ಪದ್ಮ ವಿಭೂಷಣ ನೀಡಿ ಮೆಗಾಸ್ಟಾರ್ ಚಿರಂಜೀವಿಗೆ ಗಾಳ ಹಾಕಲಾಯಿತೇ?

|

Updated on: Jan 30, 2024 | 3:25 PM

Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರು ರಾಜಕೀಯದಿಂದ ಹಿಂದೆ ಸರಿದು ಕೆಲ ವರ್ಷಗಳೇ ಆಗಿವೆ. ಆದರೆ ಇದೀಗ ಅವರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಯೋಜನೆ ನಡೆಯುತ್ತಿದೆ.

ಪದ್ಮ ವಿಭೂಷಣ ನೀಡಿ ಮೆಗಾಸ್ಟಾರ್ ಚಿರಂಜೀವಿಗೆ ಗಾಳ ಹಾಕಲಾಯಿತೇ?
Follow us on

ಕೆಲವು ದಿನಗಳ ಹಿಂದಷ್ಟೆ ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆಯಾಯ್ತು. ಭಾರತದಲ್ಲಿ ನೀಡಲಾಗುವ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿ ಇದು. ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಟ ಚಿರಂಜೀವಿ ಅವರು ಮತ್ತೆ ರಾಜಕೀಯಕ್ಕೆ ಕಾಲಿರಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವರಂತೂ ಈ ಪ್ರಶಸ್ತಿ ಘೋಷಣೆಯ ಹಿಂದೆಯೂ ರಾಜಕೀಯ ಲೆಕ್ಕಾಚಾರವೇ ಇದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹೆಚ್ಚು ಗಮನಹರಿಸಿರುವ ಬಿಜೆಪಿ, ಆಂಧ್ರ ಹಾಗೂ ತೆಲಂಗಾಣದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಿನಿಮಾ ಮಂದಿಯ ಮೊರೆ ಹೋಗಿದೆ. ಇದೀಗ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಘೋಷಣೆ ಆಗಿರುವ ಬೆನ್ನಲ್ಲೆ ಬಿಜೆಪಿಯು ಚಿರಂಜೀವಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಈಗಾಗಲೇ ಈ ಬಗ್ಗೆ ಚಿರಂಜೀವಿ ಬಳಿ ಪ್ರಸ್ತಾಪ ಮಾಡಿದೆ ಎನ್ನಲಾಗುತ್ತಿದೆ.

ಉತ್ತರ ಪ್ರದೇಶದ ಮೂಲಕ ನಟ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಕಲಾ ಕೋಟಾದಲ್ಲಿ ರಾಜ್ಯಸಭಾ ಸದಸ್ಯರಾಗಿ ಸಂಸತ್​ಗೆ ಕಳಿಸುವ ಆ ಮೂಲಕ ಆಂಧ್ರ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಚಿರಂಜೀವಿ ಅವರ ನೆರವನ್ನು ಪಡೆಯುವ ದೂರಾಲೋಚನೆಯನ್ನು ಬಿಜೆಪಿ ಮಾಡಿದೆ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ, ಧನ್ಯವಾದ ಹೇಳಿದ ನಟ

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ರಾಜಕೀಯ ಹೊಸದಲ್ಲ. ಭಾರಿ ದೊಡ್ಡ ಕನಸು ಹೊತ್ತುಕೊಂಡು ಸ್ವಂತ ಪಕ್ಷ ಸ್ಥಾಪನೆ ಮಾಡಿದ್ದರು ಚಿರಂಜೀವಿ ಆದರೆ ಆ ಪಕ್ಷ ನಡೆಸಲಾಗದೆ ಅದನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದರು. ಸ್ವತಃ ಸಂಸದರೂ ಆಗಿದ್ದರು. ಬಳಿಕ, ಆಂಧ್ರ-ತೆಲಂಗಾಣ ವಿಭಜನೆ ವೇಳೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಾದ ಬಳಿಕ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಸಹೋದರ ಪವನ್ ಕಲ್ಯಾಣ್​ ರಾಜಕೀಯ ಪಕ್ಷ ಸ್ಥಾಪಿಸಿದ್ದರೂ ಸಹ ಅದರ ಜೊತೆಗೂ ಅವರು ಗುರುತಿಸಿಕೊಂಡಿಲ್ಲ. ವಿವಿಧ ಪಕ್ಷಗಳಿಂದ ಚಿರಂಜೀವಿ ಅವರಿಗೆ ಭಾರಿ ಬೇಡಿಕೆ ಇದೆ.

ಈಗ ಬಿಜೆಪಿ ಏನಾದರೂ ಚಿರಂಜೀವಿ ಅವರನ್ನು ತಮ್ಮತ್ತ ಸೆಳೆಯಲು ಸಫಲವಾದರೆ, ಬಿಜೆಪಿಗೆ ನೇರ ಪ್ರಯೋಜನದ ಜೊತೆಗೆ, ಅವರ ಸಹೋದರ ಪವನ್ ಕಲ್ಯಾಣ್​ರ ರಾಜಕೀಯ ಪಕ್ಷದ ಬಲವನ್ನು ಕುಗ್ಗಿಸಿದಂತಾಗುತ್ತದೆ. ಪವನ್ ಕಲ್ಯಾಣ್ ಜೊತೆಗೂಡಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಕ್ಕೂ ಹೊಡೆತ ಉಂಟಾಗುತ್ತದೆ. ಬಿಜೆಪಿಯ ಆಫರ್ ಅನ್ನು ಚಿರಂಜೀವಿ ಒಪ್ಪಿಕೊಳ್ಳುತ್ತಾರೆಯೇ ಕಾದು ನೋಡಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ