
57ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ವಿಭಾಗಗಳಾದ ‘ಇಂಡಿಯನ್ ಪನೋರಮಾ’ ಮತ್ತು ‘ಬ್ರಿಕ್ಸ್’ ವಿಭಾಗಗಳ ಉದ್ಘಾಟನಾ ಚಿತ್ರಗಳು ಘೋಷಣೆಯಾಗಿವೆ. ಇಂಡಿಯನ್ ಪನೋರಮಾ ವಿಭಾಗವು ಬಾಲಿವುಡ್‌ನ ಜನಪ್ರಿಯ ಸಿನಿಮಾ ‘ಧುರಂಧರ್’ ಪ್ರದರ್ಶನದೊಂದಿಗೆ ಆರಂಭವಾದರೆ, ಬ್ರಿಕ್ಸ್ ದೇಶಗಳ ಸಿನಿಮಾಗಳ ವಿಶೇಷ ವಿಭಾಗವು ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಚಿತ್ರದೊಂದಿಗೆ ಉದ್ಘಾಟನೆಯಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್, ಆಯ್ಕೆ ಸಮಿತಿ ಮತ್ತು ತೀರ್ಪುಗಾರರು ಈ ಚಿತ್ರಗಳನ್ನು ಆಯಾ ವಿಭಾಗಗಳ ಆರಂಭಿಕ ಸಿನಿಮಾಗಳಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ‘ಇಂಡಿಯನ್ ಪನೋರಮಾದ ಫೀಚರ್ ಫಿಲ್ಮ್ ವಿಭಾಗದಲ್ಲಿ ‘ಧುರಂಧರ್’ ಮೊದಲ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಹಾಗೆಯೇ ಲಡಾಖಿ ಭಾಷೆಯ ‘ಬಿಕಮಿಂಗ್’ ಚಿತ್ರವು ನಾನ್-ಫೀಚರ್ ಫಿಲ್ಮ್ ವಿಭಾಗವನ್ನು ಉದ್ಘಾಟಿಸಲಿದೆ’ ಎಂದು ಅವರು ಮಾಹಿತಿ ನೀಡಿದರು.
IFFI ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಇಂಡಿಯನ್ ಪನೋರಮಾ ವಿಭಾಗವು ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಹಿನಿಯಿಂದ ಹೊರಗಿರುವ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ಬಾರಿ ಈ ವಿಭಾಗದಲ್ಲಿ 25 ಫೀಚರ್ ಫಿಲ್ಮ್‌ಗಳು ಮತ್ತು 20 ನಾನ್-ಫೀಚರ್ ಫಿಲ್ಮ್‌ಗಳು ಪ್ರದರ್ಶನಗೊಳ್ಳಲಿವೆ.
ಚಿತ್ರೋತ್ಸವದ ನಿರ್ದೇಶಕರಾಗಿ ನೇಮಕಗೊಂಡಿರುವ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಮಾತನಾಡಿ, ಈ ವರ್ಷದ ಚಿತ್ರೋತ್ಸವವನ್ನು ‘ಗಡಿಗಳಿಲ್ಲದ ಕಥೆಗಳು’ ಎಂಬ ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು. ‘ಇಂದು ಗಡಿಗಳು ಕೇವಲ ಭೂಪಟದ ಮೇಲಿನ ಗೆರೆಗಳಾಗಿ ಉಳಿದಿಲ್ಲ, ಅವು ನಮ್ಮ ಅಭ್ಯಾಸಗಳೂ ಆಗಿವೆ. ಪಾಸ್‌ಪೋರ್ಟ್ ಇಲ್ಲದೆಯೇ ಇಂತಹ ಗಡಿಗಳನ್ನು ದಾಟಬಲ್ಲ ಕೆಲವೇ ಕೆಲವು ಸಂಗತಿಗಳಲ್ಲಿ ಕಥೆಯೂ ಒಂದು. ಸಿನಿಮಾ ಮಾಡುವ ಅತ್ಯುತ್ತಮ ಕೆಲಸವೇ ಅದು’ ಎಂದು ಗೋವಾರಿಕರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’: ಯಶ್ ಹೊಸ ದಾಖಲೆ
ದಿನಾಂಕ ಮತ್ತು ಉದ್ಘಾಟನಾ ಚಿತ್ರ: ನವೆಂಬರ್ 20ರಿಂದ 28ರವರೆಗೆ ನಡೆಯಲಿರುವ ಈ ಚಿತ್ರೋತ್ಸವವು ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ 2026ರ ಪೋಲಿಷ್ ಭಾಷೆಯ ಬಯೋಗ್ರಾಫಿಕಲ್ ಸಿನಿಮಾ ‘ಫಾದರ್‌ಲ್ಯಾಂಡ್’ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಸಿಂಗಾಪುರದ ‘ವಿ ಆರ್ ಆಲ್ ಸ್ಟ್ರೇಂಜರ್ಸ್’ ಸಮಾರೋಪ ಚಿತ್ರವಾಗಿರಲಿದೆ.
ಭಾಗವಹಿಸುವ ಸಿನಿಮಾಗಳು: 137 ದೇಶಗಳಿಂದ ಬಂದಿದ್ದ 1,900 ಅರ್ಜಿಗಳಲ್ಲಿ, ಒಟ್ಟು 87 ದೇಶಗಳ 159 ಅಂತಾರಾಷ್ಟ್ರೀಯ ಸಿನಿಮಾಗಳು ಮತ್ತು 18 ವಿವಿಧ ಭಾಷೆಗಳ 76 ಭಾರತೀಯ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ವಿಶೇಷ ದೇಶಗಳು: ಈ ಬಾರಿ ಸ್ಪೇನ್ ದೇಶಕ್ಕೆ ‘ಕಂಟ್ರಿ ಆಫ್ ಆನರ್’ ಗೌರವ ನೀಡಲಾಗಿದ್ದು, ಸ್ಪೇನ್‌ನ 4 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ಪಾಲುದಾರ ದೇಶವಾಗಿದ್ದು, ಅಲ್ಲಿನ 4 ವಿಶೇಷ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.
ಎರಡು ಹೊಸ ವಿಭಾಗಗಳು: ಸಿನಿಮಾ ಪ್ರೇಮಿಗಳಿಗೆ ವಿಭಿನ್ನ ಅನುಭವ ನೀಡಲು ಈ ಬಾರಿ ‘ಅನಿಮೇಷನ್’ ಮತ್ತು ‘ಫಿಲ್ಮ್ಸ್ ಅಬೌಟ್ ಫಿಲ್ಮ್ಸ್’ ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ತಲಾ 5 ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.