸ್ಕ್ಗಳ ಸ್ವರೂಪ ತೀವ್ರವಾಗುತ್ತಲೇ ಇದೆ. ವಯಸ್ಸಿನ ಕಾರಣದಿಂದ ಶಂಕರ್ ಅಶ್ವತ್ಥ್ ಅವರು ಟಾಸ್ಕ್ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಷ್ಟ ಆಗುತ್ತಿತ್ತು. ಇದು ಅನೇಕ ಬಾರಿ ಸಾಬೀತು ಕೂಡ ಆಗಿದೆ. ಸದ್ಯ 13 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಅವರ ಆಗಮನದಿಂದಾಗಿ ಮನೆಯ ವಾತಾವರಣದಲ್ಲಿ ಬದಲಾವಣೆ ಬಂದಿದೆ. ಸದ್ಯ ಕ್ಯಾಪ್ಟನ್ ಆಗಿ ಮಂಜು ಪಾವಗಡ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಐದನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇ
Published On - 10:23 pm, Sun, 4 April 21