ಬಿಗ್ ಬಾಸ್ ಒಟಿಟಿ ಕನ್ನಡ (Bigg Boss OTT Kannada) ರಿಲಿಯಾಟಿ ಶೋಗೆ ಅದ್ಧೂರಿ ಚಾಲನೆ ದೊರೆತಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (Kiccha Sudeep) 16 ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸ್ಪರ್ಧಿಗಳಲ್ಲಿ ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೆ, 2ನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಕಾಣಿಸಿಕೊಂಡರು. ಇನ್ನುಳಿದಂತೆ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ನಂದಿನಿ, ಜಸ್ವಂತ್ ಬೋಪಣ್ಣ, ಅರ್ಜುನ್ ರಮೇಶ್ ಮತ್ತು ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ನೂರು ದಿನಗಳ ಕಾಲ ನಡೆಯುವ ಬಿಗ್ ಬಾಸ್ ರಿಯಾಲಿಟಿ ಶೋ ಒಟಿಟಿಯಲ್ಲಿ ಕೇವಲ 42 ದಿನಗಳವರೆಗೆ ಮಾತ್ರ ಇರಲಿದೆ. ಅಂದರೆ ಇದು ಮಿನಿ ಬಿಗ್ ಬಾಸ್ ಶೋ ಎನ್ನಬಹುದು. ಅಲ್ಲದೆ ಈ ಕಾರ್ಯಕ್ರಮದ ಸಂಪೂರ್ಣ ಪ್ರಸಾರ ವೂಟ್ ಆ್ಯಪ್ನಲ್ಲಿ 24 ಗಂಟೆ ಇರಲಿರುವುದು ವಿಶೇಷ.
ಅಷ್ಟೇ ಅಲ್ಲದೆ 16 ಸ್ಪರ್ಧಿಗಳಲ್ಲಿ ಐದು ಸ್ಪರ್ಧಿಗಳು ಫೈನಲ್ಗೆ ಪ್ರವೇಶಿಸಲಿದ್ದಾರೆ. ಇವರಲ್ಲಿ ವಿನ್ನರ್ನನ್ನು ಆಯ್ಕೆ ಮಾಡಲಾಗುತ್ತದೆಯಾದರೂ, ಉಳಿದ 4 ಮಂದಿ ಹೊರಬೀಳುವುದಿಲ್ಲ ಎಂಬುದೇ ಇಲ್ಲಿ ವಿಶೇಷ. ಅಂದರೆ ಫೈನಲ್ ಸುತ್ತಿಗೆ ಪ್ರವೇಶಿಸುವ 5 ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9 ಗೆ ನೇರ ಎಂಟ್ರಿ ಪಡೆಯಲಿದ್ದಾರೆ. ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋ ಮುಕ್ತಾಯದ ಬಳಿಕವಷ್ಟೇ ಟಿವಿಯಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದೆ. ಈ ಶೋನಲ್ಲಿ ಎಂದಿನಂತೆ 16 ಸ್ಪರ್ಧಿಗಳು, ವೈಲ್ಡ್ ಕಾರ್ಡ್ ಎಂಟ್ರಿ ಇರಲಿದೆ. ಇದರ ಜೊತೆಗೆ ಬಿಗ್ ಬಾಸ್ ಒಟಿಟಿಯಲ್ಲಿ ಟಾಪ್ 5 ಬರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೀಸನ್ 9 ಗೆ ನೇರ ಪ್ರವೇಶ ಸಿಗಲಿದೆ.
ಹೀಗಾಗಿ ಬಿಗ್ ಬಾಸ್ ಕನ್ನಡ OTT ಸೀಸನ್ 1 ರಲ್ಲಿ ಇರುವ ಸ್ಪರ್ಧಿಗಳಿಗೆ ಇದು ಬಿಗ್ ಬಾಸ್ ಸೀಸನ್ 9 ಗೆ ಅವಕಾಶ ಪಡೆಯಲು ಸಿಕ್ಕಿರುವ ಉತ್ತಮ ವೇದಿಕೆ. ಹೀಗಾಗಿ 16 ಸ್ಪರ್ಧಿಗಳ ನಡುವೆ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು. ಸದ್ಯ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಬಣ್ಣದ ಲೋಕದ ಹಿನ್ನೆಲೆಯಿಂದ ಆಯ್ಕೆಯಾಗಿದ್ದು, ಇದಾಗ್ಯೂ ಡಿಜಿಟಲ್ ಶೋ ಜನರನ್ನು ಸೆಳೆಯಲು ವಿಫಲರಾದರೆ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹೊಸ ಸ್ಪರ್ಧಿಗಳು ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.