ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ, ಧನ್ಯವಾದ ಹೇಳಿದ ನಟ
Padma Awards 2024: ಕೇಂದ್ರ ಸರ್ಕಾರವು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ನಟ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಗೌರವ ಲಭಿಸಿದೆ.
ನಿನ್ನೆ (ಜನವರಿ 25) ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳ ಘೋಷಣೆ ಮಾಡಿದೆ. ಕಲೆ, ಸಾಹಿತ್ಯ, ಕೃಷಿ, ಸಮಾಜ ಸೇವೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮನೊರಂಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೆಲವರನ್ನು ಈ ಬಾರಿ ವಿವಿಧ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದ್ದು ದಕ್ಷಿಣ ಭಾರತದ ಅದರಲ್ಲಿಯೂ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಎಂದೇ ಖ್ಯಾತರಾಗಿರುವ ನಟ ಚಿರಂಜೀವಿ (Megastar Chiranjeevi) ಅವರಿಗೆ ಪದ್ಮ ವಿಭೂಷಣ ಗೌರವ ನೀಡಲಾಗಿದೆ.
150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಪದ್ಮ ವಿಭೂಷಣ ಗೌರವ ದೊರಕಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿರುವ ಚಿರಂಜೀವಿ, ಗೌರವಕ್ಕೆ ಅರ್ಹನೆಂದು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
‘ಭಾರತದ ಎರಡನೇ ಅತಿದೊಡ್ಡ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ ಧಕ್ಕಿದ ವಿಷಯ ತಿಳಿದಾಗ ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ನನ್ನನ್ನು ನಿಮ್ಮ ಸಹೋದರ, ನಿಮ್ಮ ಮನೆ ಮಗ ಎಂದು ಭಾವಿಸಿರುವ ಕೋಟ್ಯಾಂತರ ಮಂದಿ ಜನರ ಆಶೀರ್ವಾದ. ನನ್ನ ಸಿನಿ ಕುಟುಂಬದ ಹಾರೈಕೆಗಳು. ನನ್ನ ನೆರಳಿನಂತೆ ನನ್ನ ಜೊತೆಗೆ ನಡೆಯುತ್ತಿರುವ ಲಕ್ಷಾಂತರ ಮಂದಿ ಅಭಿಮಾನಿಗಳಿಂದಲೇ ನಾನು ಇಂದು ಈ ಸ್ಥಿತಿಯಲ್ಲಿ ಇರಲು ಸಾಧ್ಯವಾಗಿದೆ. ಈಗ ನನಗೆ ಧಕ್ಕಿರುವ ಗೌರವ ಅದು ನನ್ನದಲ್ಲ ನಿಮ್ಮದು’ ಎಂದಿದ್ದಾರೆ ಚಿರಂಜೀವಿ.
ಇದನ್ನೂ ಓದಿ:ಚಿರಂಜೀವಿ ನಟನೆಯ 156ನೇ ಸಿನಿಮಾಕ್ಕೆ ಹೆಸರು ಸಿಕ್ಕಿತು
ಮುಂದುವರೆದು, ‘ನಿಮ್ಮ ಈ ಪ್ರೀತಿ, ಗೌರವಕ್ಕೆ ನಾನು ಏನು ಕೊಟ್ಟರೂ ಋಣ ತೀರಿಸಿಕೊಳ್ಳಲಾರೆ. ನನ್ನ 45 ವರ್ಷ ಸಿನಿಮಾ ವೃತ್ತಿ ಬದುಕಿನಲ್ಲಿ ವಿವಿಧ ಪಾತ್ರಗಳ ಮೂಲಕ ಸಾಧ್ಯವಾದಷ್ಟು ನಿಮ್ಮನ್ನು ರಂಜಿಸಲು ಪ್ರಯತ್ನಿಸಿದ್ದೀನಿ. ನಿಜ ಬದುಕಿನಲ್ಲಿ ನನ್ನ ಸುತ್ತಲೂ ಇರುವ ಸಮಾಜದಲ್ಲಿ ನನ್ನ ಅವಶ್ಯಕತೆ ಇದ್ದಾಗೆಲ್ಲ ಸಹಾಯ ಮಾಡುತ್ತಲೇ ಬಂದಿದ್ದೀನಿ. ಆದರೂ ನೀವು ನನ್ನ ಮೇಲೆ ತೋರಿಸಿರುವ ಅಭಿಮಾನಕ್ಕೆ ಹೋಲಿಸಿದರೆ ನಾನು ಮಾಡುತ್ತಿರುವುದು ತೃಣಮಾತ್ರವಷ್ಟೆ’ ಎಂದಿದ್ದಾರೆ.
‘ನನ್ನನ್ನು ಈ ಪ್ರತಿಷ್ಠೆಯ ಪದ್ಮ ವಿಭೂಷಣ ಪ್ರಶಸ್ತಿಗೆ ಅರ್ಹನೆಂದು ಭಾವಿಸಿದ ಕೇಂದ್ರ ಸರ್ಕಾರಕ್ಕೆ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಜೈ ಹಿಂದ್’ ಎಂದಿದ್ದಾರೆ ಚಿರಂಜೀವಿ.
ಚಿರಂಜೀವಿ ಮಾತ್ರವೇ ಅಲ್ಲದೆ, ಕಲಾ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಲವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್, ದಿವಂಗತ ನಟ, ರಾಜಕಾರಣಿ ವಿಜಯ್ಕಾಂತ್ ಇನ್ನೂ ಕೆಲವರಿಗೆ ಈ ಬಾರಿ ಪದ್ಮ ಪ್ರಶಸ್ತಿಗಳು ದೊರಕಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ