ಹೊಸ ವರ್ಷವನ್ನು ಬಾಲಿವುಡ್ ಸೆಲೆಬ್ರಿಟಿಗಳು ಬಹಳ ಅದ್ದೂರಿಯಿಂದಲೇ ಸ್ವಾಗತಿಸಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲೇ ವಿದೇಶಗಳಿಗೆ ಪ್ರಯಾಣ ಮಾಡಿರುವ ಸೆಲೆಬ್ರಿಟಿಗಳು ಮಾಲ್ಡೀವ್ಸ್, ಸಿಂಗಾಪುರ್, ಆಸ್ಟ್ರೇಲಿಯಾ ಹೀಗೆ ಬೇರೆ ಬೇರೆ ದೇಶಗಳಲ್ಲಿ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೆಲೆಬ್ರಿಟಿಗಳು ನ್ಯೂ ಇಯರ್ ಆಚರಿಸುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರ ಹುಟ್ಟುಹಬ್ಬವನ್ನು ಆಚರಿಸಲು ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ಮಾಲ್ಡೀವ್ಸ್‌ಗೆ ತೆರಳಿದ್ದರು. ಮಾಲ್ಡೀವ್ಸ್‌ನಲ್ಲಿ ಹೆಂಡತಿಯೊಂದಿಗೆ ಎಂಜಾಯ್ ಮಾಡುತ್ತಿರುವ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಮಾಲ್ಡೀವ್ಸ್ನ ಸಮುದ್ರತೀರದಲ್ಲಿ ನಿಂತುಕೊಂಡು ಇಂದು ಬೆಳಿಗ್ಗೆ ಗಾಯತ್ರಿ ಮಂತ್ರವನ್ನು ಪಠಿಸುವ ವಿಡಿಯೋವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದವರು ಆಶ್ಚರ್ಯಗೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಕ್ಷಯ್ ಕುಮಾರ್ ಹಂಚಿಕೊಂಡ ವಿಡಿಯೋದಲ್ಲಿ ಅಕ್ಷಯ್ 2022 ಅನ್ನು ಆಧ್ಯಾತ್ಮಿಕತೆಯ ಸ್ಪರ್ಶದೊಂದಿಗೆ ಸ್ವಾಗತಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಐಷಾರಾಮಿ ರೆಸಾರ್ಟ್ನಲ್ಲಿ ನಿಂತುಕೊಂಡು ಸೂರ್ಯನನ್ನು ನೋಡುತ್ತಾ ಗಾಯತ್ರಿ ಮಂತ್ರವನ್ನು ಪಠಿಸಿದ್ದಾರೆ.
ಅಕ್ಷಯ್ ಕುಮಾರ್ ಅವರ ಹಿಂದಿನಿಂದ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಸುಂದರವಾದ ಸೂರ್ಯೋದಯದ ಸಂದರ್ಭದಲ್ಲಿ ಗಾಯತ್ರಿ ಮಂತ್ರ ಪಠಿಸುವ ಮೂಲಕ ಅಕ್ಷಯ್ ಕುಮಾರ್ ಹೊಸ ವರ್ಷವನ್ನು ತಮ್ಮದೇ ಸ್ಟೈಲ್ನಲ್ಲಿ ಸ್ವಾಗತಿಸಿದ್ದಾರೆ. ಹಾಗೇ, ಅಭಿಮಾನಿಗಳಿಗೆ ಮಾಲ್ಡೀವ್ಸ್ನಿಂದ ಕಳುಹಿಸಿರುವ ಸಂದೇಶದಲ್ಲಿ ನಾನು ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
“ವರ್ಷ ಹೊಸದಾದರೂ ನಾನು ಮಾತ್ರ ಹಳಬ. ಬೆಳಗ್ಗೆ ಎಚ್ಚರಗೊಂಡು ನನ್ನ ಹಳೆಯ ಸ್ನೇಹಿತನಾದ ಸೂರ್ಯನನ್ನು ಸ್ವಾಗತಿಸಿದೆ. ಕೊವಿಡ್ ಹೊರತುಪಡಿಸಿ ಎಲ್ಲರ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುವ ಮೂಲಕ ನನ್ನ 2022 ಅನ್ನು ಆರಂಭಿಸಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು!” ಎಂದು ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
2021ರಲ್ಲಿ ಅಕ್ಷಯ್ ಕುಮಾರ್ ಅವರ ಮೂರು ದೊಡ್ಡ ಸಿನಿಮಾಗಳು ರಿಲೀಸ್ ಆಗಿತ್ತು. ಭಾರತದ ಅಪರೂಪದ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್ ಮತ್ತು ಸೂರ್ಯವಂಶಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ, ಅವರ ಇತ್ತೀಚಿನ ಚಿತ್ರ ಅತ್ರಾಂಗಿ ರೇ OTTಯಲ್ಲಿ ಬಿಡುಗಡೆಯಾಗಿತ್ತು. 2022ರಲ್ಲೂ ಅಕ್ಷಯ್ ಕುಮಾರ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲಿವೆ.
ಇದನ್ನೂ ಓದಿ: New Year 2022: ಕಲರ್ಫುಲ್ ಡೂಡಲ್ ಮೂಲಕ ಹೊಸ ವರ್ಷ ಸ್ವಾಗತಿಸಿದ ಗೂಗಲ್