
ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss OTT Kannada) ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಆಗಸ್ಟ್ 6 ರಂದು ನಡೆದ ಅದ್ಧೂರಿ ಕಾರ್ಯಕ್ರಮದ ಮೂಲಕ ಹೊಸ ಶೋಗೆ ಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್ (Kiccha Sudeep) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಒಟ್ಟು 16 ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಬಹುತೇಕರು ಹಿರಿತೆರೆ-ಕಿರುತೆರೆ ಮೂಲದವರಾಗಿದ್ದರೂ, ಅವರೆಲ್ಲರ ನಡುವೆ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ (Sonu Gowda) ಕೂಡ ಕಾಣಿಸಿಕೊಂಡಿರುವುದು ವಿಶೇಷ.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 2ನೇ ಸ್ಪರ್ಧಿಯಾಗಿ ಸೋನು ಗೌಡರನ್ನು ಸ್ವಾಗತಿಸಿದ್ದರು. ಆ ಬಳಿಕ ತಮ್ಮ ಹಿನ್ನೆಲೆ ಸೇರಿದಂತೆ ಹಲವು ವಿಚಾರಗಳನ್ನು ಸೋನು ಗೌಡ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಮೂಲತಃ ಮಂಡ್ಯದರಾದ ಸೋನು ಶ್ರೀನಿವಾಸ್ ಗೌಡ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೀರೋಯಿನ್ ಆಗಬೇಕೆಂಬ ಕನಸು ಹೊತ್ತುಕೊಂಡಿದ್ದ ಯುವ ಪ್ರತಿಭೆಯ ಕೈ ಹಿಡಿದದ್ದು ಟಿಕ್ ಟಾಕ್.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡ ಸೋನು ಗೌಡ ಸಿಕ್ಕಾಪಟ್ಟೆ ಫೇಮಸ್ ಆದರು. ಅದರ ಜೊತೆಗೆ ಟ್ರೋಲಿಗರಿಗೆ ಆಹಾರವಾದರು. ಇದರೊಂದಿಗೆ ಸೋನು ಗೌಡ ಅವರ ಜನಪ್ರಿಯತೆ ಕೂಡ ಮತ್ತಷ್ಟು ಹೆಚ್ಚಾಯಿತು. ಇದೀಗ ಈ ಜನಪ್ರಿಯತೆ ಅವರನ್ನು ಬಿಗ್ ಬಾಸ್ ಸ್ಪರ್ಧೆಯವರೆಗೆ ಕರೆತಂದಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ತನ್ನ ಅಸಲಿ ನಾಮಧೇಯವನ್ನು ಕೂಡ ಸೋನು ಗೌಡ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸೋನು ಗೌಡ, ನನ್ನ ನಿಜವಾದ ಹೆಸರು ಸೋನು ಅಲ್ಲ. ಶಾಂಭವಿ ಶ್ರೀನಿವಾಸ ಗೌಡ ಎಂಬುದು ನನ್ನ ಒರಿಜಿನಲ್ ಹೆಸರು. ಈ ಹಿಂದೆ ಯಾರೋ ‘ಸೋನು’ ಅಂತ ಕರೆದಿದ್ದರು. ಈ ನಿಕ್ ನೇಮ್ ಇಷ್ಟವಾಗಿ ಆ ಬಳಿಕ ಅದನ್ನೇ ಇಟ್ಟುಕೊಂಡೆ.
ಸೋಷಿಯಲ್ ಮೀಡಿಯಾದಲ್ಲಿ ಶಾಂಭವಿ ಗೌಡ ಬದಲಾಗಿ ಸೋನು ಗೌಡ ಎಂದು ನೀಡಿದ್ದರಿಂದ ಅದೇ ಹೆಸರು ಫೇಮಸ್ ಆಯಿತು. ಇದೀಗ ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲೂ ಕೂಡ ಸೋನು ಗೌಡ ಆಗಿಯೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಸೋಷಿಯಲ್ ಮೀಡಿಯಾ ಸ್ಟಾರ್ ಶಾಂಭವಿ ಶ್ರೀನಿವಾಸ್ ಗೌಡ.
ಸೋನು ಗೌಡ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ನಂದಿನಿ, ಜಸ್ವಂತ್ ಬೋಪಣ್ಣ, ಅರ್ಜುನ್ ರಮೇಶ್ ಮತ್ತು ಜಯಶ್ರೀ ಆರಾಧ್ಯ ಕಾಣಿಸಿಕೊಂಡಿದ್ದಾರೆ.